ಆಯ್ದಕ್ಕಿ ಮಾರಯ್ಯ ದಂಪತಿ: ಇವರು ರಾಯಚೂರು ಲಿಂಗಸುಗೂರು ತಾಲ್ಲೂಕು ಕೇಂದ್ರದಿಂದ ಈಶಾನ್ಯಕ್ಕೆ 15 ಕಿ.ಮೀ. ದೂರವಿರುವ ಗುಡಗುಂಟಿ ಗ್ರಾಮಕ್ಕೆ ಸೇರಿದವರು. ಅಮರೇಶ್ವರ ಇವರ ಆರಾಧ್ಯದೈವ. ಆಯ್ದಕ್ಕಿ ಮಾರಿ ಬದುಕಿ ದಾಸೋಹ ನಡೆಸುವ ಕಾಯಕ ಇವರದು. ಮಾರಯ್ಯನದು ಅಮರೇಶ್ವರಲಿಂಗ ಅಂಕಿತನಾಮವಾದರೆ ಲಕ್ಕಮ್ಮನದು ಮಾರಯ್ಯ ಪ್ರಿಯ ಅಮರೇೀಶ್ವರಲಿಂಗ ಎಂದಿದೆ. ಮಾರಯ್ಯನ 32, ಲಕ್ಕಮ್ಮನ 25 ವಚನಗಳು ಲಭ್ಯವಾಗಿವೆ.
ಗುಡಗುಂಟಿಯಲ್ಲಿ ಕೃಷಿ ಕಾಯಕ ಮಾಡುತ್ತಿದ್ದ ಇವರು ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಬಸವಕಲ್ಯಾಣಕ್ಕೆ ತೆರಳಿ ಅಲ್ಲಿ ಅಕ್ಕಿ ಆಯುವ ಕಾಯಕ ಮಾಡುತ್ತಿದ್ದರು ಎಂಬುದಕ್ಕೆ ಅವರ ವಚನಗಳಲ್ಲಿಯೇ ಸುಳಿವು ಸಿಗುತ್ತದೆ. ಹೀಗಿದ್ದ ವೇಳೆಯಲ್ಲಿ ಒಂದು ಬಾರಿ ಮಾರಯ್ಯ ಹೆಚ್ಚಿನ ಅಕ್ಕಿ ತಂದಾಗ ಅವುಗಳನ್ನು ಅಲ್ಲಿಯೇ ಕೊಟ್ಟು ಬಾ ಎಂದು ಲಕ್ಕಮ್ಮ ತಿಳಿಸುತ್ತಾಳೆ ಎನ್ನುವುದಕ್ಕೆ ಶೂನ್ಯ ಸಂಪಾದನೆಕಾರರು ಪ್ರಸಂಗವೊಂದನ್ನು ನಿರ್ಮಾಣ ಮಾಡುವ ಮೂಲಕ ಕಾಯಕದಲ್ಲಿ ನಿರತರಾದವರು ಗುರು ದರ್ಶನ, ಲಿಂಗ ಪೂಜೆ, ಜಂಗಮ ಮುಂದೆ ಬಂದು ನಿಂತರೆ ಆ ಕಡೆ ಗಮನ ಕೊಡಬಾರದು ಎಂಬ ಮಹತ್ವದ ಚಿಂತನೆಯನ್ನು ಹೇಳುತ್ತಾರೆ.
ಚಿಕ್ಕಯ್ಯ: ಕುಷ್ಟಗಿ ರಸ್ತೆಯ ಮೇಲೆ 7 ಕಿ. ಮೀ. ಅಂತರದಲ್ಲಿ ಉಳಿಯುಮೇಶ್ವರ ಗ್ರಾಮದಲ್ಲಿ ಚಿಕ್ಕಯ್ಯನೆಂಬ ಶರಣ ಇದ್ದ ಎಂಬುದು ತಿಳಿದು ಬರುತ್ತದೆ. ಗ್ರಾಮದ ಉಪ್ಪಾರ ಸಮಾಜದ ವ್ಯಕ್ತಿಯೊಬ್ಬರ ಹೊಲದಲ್ಲಿ ಈ ಹಿಂದೆ ಈಶ್ವರ ದೇವಾಲಯವಿತ್ತು. ಈಗ ಅದು ನಶಿಸಿ ಹೋಗಿದೆ.
ಕಾಂಪೌಂಡ್‍ಗೆ ಅಂಟಿದಂತೆ ಹುತ್ತ ಬೆಳೆದಿದೆ. ಈ ದೇವಾಲಯವನ್ನು ಅಲ್ಲಿನ ಜನ ಗುಡಿ ಕಣ ಎಂದು ಕರೆಯುತ್ತಾರೆ. ಸಿಂಧನೂರು ತಾಲ್ಲೂಕಿನ ದೇವರ ಗುಡಿಯಲ್ಲಿ ಚಿಕ್ಕಯ್ಯನೆಂಬ ಪಂಡಿತನಿದ್ದ ಆತನೇ ಈ ಶರಣ ಚಿಕ್ಕಯ್ಯ ಎಂದು ಡಾ. ಎಂ.ಎಂ. ಕಲ್ಬುರ್ಗಿ ಹೇಳಿದರೆ, ಡಾ. ಎಚ್. ಚಂದ್ರಶೇಖರ ಅವರು ಹಿರೇಹಳ್ಳದ ಪಿಕಳಿಹಾಳ ಗ್ರಾಮದ ಮಹಾಂತಪ್ಪನವರ ಹೊಲದಲ್ಲಿ ಹಾಳು ಬಿದ್ದ ಚಿಕ್ಕಯ್ಯನ ಗುಡಿಯಿದ್ದು, ಚಿಕ್ಕಯ್ಯನ ಸಮಾಧಿ, ಚಿಕ್ಕಯ್ಯನ ಕಟ್ಟೆ ಇತ್ಯಾದಿಗಳಿವೆ. ಹೀಗಾಗಿ ಚಿಕ್ಕಯ್ಯ ಪಿಕಳಿಹಾಳದವರು ಎಂದು ಹೇಳುತ್ತಾರೆ.
ಅಮುಗಿದೇವಯ್ಯ-ರಾಯಮ್ಮ: ಸೊಲ್ಲಾಪುರದಲ್ಲಿ ನೇಯ್ಗೆಯ ಕಾಯಕ ಮಾಡುತ್ತಿದ್ದ ಇವರು ಸಿದ್ದರಾಮ ಆಯೋಜಿಸಿದ್ದ ಮಲ್ಲಯ್ಯನ ಪರ್ವಕ್ಕೆ ಲಿಂಗವಿಲ್ಲದವರ ಧಾನ್ಯ ಕುಟ್ಟಿಕೊಡಲು ಒಪ್ಪುವುದಿಲ್ಲ. ಕುಪಿತಕೊಂಡ ಸಿದ್ಧರಾಮರು ಊರು ಬಿಡಲು ಹೇಳಿದಾಗ ಅಲ್ಲಿಂದ ಬಸವಕಲ್ಯಾಣಕ್ಕೆ ಬಂದರು. ಕಲ್ಯಾಣ ಕ್ರಾಂತಿಯ ನಂತರ ಮಹಾರಾಷ್ಟ್ರದ ಪುಳಜೆ ಕಡೆ ಹೊರಟು ಅಲ್ಲಿಯೇ ಐಕ್ಯರಾಗುತ್ತಾರೆ ಎಂಬ ಚರಿತ್ರೆ ಇವರ ಬಗೆಗಿದೆ.
ಪುಳಜೆಯಲ್ಲಿ ಬಂದಾಗ ಸಿದ್ಧಸೋಮೇಶ್ವರ ದೇವಾಲಯದಲ್ಲಿ ಉಳಿದುಕೊಳ್ಳುತ್ತಾರೆ. ಸಿದ್ಧ ಸೋಮನಾಥ ಲಿಂಗ ಅಂಕಿತನಾಮದ ಇವರ 30 ವಚನಗಳು ಲಭ್ಯವಿದ್ದು, ಇವರಿಬ್ಬರ ಸಮಾಧಿಗಳು ಇಲ್ಲಿರುವುದನ್ನು ಕಾಣಬಹುದು.ನಿಲಂಗಾ ತಲ್ಲೂಕಿನ ಹಾಲಹಳ್ಳಿ ಚೆನ್ನಬಸವಣ್ಣ ಗವಿ ಇರುವ ಬೆಟ್ಟವಿದ್ದು, ಇದೇ ಬೆಟ್ಟದ ಮೇಲೆ ಅಕ್ಕಮಹಾದೇವಿ ಗರ್ಭಗೃಹ ಕೂಡ ಇದೆ. ಇವರಿಬ್ಬರು ಇಲ್ಲಿಯೇ ಪೂಜೆ ಮಾಡಿಕೊಂಡ ಸ್ಥಳ ಎಂದು ಹೇಳಲಾಗುತ್ತಿದೆ.