ಲದ್ದೆಯ ಸೋಮಣ್ಣ, ಕುಂಬಾರ ಗುಂಡಯ್ಯ……ಬಸವ ತೀರ್ಥ

0
16

ಯಾರ ಹಂಗಿಗೂ ಅಷ್ಟೇ ಏಕೆ ದೇವರ ಹಂಗಿಗೂ ಕೂಡ ಒಳಗಾಗದ ೧೨ನೇ ಶತಮಾನದ ಬಸವಾದಿ ಶರಣರು ಸ್ವತಂತ್ರ ಧಿರರಾಗಿದ್ದರು. ಕಾಯಕ-ದಾಸೋಹವೇ ಅವರ ಜೀವಾಳವಾಗಿತ್ತು. ಪಾಪ-ಪುಣ್ಯದ ಗೊಡವೆಗೆ ಹೋಗದೆ, ಬಂದದ್ದನ್ನು ಬಂದಂತೆಯೇ ಸ್ವೀಕರಿಸುವ ವಿಶಾಲ ಮತ್ತು ವಿಶೇಷ ಗುಣ ಹೊಂದಿದ್ದರು. ಭೂಮಿಗೆ ಬಂದಿರುವುದ ಹಿಂದೆ ಕಾರ್ಯ-ಕಾರಣವಿರುತ್ತದೆ. ಬದುಕಿನ ಸಾರ್ಥಕತೆಗೆ ಅರಿವು ಮುಖ್ಯ ಎಂಬುದನ್ನು ಅವರು ಅರಿತವರಾಗಿದ್ದರು.

ಲಾದಾ (ಲದ್ದೆ): ಬೀದರ್ ಜಿಲ್ಲೆಯ ಭಾಲ್ಕಿಯಿಂದ ೯ ಕಿ. ಮೀ. ದೂರದಲ್ಲಿ ಲಾದಾ ಎಂಬ ಗ್ರಾಮವಿದ್ದು, ವಚನಕಾರ ಸೋಮಣ್ಣ ಇದೇ ಊರಿನವರು ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿರುವ ಸೋಮೇಶ್ವರ ದೇವಾಲಯದ ಶಿವಲಿಂಗದ ಹಿಂದೆ ಸೋಮಣ್ಣನ ಸಮಾಧಿಯಿದೆ. ಹುಲಸೂರಿನಲ್ಲಿಯೂ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಇನ್ನೂ ಹೆಚ್ಚಿನ ಶೋಧಗಳಾಗಬೇಕಿದೆ. ಇವರು ರಚಿಸಿದ ಒಂದೇ ಒಂದು ವಚನ ದೊರಕಿದೆ. ಇವರ ಅಂಕಿತನಾಮ ಬಾಪು ಲದ್ದೆಯ ಸೋಮ. ಲಾದ ಗ್ರಾಮದ ಸಮೀಪದಲ್ಲಿಯೇ ತೊರಿ ಬಸವಣ್ಣ ಎಂಬ ಸ್ಥಳವಿದ್ದು, ಸೋಮಣ್ಣ ಇಲ್ಲಿಂದಲೇ ಹುಲ್ಲು ತಂದು ಹುಲಸೂರು ಮಾರುಕಟ್ಟೆಯಲ್ಲಿ ಮಾರುತ್ತಿದ್ದ ಎಂದು ಹೇಳಲಾಗುತ್ತಿದೆ.

Contact Your\'s Advertisement; 9902492681

ಕುಂಬಾರ ಗುಂಡಯ್ಯ: ಭಲ್ಲುಂಕೆ ಎಂದು ಕರೆಯಲಾಗುವ ಭಾಲ್ಕಿ ಪಟ್ಟಣದಲ್ಲಿ ಕುಂಬಾರ ಗುಂಡಯ್ಯನೆಂಬ ಶರಣನಿದ್ದ. ಅಲ್ಲಿನ ಕುಂಬಾರ ಓಣಿಯಲ್ಲಿ ಬರುವ ದೇವಾಲಯದಲ್ಲಿ ಕುಂಬಾರ ಗುಂಡಯ್ಯನ ಮೂರ್ತಿಶಿಲ್ಪ ಕಾಣಬಹುದು. ಅಬಲೂರು ಸೋಮೇಶ್ವರ ದೇವಾಲಯ ಪೌಳಿಯ ಮೇಲೆ ಕೆತ್ತಲಾದ ಶಿಲ್ಪಗಳಲ್ಲಿ ಗುಂಡಯ್ಯನ ಶಿಲ್ಪವಿದೆ. ಈತನ ಹೆಂಡತಿ ಕೇತಲೆ ಭಾಲ್ಕೇಶ್ವರ ದೇವಾಲಯಕ್ಕೆ ದಿನಾಲು ಪವುಡ ಹೊದಿಸುವ ನೇಮ ಕೈಕೊಂಡಿದ್ದಳು ಎಂದು ಹೇಳಲಾಗುತ್ತಿದೆ.

ಮೋರಂಬಿ: ಭಾಲ್ಕಿಯಿಂದ ೨೦ ಕಿ. ದೂರವಿರುವ ಈ ಗ್ರಾಮದ ಮನೆಯೊಂದರಲ್ಲಿ ಹಡಪದ ರೇಚಯ್ಯನ ಸ್ಮಾರಕವಿದೆ. ಇವರ ಮೂಲ ಆಂಧ್ರಪ್ರದೇಶ. ಚೆನ್ನಬಸವಣ್ಣನಿಗೆ ವೀಳ್ಯೆ ಮಡಚಿಕೊಡುವ ಕಾಯಕ ಮಾಡಿಕೊಂಡಿದ್ದರು. ಮನೆಯಲ್ಲಿರುವ ಗದ್ದುಗೆಯ ಮೇಲೆ ಈಗಲೂ ಪಿಕದಾನಿ ಇರುವುದನ್ನು ಕಾಣಬಹುದು. ಕುಂಬಾರ ಗುಂಡಯ್ಯ, ಲದ್ದೆಯ ಸೋಮಣ್ಣ, ಢೋಹರ ಕಕ್ಕಯ್ಯ ಕುಳಿತು ಇಲ್ಲಿಯೇ ಚರ್ಚೆ-ಸಂವಾದ ನಡೆಸುತ್ತಿದ್ದರು ಎಂದು ಊರಿನ ಮನೆಯ ಮುಂದಿರುವ ಕಟ್ಟೆಯನ್ನು ಊರವರು ತೋರಿಸುತ್ತಾರೆ. ಕಲ್ಯಾಣಕ್ರಾಂತಿಯ ನಂತರ ಉಳವಿಯೆಡೆಗೆ ಹೋದ ಸಂದರ್ಭದಲ್ಲಿ ಬೆಳಗಾವಿಯ ಅಂಕಲಗಿಯಲ್ಲಿ ನೆಲೆಸುತ್ತಾರೆ.

ಚಿದ್ರಿ: ಬೀದರ್‌ನಿಂದ ನಾಲ್ಕು ಕಿ.ಮೀ. ದೂರವಿರುವ ಚಿದ್ರಿ ಗ್ರಾಮದಲ್ಲಿ ಮೇದಾರ ಕೇತಯ್ಯನೆಂಬ ಶರಣನಿದ್ದ. ಬಿದಿರು ಕಡಿದು ಅದರಿಂದ ಬುಟ್ಟಿ ಮಾಡುವ ಕಾಯಕ ಮಾಡಿಕೊಂಡಿದ್ದಾತ. ಇಲ್ಲಿ ಮೇದಾರ ಕೇತಯ್ಯನ ಸಮಾಧಿ ಇರುವುದನ್ನು ಕಾಣಬಹುದು. ಆಗ ಬಿದಿರಿನ ಪೊದೆ ಇಲ್ಲಿತ್ತು. ಈತನ ಸುತ್ತಲೂ ಪೌರಾಣಿಕ ಕಥೆಗಳನ್ನು ಹೇಳಲಾಗುತ್ತಿದೆ.

ರೇಕುಳಕಿ: ಹುಮನಾಬಾದ್‌ನಿಂದ ೨೪ ಕಿ. ಮೀ. ದೂರವಿರುವ ರೇಕುಳಕಿಯ ವೈದಿಕ ಮನೆತನದ ಜನವಶ-ಧರ್ಮವತಿಯ ಪುತ್ರ ಬಹುರೂಪಿ ಚೌಡಯ್ಯ. ಶರಣರ ತತ್ವ, ಮಹಿಮೆ ಮೊದಲಾದವುಗಳನ್ನು ಪ್ರಸಾರ, ಪ್ರಚಾರ ಮಾಡುವ ಕಾಯಕ ಮಾಡಿಕೊಂಡಿದ್ದರು. ಹೊಲವೊಂದರಲ್ಲಿ ರೇಖನಾಥ, ನಾಗನಾಥ ಗರುಗಳ ಸಮಾಧಿ ಕಲ್ಲುಗಳಿವೆ. ಊರ ಹೊರ ವಲಯದಲ್ಲಿ ಚೌಡಯ್ಯನ ಗವಿಯಿದ್ದು, ಪಕ್ಕದಲ್ಲಿಯೇ ಈಗ ಮನೆ ಕಟ್ಟಿಕೊಂಡಿದ್ದಾರೆ. ಈಗಲೂ ಬಹುರೂಪಿ ಚೌಡಯ್ಯನ ಮನತನಕ್ಕೆ ಸಂಬಂಧಿಸಿದವರು ಎಂದು ವೆಂಕಟರಾವ ಕುಲಕರ್ಣಿ ಹೇಳಿಕೊಳ್ಳುತ್ತಾರೆ.

ಬಸವತೀರ್ಥ: ಹುಮನಾಬಾದ್‌ನಿಂದ ೮ ಕಿ. ಮೀ. ದೂರವಿರುವ ಈ ಗ್ರಾಮದಲ್ಲಿ ಬಸವಣ್ಣನವರ ದೇವಾಲಯವಿದೆ. ಬಸವಕಲ್ಯಾಣದ ಬಂದವರ ಓಣಿಯಲ್ಲಿ ಚೆನ್ನಬಸವಣ್ಣನ ತೀರ್ಥವಿರುವಂತೆ ಇಲ್ಲಿ ಬಸವಣ್ಣನ ತೀರ್ಥವಿದೆ. ಇಲ್ಲೊಂದು ದೊಡ್ಡ ವಿರಕ್ತ ಮಠವಿದ್ದು, ಈ ಮಠದ ಸ್ವಾಮಿಗಳು ಇಂಗಳೇಶ್ವರದವರು ಎಂಬುದು ತಿಳಿದು ಬರುತ್ತದೆ.

-ಡಾ. ಜಯಶ್ರೀ ದಂಡೆ
ಸ್ಥಳ: ಬಸವ ಸಮಿತಿ ಅನುಭವ ಮಂಟಪ, ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here