ವಾಡಿ: ಭೂಲೋಕದ ಮನುಕುಲವನ್ನೇ ನಡುಗಿಸಿದ್ದ ಸಾಂಕ್ರಾಮಿಕ ರೋಗ ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ಆರಂಭಿಸಿದ ಆರೋಗ್ಯ ಇಲಾಖೆ, ದೇಶದಲ್ಲಿ ಶತಕೋಟಿ ಲಸಿಕೆ ನೀಡುವ ಮೂಲಕ ದಾಖಲೆ ಬರೆದಿದೆ. ಪರಿಣಾಮ ಈ ವೀರೋಧಾತ ಶ್ರಮವನ್ನು ಸಂಭ್ರಮಿಸುವ ಮೂಲಕ ಆರೋಗ್ಯ ಸಿಬ್ಬಂದಿಗಳು ಗೆಲುವಿನ ನಗೆ ಬೀರಿದ್ದಾರೆ.
ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು, ಶುಕ್ರವಾರ ಆಸ್ಪತ್ರೆಗೆ ಆಗಮಿಸಿದ ಹೊರ ರೋಗಿಗಳಿಗೆ ಸಿಹಿ ಹಂಚಿ ಲಸಿಕೋತ್ಸವ ಆಚರಿಸಿದರು. ಆಸ್ಪತ್ರೆಯ ಅಂಗಳದಲ್ಲಿ ರಂಗೋಲಿ ಮೂಲಕ ನೂರು ಕೋಟಿ ಕೋವಿಡ್-೧೯ ಲಸಿಕೆ ಸಂಭ್ರಮಾಚರಣೆ ಎಂದು ಬರೆಯುವ ಮೂಲಕ ಸಂತಸ ಹಂಚಿಕೊಂಡರು. ಬಣ್ಣಬಣ್ಣದ ಬಲೂನುಗಳನ್ನು ಹಿಡಿದು ಕಲರ್‌ಫುಲ್ ನಗೆ ಬೀರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪ್ರಾಥಮಿಕ ಆರತೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಕ್ರಮ ಗೌನಳ್ಳಿ, ದೇಶದಲ್ಲಿ ಮಾರಣಹೋಮ ಸೃಷ್ಠಿಸಿ ಮನೆ ಮನಗಳಲ್ಲಿ ಕಣ್ಣೀರು ತುಂಬಿಸಿದ್ದ ಕೊರೊನಾ ರೋಗವನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಲಸಿಕಾ ಅಭಿಯಾನಗಳಿಗೆ ಹೆಚ್ಚಿನ ಆಧ್ಯತೆ ನೀಡಿದ್ದರಿಂದ ಇಂದು ಶತಕೋಟಿ ಲಸಿಕೆ ನೀಡುವ ಗುರಿ ತಲುಪಲಾಗಿದೆ.
ಸರಕಾರದ ಪ್ರೋತ್ಸಾಹ, ಜನರು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ದೊಡ್ಡ ಗಿರಿಯೊಂದನ್ನು ತಲುಪಿ ಜನರ ಆರೋಗ್ಯ ಸುರಕ್ಷತೆ ಕಾಪಾಡಿದ ಧನ್ಯತೆ ನಮ್ಮದಾಗಿದೆ. ಲಸಿಕೆ ಕಡ್ಡಾಯವಾಗಿ ಸ್ವೀಕರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೂರನೇ ಅಲೆ ಬರದಂತೆ ತಡೆಯಲು ಲಸಿಕೆಯೊಂದೇ ರಾಮಬಾಣವಾಗಿದೆ. ವಿವಿಧ ಕಲ್ಪಿತ ಆತಂಕಗಳಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅನಿತಾ ಮಲಗೊಂಡ, ವಿಜಯಲಕ್ಷ್ಮೀ, ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಮಂಜುಳಾ ಬುಳ್ಳಾ, ಶುಶ್ರೂಷಕಾಧಿಕಾರಿಗಳಾದ ರೇಣುಕಾ ಛಲವಾದಿ, ನೀಲಮ್ಮಾ ಪೂಜಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಅಶ್ವಿನಿ ಆಲೂರ, ಮಂಜುಳಾ, ವಿಜುಬಾಯಿ, ರಾಧಿಕಾ, ಬುಗ್ಗಮ್ಮಾ, ಜಗದೇವಿ, ಸಮುದಾಯ ಆರೋಗ್ಯಾಧಿಕಾರಿ ತಾರಾಸಿಂಗ್ ರಾಠೋಡ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಮುರುಳಿಧರ ಕುಲಕರ್ಣಿ, ಆಶಾಕಾರ್ಯಕರ್ತೆಯರಾದ ರತ್ನಮ್ಮಾ, ವಿಜುಬಾಯಿ, ಶಿವುಲೀಲಾ ಹಡಪದ, ಅರುಣಾ, ತಿಪ್ಪಮ್ಮಾ, ಆಶಾ, ಆನಂದಮ್ಮಾ, ಸುನೀತಾ, ಅನಿತಾ, ಶಾಂತಾಬಾಯಿ, ರೇಣುಕಾ, ಮಾಣಿಕಮ್ಮಾ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.