ಆಳಂದ: ಜನರ ಜೀವನ ಸುಧಾರಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಜನಕಲ್ಯಾಣದ ಜೊತೆಗೆ ದೇಶದ ಕಲ್ಯಾಣವು ಆಗಲಿದೆ ಎಂದು ಮಾದನ ಹಿಪ್ಪರ್ಗಾದ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಮಾದನಹಿಪ್ಪರ್ಗಾ ಗ್ರಾಮದ ಶರಣ ಶಿವಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸೋಮವಾರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕಾ ಆಡಳಿತದ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಯೋಜನೆಗಳ ಮಾಹಿತಿ ಜಾಗೃತಿ ಅಭಿಯಾನ, ಕೊರೋನಾ ಅರಿವು ನೆರವು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮುದಾಯದ ಅಭಿವೃದ್ಧಿಗಾಗಿ ನಿರಂತರ ಕಾರ್ಯಕ್ರಮಗಳು ನಡೆಯಬೇಕು ಅಂದಾಗ ಮಾತ್ರ ಸಾಮಾಜಿಕ ವ್ಯವಸ್ಥೆಯ ಚಲನಶೀಲತೆ ಅರಿವಿಗೆ ಬರುತ್ತದೆ. ಜನ ಸಾಮಾನ್ಯರಿಗೆ ಸೂಕ್ತ ಮಾಹಿತಿಯ ಕೊರತೆಯಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಜನತೆ ಸ್ವಯಂ ಪ್ರೇರಿತರಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯುವಂತಾಗಬೇಕು ಎಂದು ಹೇಳಿದರು.
ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆಗಳು, ಚಿಂತನೆಗಳು ಕಾಲ ಕಾಲಕ್ಕೆ ನಡೆಯಬೇಕು ಹೀಗಾದಾಗ ಮಾತ್ರ ಸ್ವಸ್ಥ ಸಮಾಜದ ಕನಸು ನನಸಾಗುತ್ತದೆ ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳು, ಜನಪರ ಚಿಂತಕರು, ಹೋರಾಟಗಾರರು ಪರಸ್ಪರ ಒಬ್ಬರಿಗೊಬ್ಬರು ಕೈಜೋಡಿಸಿಕೊಂಡು ಮುಂದುವರೆಯಬೇಕು ಎಂದು ಕರೆ ನೀಡಿದರು.
ಸಮ್ಮುಖ ವಹಿಸಿದ್ದ ಗುರು ಶಾಂತೇಶ್ವರ ಹಿರೇಮಠದ ಶಾಂತವೀರ ಶಿವಾಚಾರ್ಯರು ಮಾತನಾಡಿ. ಸರ್ಕಾರದ ಯೋಜನೆಗಳು ಕನ್ನಡಿಯೊಳಗಿನ ಗಂಟಾಗಿರಬಾರದು ಅವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಅಂದಾಗ ಮಾತ್ರ ಯೋಜನೆಯ ಉದ್ದೇಶ ಸಫಲವಾಗುತ್ತದೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಘಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.
ಪುಸಕ್ತ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಮಾತನಾಡಿ, ಜನರ ಬದುಕು ಸುಧಾರಣೆಗಾಗಿಯೇ ಸರ್ಕಾರಗಳು ಅನೇಕ ಯೋಜನೆಗಳು ಜಾರಿಗೆ ತರುತ್ತವೆ ಅವುಗಳ ಸಂಪೂರ್ಣ ಲಾಭಕ್ಕಾಗಿ ಜನತೆ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಬೇಕು ಎಂದು ನುಡಿದರು.
ಸಿಡಿಪಿಒ ಶಿವಮೂರ್ತಿ ಕುಂಬಾರ ಅವರು, ಬೀದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಭಾಗ್ಯಲಕ್ಷ್ಮೀ ಬಾಂಡ್‌ನು ಸುಕನ್ಯ ಸಮೃದ್ಧಿ ಯೋಜನೆಗೆ ವರ್ಗವಾಗಿದ್ದು, ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಯಂತ ಸೌಲಭ್ಯಗಳ ಲಾಭವನ್ನು ಪಡೆಯಬೇಕು. ಮಾಹಿತಿ ಬೇಕಾದಲ್ಲಿ ಇಲಾಖೆಗೆ ಸಂಪರ್ಕಿಸಬೇಕು ಎಂದರು. ರೇಷ್ಮೆ ತಾಲೂಕು ಅಧಿಕಾರಿ ಡಿ.ಬಿ. ಪಾಟೀಲ ಅವರು ರೇಷ್ಮೆ ಬೆಳೆ ಉತ್ಪಾದನೆಗೆ ಅದಕ್ಕೆ ಸರ್ಕಾರದ ಸಹಾಧನ ಹಾಗೂ ಬೆಳೆ ಉತ್ಪಾದನೆ ಇಳುವರಿ ಹಾಗೂ ಮಾರಾಟದ ಕುರಿತು ವಿವರಿಸಿದರು.
ಗ್ರಾಮ ಲೇಖಪಾಲಕ ಸುಭಾಷ ಪಾಟೀಲ ಅವರು, ರಾಷ್ಟ್ರೀಯ ಭದ್ರತಾ ಯೋಜನೆ, ಅಂತ್ಯಸಂಸ್ಕಾರ ಸೇರಿ ಕಂದಾಯ ಇಲಾಖೆಯ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯುವಂತೆ ಹೇಳಿದರು. ಜೆಸ್ಕಾಂ ಇಂಜಿನಿಯರ್ ಪರಮೇಶ್ವರ ಅವರು, ಬಡವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ದಿನದಯಾಳು ಉಪಾಧ್ಯಯ ಯೋಜನೆ ಲಾಭಪಡೆಯಬೇಕು. ಪಂಪಸೆಟ್ ಅಥವಾ ಗ್ರಾಮ ವಿದ್ಯುತ್ ಸಂಪರ್ಕದ ಟ್ರಾನ್ಸಫಾರಂ ಸುಟ್ಟರೆ ತಕ್ಷಣವೇ ದುರುಸ್ಥಿ ಹಾಗೂ ಸಕಾಲಕ್ಕೆ ವಿದ್ಯುತ್ ಸಂಪರ್ಕ ಸೇವೆ ಒದಗಿಸಲಾಗುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಎಇಇ ಗುರುದೇವ ಕಳಸ್ಕರ್, ಲಿಂಗರಾಜ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ ಯಲ್ಲಶೆಟ್ಟಿ, ಕೃಷಿ ಅಧಿಕಾರಿ ಸಾಕ್ಷಿ ಅಲ್ಮದ್, ವಿಎ ವಿನೋಧ, ರವಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಧೇಯೋದ್ಧೇಶ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಗಡೆ, ಪತ್ರಕರ್ತ ಜಗದೀಶ ಕೋರೆ, ಮುಖಂಡ ಬಸವರಾಜ ಶಾಸ್ತ್ರೀ, ಬಸವರಾಜ ಕೊರಳ್ಳಿ, ಮಹಾಂತೇಶ ಸಣ್ಣಮನಿ, ಕಂದಾಯ ನಿರೀಕ್ಷ ರಾಜಕುಮಾರ ಸರಸಂಬಿ, ಮತ್ತಿತರು ಆಗಮಿಸಿದ್ದರು. ಶಿವಲೀಲಾ ಮತ್ತು ಶಿವಲಿಂಗಮ್ಮ ಪ್ರಾರ್ಥನೆ ಗೀತೆ ಹಾಡಿದರು. ಹಣಮಂತ ಶೇರಿ ನಿರೂಪಿಸಿ ವಂದಿಸಿದರು.