ವಾಡಿ: ಕೇಂದ್ರ ಬಿಜೆಪಿ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ರೈತ ಮೋರ್ಚಾ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಬೆಂಬಲಿಸಿ, ಎಸ್‌ಯುಸಿಐ (ಕಮ್ಯುನಿಸ್ಟ್) ಹಾಗೂ ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಕಾರ್ಯಕರ್ತರು ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಕಾ.ಶ್ರೀನಿವಾಸ ಗುಡಿ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಜನ ಪ್ರತಿಭಟನಾಕಾರರು, ರೈತರ ಮರಣ ಶಾಸನಗಳ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಸ್‌ಯುಸಿಐ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ, ದೇಶಕ್ಕೆ ಅನ್ನ ನೀಡುವ ರೈತರು ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೆ. ನರೇಂದ್ರ ಮೋದಿ ನೇತೃತ್ವದ ಭಾಜಪ ಸರ್ಕಾರ ಹಟಮಾರಿ ಧೋರಣೆ ಅನುಸರಿಸಿದೆ. ಹನ್ನೊಂದು ತಿಂಗಳಿಂದ ಲಕ್ಷಾಂತರ ಜನ ರೈತರು ದೇಹಲಿ ಗಡಿಯಲ್ಲಿ ಧರಣಿ ಕುಳಿತು ಮಾಡು ಇಲ್ಲವೆ ಮಡಿ ಹೋರಾಟ ಆರಂಭಿಸಿದ್ದಾರೆ. ಹಸಿರು ಸಾಲು ಹೊದ್ದು ಅಧಿಕಾರಕ್ಕೆ ಬಂದ ಕೋಮುವಾದಿ ಬಿಜೆಪಿ ರೈತರ ಬೆನ್ನಿಗೆ ಚೂರಿ ಹಾಕಿದೆ. ಕೃಷಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಒತ್ತೆಯಿಡಲು ರೈತರನ್ನು ಸಮಾದಿ ಮಾಡಲು ಈ ಕಾನೂನುಗಳನ್ನು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಭಾರತ ಬಂದ್ ಹೋರಾಟವನ್ನು ಪ್ರಾಯೋಜಿತ ಎಂದು ಹಗುರವಾಗಿ ಮಾತನಾಡಿರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನ್ನದಾತರ ಹಸಿವಿನ ಹೋರಾಟವನ್ನು ಹಂಗಿಸಿದ್ದಾರೆ. ನ್ಯಾಯಯುತ ಪ್ರಜಾತಾಂತ್ರಿಕ ಚಳುವಳಿಯನ್ನು ತುಳಿಯಲು ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ. ಜೀವ ಕೊಡಲು ಸನ್ನದ್ಧರಾಗಿ ನಿಂತಿರುವ ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರು, ದೇಶದ ಕೃಷಿ ಕ್ಷೇತ್ರವನ್ನು ಉದ್ಯಮಿಪತಿಗಳಿಂದ ರಕ್ಷಿಸಲು ಪಣ ತೊಟ್ಟಿದ್ದಾರೆ. ಭಾರತ ಬಂದ್ ಹೋರಾಟವನ್ನು ವಿಫಲಗೊಳಿಸುವ ಉದ್ದೇಶದಿಂದ ಬಿಜೆಪಿ ನಾಯಕರು ಇಲ್ಲಸಲ್ಲದ ಟೀಕೆಗಳಿಗೆ ಇಳಿದಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಬೀದಿಗೆ ತಳ್ಳಲು ಬಿಜೆಪಿ ಎಲ್ಲಾ ರೀತಿಯ ಷಢ್ಯಂತ್ರಗಳನ್ನು ಹೂಡಿದೆ. ಈ ಸರಕಾರಕ್ಕೆ ರೈತರ, ಕಾರ್ಮಿಕರ, ಮಹಿಳೆಯರ, ಯುವಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆರೋಪಿಸಿದರು.
ರೈತ-ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಎಸ್‌ಯುಸಿಐ ಮುಖಂಡರಾದ ಶರಣು ಹೇರೂರ, ಗೌತಮ ಪರತೂರಕರ, ಮಲ್ಲಿನಾಥ ಹುಂಡೇಕಲ್, ವೆಂಕಟೇಶ ದೇವದುರ್ಗ, ಮಲ್ಲಿಕಾರ್ಜುನ ಗಂದಿ, ಯೇಸಪ್ಪ ಕೇದಾರ, ವಿಠ್ಠಲ ರಾಠೋಡ, ರಾಜು ಒಡೆಯರ, ಅರುಣ ಹಿರೆಬಾನರ್, ಶ್ರೀಶೈಲ ಕೆಂಚಗುಂಡಿ, ಗೋವಿಂದ ಯಳವಾರ, ಚೌಡಪ್ಪ ಗಂಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಲ ಕಾಲ ರಸ್ತೆ ತಡೆದು ಬಂದ್ ಬಿಸಿ ಮುಟ್ಟಿಸಿದರು.