ದೇಹ-ಮನಸ್ಸಿಗೆ ಮದ್ದು ನೀಡಿದ ವೈದ್ಯ ಸಂಗಣ್ಣ

0
303

ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ ಬಸವಣ್ಣನವರ ಕಲ್ಯಾಣದ ಅಂಗಳಕ್ಕೆ ನಾಡಿನ ವಿವಿಧ ಮೂಲೆಗಳಿಂದ ಜನ ಬಂದಿರುವುದು ಇತಿಹಾಸ ಮತ್ತು ವಿಸ್ಮಯ. ಕಲ್ಯಾಣದ ಶರಣರು ಕಾಯಕದ ಕಲಿಗಳು, ದಾಸೋಹಂಭಾವಿಗಳು, ಶಿವಯೋಗ ಚರಮೂರ್ತಿಗಳು, ಶಿವಾನುಭವ ಸಾಮ್ರಾಟರು, ಸಮಾನತೆಯ ಸಾಹುಕಾರರು.

ಬಸವ ಸೂರ್ಯ, ಬಸವ ಭಾಸ್ಕರ, ಭಕ್ತಿಯ ಸೂರ್ಯ, ಅತೀತ ಸೂರ್ಯ, ವಿಶ್ವದ ಬೆಳಕಾಗಿರುವ ಬಸವಣ್ಣನವರ ಸಂಪರ್ಕಕ್ಕೆ ಬಂದವರು ಸಾಕ್ಷಾತ್ ಬಸವ ಸ್ವರೂಪಿಗಳಾದರು ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ಅಲ್ಲಿದ್ದ ೭೭೦ ಅಮರಗಣಂಗಳೆಲ್ಲರೂ ವಚನ ಚಿಜ್ಜೋತಿಗಳಾದರು. ಅವರೆಲ್ಲರೂ ಬಸವಣ್ಣನವರ ಅನುಭವ ಮಂಟಪದ ಅಂಗಳಲ್ಲಿ ಅರಿವಿನ ಜ್ಯೋತಿ ಹೊತ್ತಿಸಿದರು. ತಾವು ಮಾಡುವ ಕಾಯಕದ ಸಾಧನಗಳನ್ನು ಬಳಸಿ ವಚನ ಬರೆದು ಭವಪ್ರಪಂಚ ದಾಟಿ ಶಿವಪ್ರಪಂಚ ತಲುಪುವ ಶಿವ ಕಾರಣ್ಯದ ಮಾರ್ಗವನ್ನು ತೋರಿದವರು.

Contact Your\'s Advertisement; 9902492681

ಇಂತಹ ಶಿವನಡೆ, ಶಿವನುಡಿ, ಶಿವಜ್ಞಾನ, ಶಿವಪ್ರಭೆ ಕರುಣಿಸುವ ಸಾಧನೆಯ ಲಿಂಗಪಥವನ್ನು ತೋರಿದವರಲ್ಲಿ ಆಯರ್ವೇದ ಪಂಡಿತ, ವೈದ್ಯಶಾಸ್ತ್ರ ಬಲ್ಲಿದ ವೈದ್ಯ ಸಂಗಣ್ಣನವರೂ ಒಬ್ಬರು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಅಂಕಿತನಾಮದಲ್ಲಿ ಬರೆದ ಇವರ ೨೧ ವಚನಗಳು ದೊರೆತಿವೆ. ರೋಗಗಳು ದೇಹಕ್ಕೆ ಬರುವ ರೀತಿಯಲ್ಲಿ ಆತ್ಮಕ್ಕೆ ಬರುತ್ತವೆ ಎಂಬದನ್ನು ಆ ಕಾಲದಲ್ಲೇ ತಿಳಿದಿದ್ದ ಅವರು, ಶರೀರಕ್ಕೆ ಅಂಟಿಕೊಳ್ಳುವ ರೋಗಗಳನ್ನು ನಾಡಿಶಾಸ್ತ್ರದ ಮೂಲಕ ಕಂಡು ಹಿಡಿದು ನಾಟಿ ಔಷಧ ಕೊಡುವ ಮೂಲಕ ಮೈಮನಕ್ಕೆ ಮದ್ದು ನೀಡಿದವರು ವೈದ್ಯ ಸಂಗಣ್ಣನವರು.

ನಾನಾ ರೋಗಂಗಳು ಬಂದು
ದೇಹವ ಹಿಡಿಯುವಲ್ಲಿ ಶಿವಾರ್ಚನೆ
ಬೆರಕೊಳ್ಳಿ ಪಂಚಾಕ್ಷರಿಯ ಪ್ರಣವ
ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ
ಇದರಿಂದೆ ದರ್ಪಂಗೆಡಗು

ದೇಹ ಹಾಗೂ ಮನಸ್ಸುಗಳೆರಡೂ ಒಂದು ಮತ್ತೊಂದರ ಮೇಲೆ ಪರಿಣಾಮ ಬೀರುತ್ತವೆ. ಶರೀರದ ಒಳಗಿರುವ ಸೂಕ್ಷ್ಮವಾದ ಮನಸ್ಸಿಗೂ ಔಷದ ನೀಡಲೇಬೇಕು. ಮಿತವಾಕು, ಮಿತನಿದ್ರೆ, ಮಿತಪ್ರಸಾದಿ ಆಗಿದ್ದಾಗ ಮಾತ್ರ ನಿರೋಗಿಯಾಗಿರುವಂತೆ, ಅರಿಷಡ್ವರ್ಗಗಳಿಗೆ ಎಳಸದೆ ಮನಸ್ಸಿಗೆ ಅಂಟುವ ರೋಗಗಳಿಂದ ದೂರವಿರುವ ಸುಲಭ ಮಾರ್ಗ ತೋರಿಸಿಕೊಟ್ಟವರು.

ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ, ಕೂಡಲ ಸಂಗಮದೇವ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳಿದ ಶರಣರು, ಬದುಕಿನ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಪವಿತ್ರ ವೈದ್ಯಶಾಸ್ತ್ರವನ್ನು ಸಹ ಅವರು ಬಿಟ್ಟಿರಲಿಲ್ಲ ಎಂಬುವುದಕ್ಕೆ ವೈದ್ಯ ಸಂಗಣ್ಣನವರೇ ಸಾಕ್ಷಿಯಾಗಿದ್ದಾರೆ. ಇವರು ತಮ್ಮ ವಚನವೊಂದರಲ್ಲಿ “ಸೋಂಕು” ಎನ್ನುವ ಪದ ಬಳಸಿರುವುದನ್ನು ನೋಡಿದರೆ ಈಗಿನ ಮಹಾಮಾರಿ “ಏಡ್ಸ್”ರೋಗದ ಬಗ್ಗೆಯೂ ಅವರಿಗೆ ಆಗಲೇ ತಿಳಿದಿತ್ತೆ? ಎಂದು ಆಶ್ಚರ್ಯವಾಗುತ್ತದೆ.

ಅಷ್ಟೋತ್ತರ ಶತವ್ಯಾಧಿಗಳ ಧರಿಸಿಕೊಂಡಿಪ್ಪುದು
ಆತ್ಮನೋ, ಘಟನೋ
ಆತ್ಮನೆಂದಡೆ ಸಾಯದು ಚಿತ್ತ
ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ
ಇಂತೀ ಒಂದು ಕಳೆದು, ಒಂದಕ್ಕೆ ಔಷಧಿಯ
ಕೊಟ್ಟಿಹನೆಂದಡೆ
ಆ ಎರಡರ ಸಂಗದಿಂದ ರುಜೆ ಪ್ರಮಾಣು
ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ
ನಾನೊಂದ ಔಷಧಿಯ ಭೇದವ ಹೇಳಿಹೆ
ಆಧಾರದಲ್ಲಿಪ್ಪ ಮೂಲಿಕೆಯ ಬೇರನರೆದು
ಐದಿಂದ್ರಿಯವ ಕೂಡಿಕೊಂಡು
ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ
ಆ ಮದ್ದು ವಾಂತಿಗೆ ಸಲ್ಲ, ವಿರೋಚನವಿಲ್ಲ
ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ
ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ
ಎಂದೆಂದಿಗೂ ರುಜೆಯಿಲ್ಲ, ಸಂದು ಸಂಶಯವಿಲ್ಲ
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ

ವಾತ (೩೬), ಪಿತ್ತ (೩೬), ಕಫ(೩೬) ದಿಂದ ೧೦೮ ರೋಗಗಳು ದೇಹಕ್ಕೆ ಅಂಟಿಕೊಳ್ಳುತ್ತವೆ. ಅಂತೆಯೇ ಸರ್ಕಾರ ಇದೀಗ ೧೦೮ ಅಂಬ್ಯೂಲೆನ್ಸ್‌ನ ವ್ಯವಸ್ಥೆ ಮಾಡಿದೆ. ಆದರೆ ಇದನ್ನು ವೈದ್ಯ ಸಂಗಣ್ಣನವರು ಆಗಲೇ ಗುರುತಿಸಿದ್ದರು. ವಾತ, ಪಿತ್ತ, ಕಫಗಳಿಂದಲೇ ದೇಹಕ್ಕೆ ರೋಗ ಅಂಟಿಕೊಳ್ಳುವಂತೆ ಆಣವ, ಮಾಯಾ, ಕಾರ್ಮಿಕ ಮಲತ್ರಯಗಳು ಆತ್ಮಕ್ಕೆ ಅಡರುತ್ತವೆ. ಇದಕ್ಕೆಲ್ಲ ಇಷ್ಟಲಿಂಗ ಪೂಜೆಯೇ ಮದ್ದು ಎಂದು ಲಿಂಗಾಯತ ತತ್ವ, ಸಿದ್ಧಾಂತವನ್ನು ತಿಳಿಸಿಕೊಟ್ಟಿದ್ದಾರೆ. ಶರೀರದ ಕಾಯಿಲೆಗಳ ಉಪಶಮನಕ್ಕೆ ಬಹಿರಂಗದ ಚಿಕಿತ್ಸೆಯ ಜೊತೆಗೆ ಅಂತರಂಗದ ಚಿಕಿತ್ಸೆಯೂ ನಡೆಯಬೇಕೆಂಬುದು ಅವರ ವಚನಗಳ ಆಶಯವಾಗಿದೆ. ಅವರ ದಾರಿ ನಮಗೆ ಆರೋಗ್ಯದ ದಾರಿಯಾಗಿರಲಿ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here