ಕಲಬುರಗಿ: ಪಾಲಿಕೆ ಈ ಬಾರಿಯೂ ಕಾಂಗ್ರೆಸ್ ಮಡಿಲಿಗೆ ಇರಲಿದೆ, ಕಾಂಗ್ರೆಸ್ ಪಕ್ಷದ ಸರಕಾರ ಇದ್ದಾಗೆಲ್ಲಾ ಈ ಬಾಗಕ್ಕೆ, ಕಲಬುರಗಿಗೆ ಹೆಚ್ಚಿನ ಕೊಡುಗೆ ನೀಡಿದ್ದರಿಂದ ಮತದಾರರು ಅದನ್ನೆಲ್ಲ ನೆನಪಿನಲ್ಲಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಲಿದ್ದಾರೆ ಎಂದು ವಿದಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿದ್ದ ರೇಲ್ವೆ ವಿಭಾಗೀಯ ಕಚೇರಿ ಬಿಜೆಪಿ ರದ್ದು ಮಾಡಿದೆ. ಇದಕ್ಕೆ ಸಕಾರಣ ನೀಡಿಲ್ಲ, ಇನ್ನು ಮಂಜೂರಾಗಿದ್ದ ಜವಳಿ ಪಾರ್ಕ್, ಐಐಐಟಿ ಯೋಜನೆಗಳು ರದ್ದಾದವು. ಇಲ್ಲಿರುವ ಇಎಸ್‍ಐಸಿ ಮೇಲ್ದರ್ಜೆಗೇರಿಸಲಿಲ್ಲ, ದಶಕಗಳಿಂದ ಇಲ್ಲಿದ್ದಂತಹ ಮೊದಲ ದೂರ ದರ್ಶನ ಕೇಂದ್ರದ ಬಾಗಿಲು ಮುಚ್ಚಲಾಗಿದೆ. ಇದೆಲ್ಲವೂ ಬಿಜೆಪಿಯ ಸಾಧನೆ, ಕಾಂಗ್ರೆಸ್ ಹೊಸ ಯೋಜನೆ ನೀಡಿದರೂ ಬಿಜೆಪಿ ಅವುಗಳನ್ನೆಲ್ಲ ರದ್ದು ಮಾಡಿದೆ. ಈ ಭಾಗ ಸೌಲಭ್ಯ ವಂಚಿತವಾಗುವಂತೆ ಮಾಡುತ್ತಿದೆ.
ಕಲಂ 371 (ಜೆ) ಗೆ ನಾವೂ ಒಪ್ಪಿಗೆ ನೀಡಿ ಜಾರಿಗೆ ತಂದರೂ ಅದರಡಿಯಲ್ಲಿ ಸಿಗಬೇಕಾಗಿದ್ದಂತಹ ಶೈಕ್ಷಣಿಕ, ಆರ್ಥಿಕ, ಉದ್ಯೋಗದ ಸವಲತ್ತುಗಳು ನಮ್ಮವರಿಗೆ ಇಂದಿಗೂ ದಕ್ಕದಂತೆ ಮಾಡಲಾಗಿದೆ. ಬಡ್ತಿ, ನೇಮಕಾತಿಗಳಿಗೆ ಕೊಕ್ಕೆ ಹಾಕಲಾಗಿದೆ. ಇದೆಲ್ಲವೂ ಬಿಜೆಪಿ ಸರಕಾರದ ಕೊಡುಗೆಯಲ್ಲದೆ ಮತ್ತೇನು? ಇಂತಹ ಜನ ವಿರೋಧಿ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವುದು ಬೇಡ ಎಂದು ಜನರೇ ತೀರ್ಮಾನಿಸಿದ್ದು ಅದರಂತೆಯೇ ಮತ ನೀಇ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಿಸಲಿದ್ದಾರೆಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.