ಕೊಣಾಜೆ : ದೇರಳಕಟ್ಟೆ ಸಮೀಪದ ನಾಟೆಕಲ್ ನಲ್ಲಿರುವ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಕ್ಯಾನ್ಸರ್ ವಿಭಾಗ ಮತ್ತು ಒಂದು ತಿಂಗಳು ನಡೆಯಲಿರುವ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ಸಕ್ರಿಯರಾಗಿದ್ದಾರೆ ಹಾಗೂ ಅವರ ಜೀವನ ಶೈಲಿಯೂ ಬದಲಾಗುತ್ತಿದೆ. ಆಧುನಿಕ ಕಾಲದಲ್ಲೂ ಕ್ಯಾನ್ಸರ್ ಬಂದರೆ ಗುಣ ಆಗುವುದೇ ಇಲ್ಲ ಎನ್ನುವ ತಪ್ಪು ಕಲ್ಪನೆ ಗ್ರಾಮೀಣ ಭಾಗದ ಜನರಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೊಂದು ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಗೊಂಡಿರುವುರಿಂದ ಇನ್ನಷ್ಟು ಸೇವೆ ಲಭ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ದೇರಳಕಟ್ಟೆ ಸಮೀಪದ ನಾಟೆಕಲ್ ನಲ್ಲಿರುವ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ನಡೆದ ಕ್ಯಾನ್ಸರ್ ವಿಭಾಗ ಉದ್ಘಾಟನಾ ಸಮಾರಂಭದಲ್ಲಿ ಒಂದು ತಿಂಗಳು ನಡೆಯಲಿರುವ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ತನ ಕ್ಯಾನ್ಸರ್ ಎನ್ನುವುದು ಸಾಮುದಾಯಿಕ ಸಮಸ್ಯೆಯಾಗಿದ್ದು, ಬದಲಾದ ಆಹಾರ ಪದ್ದತಿ ಕಾರಣ. ಆದರೂ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್, ಕ್ಯಾನ್ಸರ್ ಕಾಯಿಲೆ ಯಾರಿಗೂ ಬರಬಾರದು, ಬಂದರೂ ಉತ್ತಮ ಚಿಕಿತ್ಸೆ ಸಿಗಬೇಕಾದರೆ ಆಸ್ಪತ್ರೆಗಳ ಅವಶ್ಯಕತೆಯಿದೆ. ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರಾಜ್ಯದಾದ್ಯಂತ ಜನರು ಬರುವುದರಿಂದ ಕಣಚೂರು ಆಸ್ಪತ್ರೆಯಲ್ಲಿ ಆರಂಭಗೊಂಡಿರುವ ಕ್ಯಾನ್ಸರ್ ವಿಭಾಗ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೌಲಭ್ಯ ದಲ್ಲಿ ಸಹಯೋಗ ಹಿನ್ನೆಲೆಯಲ್ಲಿ ಕ್ಷೇಮಾ ವಿಕಿರಣ ಅಂಕಾಲಜಿ ವಿಭಾಗದ ನಡುವಿನ ಒಡಂ ಬಡಿಕೆ ಪತ್ರ ನಿಟ್ಟೆ ವಿವಿ ಕುಲಸಚಿವ ಪ್ರೊ.ಸತೀ ಶ್ ಕುಮಾರ್ ಭಂಡಾರಿ ಮತ್ತು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕೆ.ಮೋನು ವಿನಿಮಯ ಮಾಡಿಕೊಂಡರು.
ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ ಕ್ಯಾನ್ಸರ್ ವಿಭಾಗ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಆಯುಶ್ಮಾನ್ ಭಾರತ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರತ್ನಾಕರ್, ಕ್ಷೇಮಾ ರೇಡಿಯೇಶನ್ ಆಂಕಾಲಜಿ ವಿಭಾಗ ಮುಖ್ಯ ಸ್ಥ ಡಾ.ಜಯರಾಂ ಶೆಟ್ಟಿ, ನಿರ್ದೇಶಕ ಅಬ್ದುಲ್ ರಹ್ಮಾನ್, ವೈದ್ಯಕೀಯ ಅಧೀಕ್ಷಕ ಡಾ.ದೇವಿದಾಸ್ ಶೆಟ್ಟಿ, ಡಾ.ಎಚ್. ಎಸ್.ವೀರೂಪಾಕ್ಷ, ಕೆಎಂಸಿ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ವೈದ್ಯಕೀಯ ಅಂಕಾಲಜಿಸ್ಟ್ ಡಾ.ಗುರುಪ್ರಸಾದ್ ಭಟ್ ಸ್ವಾಗತಿಸಿದರು. ವೈದ್ಯಕೀಯ ಅಂಕಾಲಜಿಸ್ಟ್ ಡಾ.ನಜೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೀನಾ ನಸೀಬಾ ಕಾರ್ಯಕ್ರಮ ನಿರೂಪಿಸಿದರು.