ಕಲಬುರಗಿ: ಗೌತಮ ಬುದ್ಧರು ಮಧ್ಯಮ ಮಾರ್ಗದ ಮೂಲಕ ಜ್ಞಾನೋದಯ ಪಡೆದು ಜಗತ್ತಿನ ಮನುಕುಲದ ವಿಮೋಚನೆಗೆ ದಾರಿದೀಪವಾದರು ಎಂದು ಪ್ರೊ. ಈಶ್ವರ ಇಂಗನ್ ನುಡಿದರು.
ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ೬೫ನೇ ಧಮ್ಮ ಚಕ್ರ ಪರಿವರ್ತನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಅಕ್ಟೋಬರ್ ೧೪ ೧೯೫೬ರಂದು ನಾಗಪುರ ದೀಕ್ಷಾಭೂಮಿಯಲ್ಲಿ ೫ ಲಕ್ಷ ಅನುಯಾಯಿಗಳೊಂದಿಗೆ ಧಮ್ಮ ದೀಕ್ಷೆ ನೀಡಿ ಬೌದ್ಧ ಧರ್ಮವನ್ನು ಪುನರುತ್ಥಾನಗೊಳಿಸಿದರು ಎಂದರು.
ರಾಧಾಬಾಯಿ ಎಂ. ಖರ್ಗೆ ಹಾಗೂ ಕುಟುಂಬ ವರ್ಗ ಭಗವಾನ್ ಬುದ್ಧರಿಗೆ ಪುಷ್ಪಾರ್ಚನೆ ಮಾಡಿದರು. ಸಂಘಾನಂದ ಬಂತೇಜಿ ಹಾಗೂ ಬಿಕ್ಕುಗಳಿಂದ ಬುದ್ಧ ವಂದನೆ ನೆರವೇರಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ, ಮಾರುತಿರಾವ ಮಾಲೆ, ಪ್ರಗತಿಪರ ಚಿಂತಕ ಪ್ರೊ. ಎಚ್.ಟಿ. ಪೋತೆ, ಮಾಪಣ್ಣ ಗಂಜಗಿರಿ, ಭೀಮರಾವ ಟಿ.ಟಿ., ಕೆ.ಎಲ್. ಕಾಂಬಳೆ, ಆರ್.ಕೆ. ಬೇಗಾರ, ಡಾ. ಚಂದ್ರಶೇಖರ ದೊಡ್ಡಮನಿ, ಶ್ಯಾಮ ನಾಟೀಕರ್ ಸೇರಿದಂತೆ ಅನೇಕರು ಇದ್ದರು.