ಸುರಪುರ: ನಗರದ ಅನೇಕ ಕಡೆಗಳಲ್ಲಿ ತೆರೆದ ಚರಂಡಿಗಳಿಂದ ಅನೇಕರು ಬಿದ್ದು ಗಾಯಗೊಳಿಸಿಕೊಂಡಿದ್ದಾರೆ ಎಂದು ಆರೋಪಿಸಿ ತೆರೆದ ಚರಂಡಿಗಳ ಮುಚ್ಚಿಸಲು ಆಗ್ರಹಿಸಿ ಯುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಮಹಾತ್ಮ ಗಾಂಧಿ ವೃತ್ತದಿಂದ ತಹಸೀಲ್ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿನ ಚರಂಡಿ ತೆರೆದು ಹಾಗೆಯೇ ಬಿಟ್ಟಿದ್ದರಿಂದ ಜನರು ತೀವ್ರ ತೊಂದರೆಪಡುವಂತಾಗಿದೆ.ಪಾಲ್ಕಮ್ಮ ದೇವಸ್ಥಾನದ ಬಳಿಯಲ್ಲಿನ ಚರಂಡಿಯಲ್ಲಿ ಅನೇಕರು ಬಿದ್ದು ಗಾಯಗೊಂಡಿದ್ದಾರೆ.
ಅಲ್ಲದೆ ಬೈಕ್ ಸವಾರರು ಕೂಡ ಬಿದ್ದು ಗಾಯಗೊಂಡಿದ್ದಾರೆ.ಚರಂಡಿಗಳಲ್ಲಿ ಹಂದಿಗಳು ಓಡಾಡುವುದರಿಂದ ಚರಂಡಿ ಪಕ್ಕದಲ್ಲಿನ ಮನೆಗಳ ಜನರು ಹಾಗು ವ್ಯಾಪಾರಸ್ಥರು ದುರ್ವಾಸನೆಯಿಂದ ಬೇಸತ್ತಿದ್ದಾರೆ ಹಾಗು ಸಾಂಕ್ರಾಮಿಕ ರೋಗದ ಭೀತಿಯು ಜನರಲ್ಲಿ ಹೆಚ್ಚಿದೆ.ಆದ್ದರಿಂದ ಕೂಡಲೇ ಈ ಎಲ್ಲಾ ತೆರೆದ ಚರಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಯುವ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.ನಂತರ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಗೌರವಾಧ್ಯಕ್ಷ ರಾಜಾ ಚನ್ನಪ್ಪ ನಾಯಕ,ತಾಲೂಕು ಉಪಾಧ್ಯಕ್ಷ ಸಚಿನ ಕುಮಾರ ನಾಯಕ,ಕಾರ್ಯದರ್ಶಿ ರಫೀಕ್,ಖಜಾಂಚಿ ಮಂಜುನಾಥ ಹಾಗು ಸದಸ್ಯರಾದ ಜಟ್ಟೆಪ್ಪ,ಮೌನೇಶ,ಅನೀಲ್ ಹಾಗು ಶಂಕರ ಇತರರಿದ್ದರು.