ಕಲಬುರಗಿ: ಸೆಪ್ಟೆಂಬರ್ 3 ರಂದು ನಡೆಯಲಿರುವ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬುಧವಾರ ನಗರದ ವಿಜಯಾ ವಿದ್ಯಾಲಯ ಮೈದಾನದಲ್ಲಿ ಆಯೋಜಿಸಿದ ಪ್ಯಾರಾ ಮೋಟರ್ (ಪ್ಯಾರಾ ಗ್ಲೈಡಿಂಗ್) ಹಾರಾಟ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ದಿಲೀಷ್ ಶಶಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ಮತದಾನ ಮಾಡುವ ಮೂಲಕ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಮೂಲಕ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬೇಕು ಮತ್ತು ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಸಹ ಒಂದು ಸುತ್ತು ಪ್ಯಾರಾ ಗ್ಲೈಡಿಂಗ್ ಮಾಡಿ ಮಾತನಾಡಿದ ಅವರು, ನಗರದ ಅಭಿವೃದ್ಧಿಗಾಗಿ ಗರಿಷ್ಠ ಮಟ್ಟದಲ್ಲಿ ಮಹಾ ಜನತೆ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಡಿ.ಕೆ.ರಾಜರತ್ನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹೇಶ್ ಪಾಟೀಲ, ಪ್ಯಾರಾ ಮೋಟರ್ ಪೈಲೆಟ್ ಸಿದ್ಧಾರ್ಥ ಮತ್ತಿತರ ಅಧಿಕಾರಿಗಳು ಇದ್ದರು.