ಕಲಬುರಗಿ: ಇಲ್ಲಿನ ವಿದ್ಯಾನಗರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ರಥೋತ್ಸವ ಬಹು ವೈಭವದಿಂದ ನೆರವೇರಿತು. ರಥಕ್ಕೆ ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಕೋವಿಡ್ ಸುರಕ್ಷತೆ ನಿಯಮಗಳ ಅನ್ವಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬ್ರಹ್ಮಪುರ ಸತ್ಯಾತ್ಮ ಸೇನೆ ತಂಡವರಿಂದ ನಡೆದ ದಾಸರ ಪದಗಳ ತಾರತ್ಮೋಕ್ತ ಭಜನೆ ಭಕ್ತರ ಗಮನ ಸೆಳೆಯಿತು. ಭಕ್ತರು ಸೇರಿದ್ದವರೆಲ್ಲರು ಭಜನೆಯಲ್ಲಿ ಪಾಲ್ಗೊಂಡು ದಾಸರ ಪದಗಳಿಗೆ ಧ್ವನಿ ಗೂಡಿಸಿದರು. ಕೃಷ್ಣ ಜನ್ಮಾಷ್ಟಮಿ ನಿಮಿತ್ತ, ರಥೋತ್ಸವ, ತೊಟ್ಟಿಲು ಸೇವೆ, ಪಲ್ಲಕ್ಕಿ ಉತ್ಸವ, ಗೋಪಾಲ ಕಾವಲಿ ಎಲ್ಲ ಪದ್ಧತಿಗಳು ಬಲು ವೈಭವದಿಂದ ನಡೆದವು.
ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಎಬಿಎಂಎಂಎಂ ಅಧ್ಯಕ್ಷರಾದ ಡಾ. ಸುರೇಂದ್ರ ಸಿದ್ದಾಪೂರಕರ್, ಕಾರ್ಯದರ್ಶಿ ಡಾ. ಶ್ರೀನಿವಾಸ ಪದಕಿ, ಗುರುರಾಜಾಚಾರ್ಯಾ ನವಲಿ, ವ್ಯಾಸರಾಜ ಸಂತೇಕೆಲ್ಲೂರ್, ಆರ್ ಎಚ್ ರಾವ್, ಕಿಶೋರ ದೇಶಪಾಂಡೆ ಸೇರಿದಂತೆ ಸಮೀತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದು ಪಂಡಿತರಿಗೆ ಸನ್ಮಾನ, ಶ್ರೀ ಕೃಷ್ಣ ವೇಷ ಧರಿಸಿದ 3 ಮಕ್ಕಳಿಗೆ, ಬಹುಮಾನ ವಿತರಣೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡಿದ್ದರು.
ಎಬಿಎಂಎಂಎಂ ಕಲಬುರಗಿ ಘಟಕದಡಿಯಲ್ಲಿ ನಡೆಯುತ್ತಿರುವ ಜಯತೀರ್ಥ ವಿದ್ಯಾರ್ಥಿ ನಿಲಯದ ಎಲ್ಲಾ ವಿದ್ಯಾರ್ಥಿಗಳು, ವಿದ್ಯಾನಗರ ಸೇರಿದಂತೆ ನಗರದ ಎಲ್ಲಾ ಬಡಾವಮೆಗಳ ಜನತೆ ಕೃಷ್ಣ ಮಂದಿರಕ್ಕೆ ಆಗಮಿಸಿ ಕೋವಿಡ್ ನಿಯಮದಂತೆಯೇ ಎಲ್ಲಾ ಉತ್ಸವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೃಷ್ಣ ಪರಮಾತ್ಮನ ದರುಶನ ಹಾಗೂ ಆಶಿರ್ವಾದ ಪಡೆದುಕೊಂಡರು.