ಭಾಲ್ಕಿ: ಪಟ್ಟಣದ ಬಸ್ ನಿಲ್ದಾಣದಿಂದ ಉಪನ್ಯಾಸಕರ ಬಡಾವಣೆಗೆ ಸಾಗುವ ಮಾರ್ಗದ ಅಲ್ಲಲ್ಲಿ ಕೆಸರಿನ ಮಡು ನಿರ್ಮಾಣವಾಗಿದೆ. ಸುತ್ತಲಿನ ಬಡಾವಣೆಗಳ ಚರಂಡಿ ನೀರು ಈ ಮುಖ್ಯರಸ್ತೆಯಲ್ಲಿ ಹರಿಯುತ್ತಿದೆ. ಈಗ ಸುರಿಯುತ್ತಿರುವ ಮಳೆಗೆ ಹೊಲಸು ನೀರು ಸಹ ಸೇರಿಕೊಂಡು ದುರ್ನಾತ ಬೀರುತ್ತಿದೆ.
ಬೊಮ್ಮಗೊಂಡೇಶ್ವರ ವೃತ್ತದಿಂದ ಮಸೀದಿಯವರೆಗೆ ಹಾಗೂ ಸದ್ಗುರು ವಿದ್ಯಾಲಯದಿಂದ ಉಪನ್ಯಾಸಕರ ಬಡಾವಣೆಯ ತಳವಾಡ ರಿಂಗ್‌ರಸ್ತೆವರೆಗಿನ ಕಾಮಗಾರಿ ಅಪೂರ್ಣವಾಗಿದ್ದು, ಅರ್ಧದಲ್ಲೇ ಕೆಲಸ ನಿಲ್ಲಿಸಲಾಗಿದೆ. ಇದರಿಂದ ಈ ಮಾರ್ಗದಲ್ಲಿ ಸಾಗುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ.
ಪಕ್ಕದ ಬಡಾವಣೆಯ ಎಲ್ಲಾ ರಸ್ತೆಗಳ ಚರಂಡಿಗಳನ್ನು ಈ ರಸ್ತೆಯವರೆಗೆ ತಂದು ಖುಲ್ಲಾ ಬಿಟ್ಟಿರುವದರಿಂದ ಹೊಲಸೆಲ್ಲಾ ಈ ರಸ್ತೆಯ ಮಧ್ಯದಲ್ಲಿ ಹರಿಯುತ್ತಿದೆ. ಮಕ್ಕಳು ಅದರಲ್ಲೇ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಈ ಮಾರ್ಗದ ಸಾರ್ವಜನಿಕರಿಗೆ ರೋಗ ಭೀತಿ ಕಾಡುತ್ತಿದೆ. ಪುರಸಭೆಯ ಅಧ್ಯಕ್ಷರು ಮತ್ತು ಶಾಸಕರು ಕೂಡಲೇ ಈ ಸಮಸ್ಯೆಗೆ ಸ್ಪಂದಿಸಲು ಬಡಾವಣೆಯ ಪ್ರಮುಖರು, ಪಾಲಕರು ಆಗ್ರಹಿಸಿದ್ದಾರೆ.
ಅಪೂರ್ಣ ಕಾಮಗಾರಿಯಿಂದಾಗಿ ನಿತ್ಯವೂ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವಂತೆ ಬಡಾವಣೆಯ ಪ್ರಮುಖರಾದ ಏಕನಾಥರಾವ, ಬಾಬುರಾವ ಮದಕಟ್ಟಿ, ವೈಜಿನಾಥ ಕನಶಟ್ಟೆ, ರಾಮಚಂದ್ರರಾವ ಬಿರಾದಾರ, ರಾಜಕುಮಾರ ಮೇತ್ರೆ, ಸಂಜೀವಕುಮಾರ, ರಾಜಕುಮಾರ ಜೋಳದಾಬಕೆ, ಅಕ್ಷಯಕುಮಾರ ಮುದ್ದಾ ಮುಂತಾದವರು ಮನವಿ ಸಲ್ಲಿಸಿದ್ದಾರೆ.