ಶಹಾಬಾದ: ತಾನೇ ಉರಿದು ಜಗಕೆ ಬೆಳಕು ನೀಡುವ ಜ್ಯೋತಿಯನ್ನು ನೋಡುತ್ತಾ ಮನುಷ್ಯ ತನ್ನ ಸ್ವಾರ್ಥವನ್ನು ಮರೆತು, ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲು ದೀಪಾವಳಿ ಹಬ್ಬವು ಪ್ರೇರಣೆಯನ್ನು ನೀಡುತ್ತದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಶುಕ್ರವಾರ ನಗರದ ಶರಣಬಸವೇಶ್ವರ ದೇವಾಸ್ಥಾನದಲ್ಲಿ ವೀರಶೈವ ಮಹಿಳಾ ಘಟಕದ ವತಿಯಿಂದ ದೀಪಾವಳಿ ಹಬ್ಬದ ನಿಮಿತ್ತ ಆಯೋಜಿಸಲಾದ ಲಕ್ಷ ದಿಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಟ್ಟದ್ದರ ಮೇಲೆ ಒಳ್ಳೆಯದು ಜಯ ಸಾಧಿಸಿದ ಹಾಗೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ರೀತಿ ಈ ದೀಪಾವಳಿ ನಮ್ಮೆಲ್ಲರ ಬಾಳಿನಲ್ಲೂ ಶಾಶ್ವತವಾಗಿ ಬೆಳಕು ಚೆಲ್ಲಲಿ. ಸಂಭ್ರಮ ಸಡಗರದಿಂದ ತುಂಬಿರುವ ಈ ಹಬ್ಬ ಒಂದು ದೀಪದಿಂದ ಇನ್ನೊಂದು ದೀಪ ಬೆಳಗುವ ಹಬ್ಬವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೀಪಾವಳಿ ಸಂಭ್ರಮದಲ್ಲಿ ದೀಪ ಹಚ್ಚುವಾಗ ಮತ್ತು ಪಟಾಕಿ ಸಿಡಿಸುವಾಗ ಎದುರಾಗುವ ಅನಾಹುತಗಳು ಸಹಜವಾಗಿಯೇ ನಮ್ಮ ನಿರ್ಲಕ್ಷ್ಯದಿಂದಲೇ ಉಂಟಾಗಿ ಸಂಪೂರ್ಣ ಹಬ್ಬದ ವಾತಾವರಣವನ್ನೇ ಹಾಳು ಮಾಡಿ ಬಿಡಬಹುದು. ಹಾಗಾಗಿ ಆದಷ್ಟು ಸುರಕ್ಷಿತವಾಗಿ ದೀಪಾವಳಿ ಆಚರಿಸಿಕೊಳ್ಳಿ ಎಂದು ಹೇಳಿದರು.
ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಮಾತನಾಡಿ,ದೀಪಾವಳಿ ಹಬ್ಬವು ದುಷ್ಟತನದ ಮೇಲೆ ಒಳ್ಳೆಯತನದ ಗೆಲುವನ್ನು ಆಚರಿಸುತ್ತದೆ. ಯಾವಾಗ ಒಳ್ಳೆಯತನವು ಜಾಗೃತಗೊಂಡು ಸಂಘಟಿತವಾಗಿ ಕಾರ್ಯಪೃವೃತ್ತವಾಗುತ್ತದೋ, ಆಗ ದುಷ್ಟತೆಯ ಪ್ರಭಾವವು ಕಡಿಮೆಯಾಗುತ್ತದೆ. ಕೆಟ್ಟತನವನ್ನು ಹಾಗೂ ಅಹಂಕಾರದ ಉಚ್ಛಾಟನೆಯನ್ನು ಮಾಡಿ ಆತ್ಮಜ್ಯೋತಿಯನ್ನು ಪ್ರಕಾಶಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ, ಉಮಾ ದಂಡೋತಿ, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಜಗದೇವಿ ಕಡ್ಲಿ, ಅಂಜನಾ .ಎಸ್.ವಸ್ತ್ರದ್, ಪಾರ್ವತಿ ಜಾನವಾಡ, ಬಿಂದು ಕೋಬಾಳ, ಶಕುಂತಲಾ ಪಾಟೀಲ, ನಾಗಮ್ಮ ಮುಗುಳನಾಗಾಂವ, ವಿಜಯಕುಮಾರ ಮುಟ್ಟತ್ತಿ, ಶಿವಕುಮಾರ ಇಂಗಿನಶೆಟ್ಟಿ, ರಾಜಶೇಖರ ಬೆಳಗುಂಪಿ, ಅಣವೀರ ಇಂಗಿನಶೆಟ್ಟಿ, ವೀರಭದ್ರಪ್ಪ ಇಂಗಿನಶೆಟ್ಟಿ, ಬಸವರಾಜ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ಶರಬು ಪಟ್ಟೇದಾರ,ಶರಣಬಸಪ್ಪ ಜೆರಟಗಿ, ಬೀಮಾಶಂಕರ ಕುಂಬಾರ,ಮನೋಹರ ಮಾಟ್ನಳ್ಳಿ, ಶರಣಗೌಡ ಆಂದೋಲಾ,ರಾಜು ಕೋಬಾಳ, ಸಿದ್ದೇಶ್ವರ ವಸ್ತ್ರದ್,ರಾಜಶೇಖರ ಘಂಟಿಮಠ,ಪ್ರಶಾಂತ ಮರಗೋಳ,ಡಾ.ವಿನೋದ ಕೌಲಗಿ, ದೀಪುಗೌಡ ಕಿರಣಗಿ, ಲಿಂಗರಾಜ ಮಲಕೂಡ ಇತರರು ಇದ್ದರು.