ರೈತರ ದಿಕ್ಕು ತಪ್ಪಿಸುತ್ತಿರುವ ಮಾಜಿ ಶಾಸಕ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ

0
1824

ಆಳಂದ: ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿಸಿಸಿ ಬ್ಯಾಂಕನಿಂದ ಮಂಜೂರು ಆಗಿರುವ ರೈತರ ಸಾಲವನ್ನು ರೈತರಿಗೆ ನೀಡುವಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಇದರಿಂದ ರೈತರು ಜಾಗೃತೆವಹಿಸಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಳಂದ ತಾಲೂಕಿನಲ್ಲಿ ಮಾಜಿ ಶಾಸಕ ಬಿ ಆರ್ ಪಾಟೀಲ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಸೇರಿಕೊಂಡು ತಮಗೆ ಬೇಕಾದ ಸಹಕಾರ ಸಂಘಗಳ ರೈತರಿಗೆ 50 ಸಾವಿರ ಮತ್ತು ಬೇಡವಾದ ಸಂಘಗಳ ರೈತರಿಗೆ 25 ಸಾವಿರ ಸಾಲ ನೀಡುತ್ತಿದ್ದಾರೆ ಇಲ್ಲಿಯೂ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಇದು ಒಂದು ರೀತಿಯಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ ಹಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಮುಚ್ಚುವ ಸ್ಥಿತಿಯಲ್ಲಿದ್ದ ಬ್ಯಾಂಕಗೆ ಆರ್ಥಿಕ ಪುನಶ್ಚೇತನ ನೀಡಿದ ಶ್ರೇಯ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಬ್ಯಾಂಕಿನ ಸ್ಥಿತಿಗತಿ ವಿವರಿಸಿ ಬ್ಯಾಂಕನ್ನು ಅಪಾಯದಿಂದ ಪಾರು ಮಾಡಿದ್ದೆವೆ.

ಹಣ ಬಿಡುಗಡೆ ಮಾಡುವಾಗ ಪಕ್ಷವನ್ನು ನೋಡಿ ಹಣ ಬಿಡುಗಡೆ ಮಾಡಿಲ್ಲ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಣ ಬಿಡುಗಡೆ ಮಾಡಲಾಗಿದೆ ಆದರೆ ಶಾಸಕರ ಹೆಸರಿನಲ್ಲಿ ಸಾಲ ವಿತರಣೆ ಮಾಡುವುದನ್ನು ಬಿಟ್ಟು ರಾಜಕೀಯ ದುರುದ್ದೇಶದ ಕಾರಣದಿಂದ ಮಾಜಿ ಶಾಸಕ ಬಿ ಆರ್ ಪಾಟೀಲರನ್ನು ತೆಗೆದುಕೊಂಡು ಸಾಲ ವಿತರಣೆ ಮಾಡುತ್ತಿದ್ದಾರೆ.

ಸಾಲ ವಿತರಣೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಡಿಸಿಸಿ ಬ್ಯಾಂಕನವರು ಪ್ರತಿ ರೈತರಿಗೆ 50 ಸಾವಿರ ಸಾಲ ನೀಡಬೇಕು ಎಂಬ ಆದೇಶ ಹೊರಡಿಸಿದ್ದಾರೆ ಆದರೆ ತಾಲೂಕಿನಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ. ತಾಲೂಕಿನಲ್ಲಿ ಸಾಲ ವಿತರಣೆ ಮಾಡುವ ನೆಪದಲ್ಲಿ ಮಾಜಿ ಶಾಸಕ ಬಿ ಆರ್ ಪಾಟೀಲ ಮತ್ತು ನಿರ್ದೇಶಕ ಅಶೋಕ ಸಾವಳೇಶ್ವರ ಸ್ವತ ತಾವೇ ಕೈಯಿಂದ ಸಾಲ ವಿತರಿಸುತ್ತಿರುವವರ ಹಾಗೇ ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರಿಗೆ ಸಾಲ ವಿತರಣೆ ಮಾಡುವಾಗ ತಮ್ಮ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದಾರೆ. ತಮ್ಮ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಇದ್ದ ಸಂಘಗಳಿಗೆ ಮಾತ್ರ ಸಾಲ ಮಂಜೂರಿ ಮಾಡುತ್ತಿದ್ದಾರೆ ಅಲ್ಲದೇ ಸಾಲ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಬಿ ಆರ್ ಪಾಟೀಲರನ್ನು ಆಹ್ವಾನಿಸದಿದ್ದರೇ ತಮ್ಮ ಸಂಘಕ್ಕೆ ಸಾಲ ಮಂಜೂರಿ ಮಾಡುವುದಿಲ್ಲ ಎಂದು ಒತ್ತಡ ತಂತ್ರ ಹಾಕುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಪಡಸಾವಳಿ ಸಹಕಾರ ಸಂಘದ ಸಭೆಯಲ್ಲಿ ಮಾಜಿ ಶಾಸಕರನ್ನು ಆಹ್ವಾನಿಸಲು ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದಾಗ ಆ ಸಂಘದ ಸಾಲ ಮಂಜೂರಿಗೆ ಅನುಮೋದನೆ ನೀಡಿಲ್ಲ ಯಾಕೆ ಇದು ಏನನ್ನು ತೋರಿಸುತ್ತದೆ?. ಜನಗಳಿಗೆ ಸತ್ಯ ಸಂಗತಿ ಗೊತ್ತಿದೆ ಈ ಸಾಲ ನೀಡುವುದಕ್ಕೆ ಮೂಲ ಕಾರಣ ಯಡಿಯೂರಪ್ಪನವರು. ಮಾಜಿ ಶಾಸಕರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ರೈತರ ವಿಷಯದಲ್ಲಿಯೂ ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಾವು ಸೂಚಿಸಿದ ರೈತರಿಗೆ ಸಾಲ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ ಅಲ್ಲದೇ ಮಂಜೂರು ಮಾಡಿರುವ 25 ಸಾವಿರ ರೂ.ಗಳಲ್ಲಿ 5 ಸಾವಿರ ರೂ.ಗಳನ್ನು ರೈತರಿಗೆ ಮತ್ತು ಸಹಕಾರ ಸಂಘಕ್ಕೆ ಸಂಬಂಧಪಡದ ಬೇರೆ ಬೇರೆ ಹೆಸರಿನಲ್ಲಿ ಕಟ್ ಮಾಡಿಕೊಂಡು ರೈತರಿಗೆ ಮೋಸ ಮಾಡಿ ಭೃಷ್ಟಚಾರ ಎಸಗುತ್ತಿದ್ದಾರೆ ಎಂದು ದೂರಿದ್ದಾರೆ.

ಆಳಂದ ತಾಲೂಕಿನಲ್ಲಿ ಇರುವ ಒಟ್ಟು 36 ಪ್ರಾಥಮಿಕ ಸಹಕಾರ ಸಂಘಗಳಿಂದ ಮೊದಲ ಹಂತದ ಸಾಲ ವಿತರಣೆಯಲ್ಲಿ 5 ಸಾವಿರ ರೈತರಿಂದ ಹೆಚ್ಚುವರಿ ಹಣ ಪಡೆದು 1 ಕೋಟಿಗೂ ಅಧಿಕ ಹಣವನ್ನು ರೈತರಿಗೆ ವಂಚಿಸಲಾಗಿದೆ
ಸಂಘದ ಕಟ್ಟಡದ ಹೆಸರಿನಲ್ಲಿ ದುಡ್ಡು ತೆಗೆದುಕೊಳ್ಳುತ್ತಿರುವುದು ಯಾವ ನ್ಯಾಯ? ಸಂಘವೇನು ಖಾಸಗಿ ಆಸ್ತಿಯೇ? ಸಂಘಗಳು ರೈತರ ಶೇರಿನಿಂದ ಮತ್ತು ಸರಕಾರದ ನೆರವಿನಿಂದ ನಡೆಯುತ್ತವೆ ಆದರೆ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ರೈತರಿಗೆ ಸುಲಿಗೆ ಮಾಡುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಖಾಸಗಿ ಶಾಲಾ ಕಾಲೇಜುಗಳು ಬಿಲ್ಡಿಂಗ್ ಫಂಡ್ ತೆಗೆದುಕೊಳ್ಳುತ್ತವೆ ಅದರಿಂದ ತಮ್ಮ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತವೆ ಆದರೆ ಸಹಕಾರಿ ಬ್ಯಾಂಕಗಳು ಸರ್ಕಾರದ ನೆರವು, ರೈತರ ಶೇರು ಹಾಗೂ ರೈತರಿಂದ ಬರುವ ಆದಾಯದಿಂದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನ ಇಲ್ಲವಾಯಿತೇ ಎಂದು ಪ್ರಶ್ನಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here