ಶಹಾಬಾದ: ಒಂದಾನೊಂದು ಕಾಲದಲ್ಲಿ ನಗರದ ಜನತೆಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುತ್ತಿದ್ದ ನಗರದ ಹೃದಯ ಭಾಗದಲ್ಲಿರುವ ಅಜನಿ ಹಳ್ಳ, ಇದೀಗ ಶಾಪವಾಗಿ ಪರಿಣಮಿಸಿದೆ.
ತನ್ನ ಒಡಲಲ್ಲಿ ಮಲೇರಿಯಾ, ಕಾಮಾಲೆ, ಟೈಫಡ್‌ದಂತಹ ಸಾಂಕ್ರಾಮಿಕ ರೋಗಗಳನ್ನು ತುಂಬಿಕೊಂಡಿದೆ.ಅಲ್ಲದೇ ಸೊಳ್ಳೆಗಳನ್ನು ಉತ್ಪಾದನೆ ಮಾಡುವ ಕೇಂದ್ರವಾಗಿ ಬಿಟ್ಟಿದೆ. ೧೯೭೨ ರ ಬರಗಾಲದ ಸಮಯದಲ್ಲಿ ನಗರದ ಜನತೆಗೆ ನೀರಿಲ್ಲದಿದ್ದಾಗ ಇದೇ ಹಳ್ಳದ ನೀರು ಇಲ್ಲಿನ ಜನರಿಗೆ ವರದಾನವಾಗಿತ್ತು.
ಆದರೆ ಇಂದು ಈ ಹಳ್ಳ ಸಾಕಷ್ಟು ಹೂಳು ತುಂಬಿಕೊಂಡಿದ್ದು ಸ್ವಚ್ಛತೆಯಿಲ್ಲದೇ ಕೊಳಚೆ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಎಲ್ಲಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಕಸಕಡ್ಡಿ,ಮಣ್ಣು, ಪ್ಲಾಸ್ಟಿಕ್‌ಗಳಿಂದ ತುಂಬಿ ಹೋಗಿದೆ.ಹಳ್ಳದ ಸುತ್ತ ಮುತ್ತ ಜೇಕು ಬೆಳೆದಿದೆ. ಹಳ್ಳದ ಸ್ಥಳವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವುದರಿಂದ ಹಳ್ಳ ಕಿರಿದಾಗುತ್ತಿದೆ. ಆದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸೊಳ್ಳೆಗಳ ಹಾವಳಿ : ತಲೆನೋವು: ನಗರದ ಎಲ್ಲಾ ವಾರ್ಡಗಳಲ್ಲಿನ ಕೊಳಚೆ ನೀರು ಗಟಾರದ ಮೂಲಕ ಈ ಹಳ್ಳಕ್ಕೆ ಬಂದು ಸೇರುತ್ತದೆ. ಇಲ್ಲಿನ ಸಾರ್ವಜನಿಕರು ಸಹ ಮನೆಯಲ್ಲಿ ಬಳಕೆ ಮಾಡಿದ ಪೂಜಾ ಸಾಮಗ್ರಿಗಳನ್ನು ಇಲ್ಲಿಯೇ ತಂದು ಎಸೆಯುತ್ತಿರುವುದರಿಂದ ಹಳ್ಳ ಸಂಪೂರ್ಣ ಹೂಳು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತಿದೆ. ಇದೇ ನೀರು ಸಮೀಪದ ಕಾಗಿಣಾ ನದಿಗೆ ಹೋಗಿ ಸೇರಿ ನದಿಯನ್ನು ಕಲುಷಿತಗೊಳಿಸುತ್ತಿದೆ.
ಇದೇ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಆಗುತ್ತಿರುವುದರಿಂದ ಅನೇಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ.ಪ್ರತಿದಿನ ಇಲ್ಲಿನ ಸಾರ್ವಜನಿಕರಿಗೆ ಗಬ್ಬೆದ್ದು ನಾರುತ್ತಿರುವ ವಾತಾವರಣ ಹಾಗೂ ಗಬ್ಬು ವಾಸನೆ ಸಹಿಸುವುದೇ ತಲೆ ನೋವಾಗಿದೆ. ಈ ಸಂಬಂಧ ನಗರಸಭೆಯವರಿಗೆ ಸಾಕಷ್ಟು ಬಾರಿ ಮನವಿಗಳನ್ನು ನೀಡುವ ಮೂಲಕ ಜನರು ಸೋತು ಹೋಗಿದ್ದಾರೆ. ಹಳ್ಳದ ಸುತ್ತಮುತ್ತಲೇ ನೂರಾರು ಕುಟುಂಬಗಳು ವಾಸಿಸುತ್ತಿರುವುದರಿಂದ ಈ ಹಳ್ಳದ ಸಮಸ್ಯೆ ಯಾವಾದ ಬಗೆಹರಿಯುತ್ತದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹೂಳೆತ್ತಲು ಮನವಿ : ಹಳ್ಳದಲ್ಲಿ ಕೊಳಚೆ ಹೆಚ್ಚಿದ್ದರಿಂದ ಸದ್ಯ ಈ ಪ್ರದೇಶದಲ್ಲಿ ಸಾರ್ವಜನಿಕರು ವಾಸಿಸುವುದೇ ಕಷ್ಟಕರವಾಗಿದೆ.ಜತೆಗೆ ವ್ಯಾಪಕ ಪ್ರಮಾಣದಲ್ಲಿ ಸೊಳ್ಳೆಗಳು ಹೆಚ್ಚಿದ್ದು, ಸಾರ್ವಜನಿಕರು ಆತಂಕಪಡುವಂತಾಗಿದೆ.ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸೊಳ್ಳೆಗಳನ್ನು ನಿಯಂತ್ರಿಸಲು ಶಿಘ್ರವೇ ಹಳ್ಳವನ್ನು ಹೂಳೆತ್ತಬೇಕು.ನೀರು ಸರಾಗವಾಗಿ ಹರಯುವಂತೆ ಮಾಡಬೇಕು.- ಅನ್ವರ ಪಾಶಾ ನಸರೋದ್ದಿನ್ ಕಾಂಗ್ರೆಸ್ ಮುಖಂಡ