ಕಲಬುರಗಿ: ಸ್ಮಾರಕಗಳ ಮೂಲಕ ಶರಣರ ಚರಿತ್ರೆ ಕಟ್ಟಿ ಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಶ್ರದ್ಧೆ, ಶ್ರಮ, ತಾಳ್ಮೆ ಮತ್ತು ಆಳವಾದ ಅಧ್ಯಯನ ಅಗತ್ಯ ಎಂದು ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ನುಡಿದರು.
ಬೆಂಗಳೂರು ಹಾಗೂ ಕಲಬುರಗಿ ಬಸವ ಸಮಿತಿ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರಾವಣ ಸಂಜೆ-2021 ಶರಣ ಚರಿತೆ ಆನ್‍ಲೈನ್ ವಿಶೇಷ ಉಪನ್ಯಾಸ ಮಾಲೆ-2 ಸಮರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರಣರಿಗೆ ಸಂಬಂಧಿಸಿದ ದೇವಾಲಯ, ಗದ್ದುಗೆ, ಶಾಸನ, ಮುರುಕು ಮಂಟಪಗಳಿಗೆ ಖುದ್ದಾಗಿ ಭೇಟಿ ನೀಡಿ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಅಂಶಗಳನ್ನು ಗುರುತಿಸುವುದು ಸಣ್ಣ ಮಾತಲ್ಲ ಎಂದರು.
ಶರಣರ ಬಗ್ಗೆ ಜನಸಮಾನ್ಯರು ಉಳಿಸಿಕೊಂಡು ಬಂದಿರುವ ಮೌಖಿಕ ಮಾಹಿತಿ ಸಂಗ್ರಹಿಸುವುದರ ಜೊತೆಗೆ ಲಿಖಿತ ಮಾಹಿತಿ ಜೋಡಿಸಿ 29 ದಿನಗಳ ಕಾಲ ಡಾ. ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ದಂಪತಿ ನೀಡಿದ ಉಪನ್ಯಾಸ ತುಂಬಾ ಅರ್ಥಪೂರ್ಣವೆನಿಸುವಂತಿದ್ದವು. ಶರಣರ ಬದುಕು ಹಾಗೂ ಬರಹ ಕುರಿತು ಈವೆರೆಗೆ ಸಾಕಷ್ಟು ವ್ಯಾಖ್ಯಾನ ಮಾಡಿದ್ದೇವೆ. ಆದರಂತೆ ಶರಣ ಮಾರ್ಗದಲ್ಲಿ ನಡೆಯಬೇಕು. ಆ ಮೂಲಕ ಬಸವಾದಿ ಶರಣರ ಕನಸಿನ ಸಮಾಜ ಕಟ್ಟಬೇಕಾಗಿದೆ ಎಂದು ಅವರು ತಿಳಿಸಿದರು.
ಸಮಾರೋಪ ಭಾಷಣ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಿ, ಶರಣ ಚರಿತೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಶರಣರ ಬಗೆಗಿನ ಕಲ್ಪನೆಗಳು ಹಾಗೂ ತತ್ವಗಳು ಮತ್ತೊಮ್ಮೆ ಸ್ಪಷ್ಟಪಡಿಸುವಂತಿದ್ದವು. ಶರಣರ ಸ್ಮಾರಕಗಳನ್ನು ಮುಖ್ಯವಾಸಿಕೊಂಡ ಈ ಉಪನ್ಯಾಸ ಶರಣರ ತತ್ವಾದರ್ಶ, ಶರಣರ ಬಗೆಗಿನ ಪಠ್ಯಗಳನ್ನು ವಿವರಿಸಿ ಶರಣರ ಸಮಗ್ರ ಮತ್ತು ಅಧಿಕೃತ ಚರಿತ್ರೆಯನ್ನು ಕಟ್ಟಿಕೊಟ್ಟಂತಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಸುಮಾರು 10 ವರ್ಷಗಳ ಕಾಲ ದೀರ್ಘ ಕಾಲದ ಕ್ಷೇತ್ರ ಕಾರ್ಯ ನಡೆಸಿ ಆ ಮೂಲಕ ಹೊರ ಹೊಮ್ಮಿದ ಮಾಹಿತಿಯನ್ನು ಕಲೆ ಹಾಕಿ ಡಾ. ದಂಡೆ ದಂಪತಿ ನೀಡಿದ ಉಪನ್ಯಾಸ ಶರಣರ ಚರಿತ್ರೆಗೆ ಹೊಸ ಬೆಳಕು ಚೆಲ್ಲುವಂತಿದ್ದವು ಎಂದರು.
ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಉಪಧ್ಯಕ್ಷೆ ಡಾ. ಜಯಶ್ರೀ ದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ವೇದಿಕೆಯಲ್ಲಿದ್ದರು.
ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಭುವನೇಶ್ವರಿ ವಂದಿಸಿದರು. ಡಾ. ಗಣಪತಿ, ಸಿಣ್ಣೂರ, ಬಂಡೆಪ್ಪ ಕೇಸೂರ, ಕೆ.ಎಸ್. ವಾಲಿ, ಎಸ್.ಎಸ್. ಹತ್ತಿ, ಡಾ. ಆನಂದ ಸಿದ್ಧಾಮಣಿ ಇತರರು ಇದ್ದರು.