ಕಲಬುರಗಿ : ಕೆಪಿಎಸ್ಸಿ ಸ್ವಚ್ಛಗೊಳಿಸಿ, ಹಾಲಿ ಅನರ್ಹ ಅಧ್ಯಕ್ಷರನ್ನು ಕೂಡಲೇ ವಜಾಗೊಳಿಸಲು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ(AIUYSC) ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ನಿಯಮ ಉಲ್ಲಂಘಿಸಿ, ಕಾನೂನು ಬಾಹಿರ ವಾಗಿ ಸಂವಿಧಾನದ 316ನೇ ವಿಧಿಯ ಸೆಕ್ಷನ್ 1ರ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿರುವುದು ಖಂಡನೀಯ ಎಂದರು.
ಈ ರೀತಿ ನಿಯಮ ಉಲ್ಲಂಘನೆ ಮಾಡಿ ನೇಮಿಸಿರುವುದು ಮತ್ತಷ್ಟು ಅಕ್ರಮಗಳು ನಡೆಯಲು ದಾರಿ ಮಾಡಿಕೊಟ್ಟಂತಾಗುತ್ತದೆ.
ಎಫ್ ಡಿ ಸಿ, ಎಸ್ ಡಿ ಸಿ, ಪೊಲೀಸ್ ಪ್ರಶ್ನೆ ಪತ್ರಿಕೆಗಳ ಸೋರಿಕೆ, ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುತ್ತಿರುವುದು ಸರಿಯಲ್ಲ ಎಂದು ದೂರಿದರು .
ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳು ಹಗಲು-ರಾತ್ರಿ ಅಧ್ಯಯನ ನಡೆಸಿ ತರಬೇತಿ ಪಡೆದು ಉದ್ಯೋಗ ಪಡೆಯಲು ಹರಸಾಹಸ ಪಡುತ್ತಾರೆ.ಆದರೆ ಕೆಪಿಎಸ್ಸಿಯಲ್ಲಿ ಇಂತಹ ಅಕ್ರಮಗಳಿಂದಾಗಿ ಪ್ರಮಾಣಿಕರು ಮತ್ತು ಪ್ರತಿಭಾವಂತರು ನೇಮಕಾತಿಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕೆಪಿಎಸ್ಸಿ ಸ್ವಚ್ಛಗೊಳಿಸಿ ಎಂದು ಆಗ್ರಹಿಸುವಂತಾಗಿದೆ.
ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸದರಿ ಅಧ್ಯಕ್ಷರ ಮೇಲಿನ ಆರೋಪದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ ನೇಮಕಾತಿ ಉಲ್ಲಂಘನೆ ಸಾಬೀತಾದರೆ ಸದರಿ ಅಧ್ಯಕ್ಷರನ್ನು ಆ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು ಮತ್ತು ಕೆಪಿಎಸ್ಸಿಯಲ್ಲಿ ಎಲ್ಲಾ ರೀತಿಯ ಅಕ್ರಮಗಳನ್ನು ತಡೆಗಟ್ಟಬೇಕೆಂದು ಸಮಿತಿಯು ಆಗ್ರಹಿಸುತ್ತದೆ.
ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಸಂಚಾಲಕ ಭೀಮಾಶಂಕರ ಪಾಣೇಗಾಂವ್, ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಎಸ್. ಎಚ್. ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಿತಿ ಪ್ರಮುಖ ರಾದ ಸಿದ್ದು ಚೌದ್ರಿ, ತಿಮ್ಮಯ್ಯ ಮಾನೆ ನೀಲಕಂಠ ಹುಲಿ,ಸತೀಶ ಪಟ್ಟಣ, ಪುಟ್ಟರಾಜ ಲಿಂಗ ಶೆಟ್ಟಿ,ಹಾಗೂ ಉದ್ಯೋಗಾಕಾಂಕ್ಷಿಗಳಾದ
ಶ್ರೀಧರ್ ಪಾಟೀಲ್,ಸಿದ್ದು ಜಮಾದಾರ್,ಶಿವು ಅನಶೆಟ್ಟಿ, ಸುನಿಲ್ ಸಂಗೊಳಗಿ, ರಾಹುಲ್ ಜಮಾದಾರ್, ರಮೇಶ್ ಮಂಗಳೂರು,ಪ್ರವೀಣ್ ಮಾನೆ ಸೇರಿದಂತೆ ಹಲವರು ಇದ್ದರು.