ಕಲಬುರಗಿ: ಕನ್ನಡ ನಾಡಿನ ವೈದ್ಯಕೀಯ ಜಗತ್ತಿಗೆ ಶರಣ ಸಾಹಿತ್ಯಿಕ, ಸಾಮಾಜಿಕ ಸೇವೆಗೆ ಮತ್ತೊಂದು ಹೆಸರು ಡಾ. ಶಾಂತವೀರ ಸುಂಕದ ನಿಧನರಾಗಿರುವುದಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ಬಸವರಾಜ್ ಪಾಟೀಲ್ ಸೇಡಂ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಅವರ ಪರಿವಾರ ಮತ್ತು ನಮ್ಮಂತಹ ಅನೇಕ ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ಅವರ ಕೊರತೆ ತುಂಬಿಕೊಳ್ಳುವ ಶಕ್ತಿ ದೇವರು ನಮಗೆ ದಯಪಾಲಿಸಲಿ. ಮತ್ತೊಮ್ಮೆ ಅಗಲಿದೆ ಆತ್ಮಕ್ಕೆ ನನ್ನ ನಮನಗಳು ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಮೃತರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೂಲತ: ಚಿಂಚೋಳಿಯವರಾಗಿದ್ದರೂ, ಸೇಡಂದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಕಲಬುರಗಿಯ ಗೋದುತಾಯಿ ನಗರದ ತಮ್ಮ ನಿವಾಸ ಕದಳಿಯಲ್ಲಿ ವಾಸವಾಗಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು ಸೇಡಂನ ನೃಪತುಂಗ ಅಧ್ಯಯನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದರು. ಸೇಡಂ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಮಾಡಿದ ಅಪ್ರತಿಮ ಸಾಧನೆಯಿಂದ ವೈದ್ಯಲೋಕ ಬಡವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.