ಕಲಬುರಗಿ: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ದಶರಥ್ ರಾಠೋಡ್ ಅವರ ನೇತೃತ್ವದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಶಿಕ್ಷಣವು ಎಲ್ಲರಿಗೂ ಸಿಗಬೇಕಾದದ್ದು. ಇದರಲ್ಲಿ ಜಾತಿ, ಮತ, ಪಂಥ ಬೇಧಗಳಿಲ್ಲ. ಆದಾಗ್ಯೂ, ೨೦೧೮-೨೦೧೯ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟರು ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರೂ ಸಹ ಈಗಲೂ ಸಹ ಅದು ಜಾರಿಯಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ರೈತಾಪಿ ಕುಟುಂಬಗಳು ಸಂಕಷ್ಟದಲ್ಲಿವೆ. ಖಾಸಗಿ ಕಾಲೇಜುಗಳ ಹಾವಳಿ, ಶಿಕ್ಷಣವು ಮಾರಾಟವಾಗುವ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ದಿನಗಳಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿ ಬಸ್ ಪಾಸ್ ಪಡೆಯುತ್ತಿದ್ದಾರೆ. ಆದ್ದರಿಂದ ಎಲ್ಲರಿಗೂ ಉಚಿತ ಬಸ್ ಪಾಸ್ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದಿಂದ ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಿದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ. ಕಳೆದ ವರ್ಷವೂ ಸಹ ಹಣವಿಲ್ಲವೆಂಬ ನೆಪವೊಡ್ಡಿ ವಿದ್ಯಾರ್ಥಿಗಳ ಬೇಡಿಕೆಯನ್ನು ನಿರ್ಲಕ್ಷಿಸಲಾಯಿತು. ಈ ವರ್ಷವೂ ಬೇಡಿಕೆಯನ್ನು ಮೂಲೆಗುಂಪು ಮಾಡಲಾಗಿದೆ. ಕೇವಲ ಅಧಿಕಾರ ಉಳಿಸಿಕೊಳ್ಳುವ ಯೋಚನೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಕೂಗು ಕೇಳಿಸಬೇಕು. ಕೂಡಲೇ ಎಲ್ಲ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.