12 ರಿಂದ 18 ವರೆಗೆ ದೃಶ್ಯಬೆಳಕು ಪ್ರಶಸ್ತಿ ಪ್ರದಾನ ಸಮಾರಂಭ-ರಾಜ್ಯಮಟ್ಟದ ಚಿತ್ರ-ಶಿಲ್ಪಕಲಾ ಶಿಬಿರ

0
103

ಕಲಬುರಗಿ: ನಗರದ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತನ್ನ ೮ನೆಯ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ದಿನಾಂಕ: ೧೨, ೧೩ ಮತ್ತು ೧೪ ನವೆಂಬರ್ ೨೦೨೧ ರಂದು ನಗರದ ರಂಗಾಯಣದ ಕಲಾಗ್ಯಾಲರಿಯಲ್ಲಿ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ, ರಾಜ್ಯಮಟ್ಟದ ದೃಶ್ಯಬೆಳಕು ಗೌರವ ಪುರಸ್ಕಾರ, ದೃಶ್ಯಬೆಳಕು ಪ್ರಶಸ್ತಿ ಮತ್ತು ದೃಶ್ಯಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ವಿಶೇಷ ಸನ್ಮಾನ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಸ್ಥಾಪಿಸಿದ “ದೃಶ್ಯಬೆಳಕು ಪ್ರಶಸ್ತಿ”ಯು ಇಂದು ಕಲಬುರಗಿ ಗಡಿದಾಟಿ ರಾಜ್ಯದ ಅಗಲಕ್ಕೂ ವ್ಯಾಪಿಸಿದೆ. “ದೃಶ್ಯಬೆಳಕು” ಎನ್ನುವ ಹೆಸರೇ ದೃಶ್ಯಕಲಾವಿದರಿಗೆ ಈ ಪ್ರಶಸ್ತಿಯ ಜೊತೆ ಭಾವನಾತ್ಮಕ ಸಂಬಂಧ ಬೆಳಿಸಿಕೊಳ್ಳುವ ಹಾಗೆ ಮಾಡಿದೆ. ಇಂತಹ ಪ್ರಶಸ್ತಿಗೆ ಈಗ ೮ನೆಯ ವರ್ಷದ ಸಂಭ್ರಮ.

Contact Your\'s Advertisement; 9902492681

ದೃಶ್ಯಬೆಳಕು ಗೌರವ ಪುರಸ್ಕಾರ: ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ೨೦೨೧ನೇ ಸಾಲಿನ ’ದೃಶ್ಯಬೆಳಕು ಗೌರವ ಪುರಸ್ಕಾರ’ಕ್ಕೆ ನಾಡಿನ ಹೆಸರಾಂತ ಖ್ಯಾತ ಶಿಲ್ಪಕಲಾವಿದ ನಾಗಪ್ಪ ಪ್ರದಾನಿ ಅವರನ್ನು ಆಯ್ಕೆ ಮಾಡಿದೆ. ದೃಶ್ಯಬೆಳಕು ಗೌರವ ಪುರಸ್ಕಾರವು ೫,೦೦೦/- ರೂ.ಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣೆಕೆಯನ್ನು ಒಳಗೊಂಡಿರುತ್ತದೆ. ಕನ್ನಡ ದೃಶ್ಯಕಲಾ ಸಂಸ್ಕೃತಿಗೆ ಗಣನೀಯ ಕೊಡುಗೆ ನೀಡಿರುವ ನಾಗಪ್ಪ ಪ್ರದಾನಿ ಅವರು ಮೂಲತಃ ರಾಯಚೂರು ಜಿಲ್ಲೆಯವರಾದ ನಾಗಪ್ಪ ಪ್ರದಾನಿ ಅವರು ಪ್ರಸ್ತುತ ಬೆಂಗಳೂರಿನ ಚಿತ್ರಕಲಾ ಪರಿ?ತನ ದೃಶ್ಯಕಲಾ ಕಾಲೇಜಿನಲ್ಲಿ ಶಿಲ್ಪಕಲಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾಗಪ್ಪ ಪ್ರದಾನಿ ಅವರು ಇತ್ತಿಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮಿನಿ ವಿಧಾನ ಸೌಧದ ಎದುರು ೧೫ ಅಡಿ ಎತ್ತರ ಹಾಗೂ ೧,೭೦೦ ಕೆ.ಜಿ. ತೂಕವಿರುವ ಪೂರ್ಣ ಪ್ರಮಾಣದ ಡಾ. ಬಿ.ಆರ್. ಅಂಬೇಡ್ಕರ್‌ರವರ ಕಂಚಿನ ವಿಗ್ರಹವನ್ನು ನಿರ್ಮಿಸಿದ್ದಾರೆ.

ಇವರು ಫೈಬರ್, ಲೋಹ ಮತ್ತು ಶಿಲಾ ಮಾಧ್ಯಮಗಳಲ್ಲಿ ಸಾಕ? ಭಾವಶಿಲ್ಪ ಮತ್ತು ಆಧುನಿಕ ಶಿಲ್ಪಕಲಾಕೃತಿಗಳನ್ನು ರಚಿಸಿದ್ದಾರೆ. ಬೆಂಗಳೂರು, ಮುಂಬಯಿ ಮತ್ತು ದೆಹಲಿಗಳಲ್ಲಿ ಶಿಲ್ಪಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ನಾಗಪ್ಪ ಪ್ರದಾನಿ ಅವರು ಹಲವು ಕಲಾಸ್ಪರ್ಧೆಗಳಲ್ಲಿ ಬಹುಮಾನ ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ೧೯೯೫ರಲ್ಲಿ ಸದ್ಭಾವನಾ ಪ್ರಶಸ್ತಿ, ೧೯೯೮-೨೦೦೦ರಲ್ಲಿ ಮೈಸೂರು ದಸರಾ ಪ್ರಶಸ್ತಿ, ೨೦೦೧ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಎರಡನೇ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ನವದೆಹಲಿಯ ಕೇಂದ್ರ ಲಲಿತಕಲಾ ಅಕಾಡೆಮಿಯ ೩೧ನೇ ವಾರ್ಷಿಕ ಕಲಾ ಪ್ರಶಸ್ತಿ, ೨೦೧೨ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿರುವ ಇವರ ಶಿಲ್ಪಕಲಾಕೃತಿಗಳು ದೇಶ-ವಿದೇಶಗಳಲ್ಲಿ ಸಂಗ್ರಹಗೊಂಡಿವೆ. ಇವರು ಶಿಲ್ಪಕಲಾ ಕ್ಷೇತ್ರದಲ್ಲಿ ಸಲ್ಲಸಿದ ಸೇವೆಯನ್ನು ಪರಿಗಣಿಸಿ ೨೦೨೧ನೇ ಸಾಲಿನ ’ದೃಶ್ಯಬೆಳಕು ಗೌರವ ಪುಸಸ್ಕಾರ’ ನೀಡಿ ಗೌರವಿಸಲಾಗುತ್ತಿದೆ.

ದೃಶ್ಯಬೆಳಕು ಪ್ರಶಸ್ತಿ: ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ೮ನೇ ರಾಜ್ಯಮಟ್ಟದ ವಾರ್ಷಿಕ ಕಲಾಸ್ಪರ್ಧೆ ಏರ್ಪಡಿಸಿ, ಕಲಾಸ್ಪರ್ಧೆಯಲ್ಲಿ ವಿಜೇತರಾದ ಆರು ಜನ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರ ಕಲಾವಿದರಿಗೆ ’ದೃಶ್ಯಬೆಳಕು’ ಪ್ರಶಸ್ತಿ ನೀಡುತ್ತದೆ. ದೃಶ್ಯಬೆಳಕು ಪ್ರಶಸ್ತಿಯು ೫,೦೦೦/- ರೂ.ಗಳ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಈ ಸಾಲಿನ ೮ನೆಯ ವಾರ್ಷಿಕ ’ದೃಶ್ಯಬೆಳಕು’ ಪ್ರಶಸ್ತಿಗೆ ಕಾವೇರಿ ಎಚ್. ಪೂಜಾರ (ಬದಾಮಿ), ಶ್ರೀದತ್ತ ಗಡಾದೆ (ಪುಣೆ), ಗಿರೀಶ ಬಿ. ಕುಲಕರ್ಣಿ (ಕಲಬುರಗಿ), ವಿನೋದ ಅರ್ಜುನ (ಚಾಮರಾಜನಗರ), ಸಂತೋಷಸಿಂಗ್ ಹಜೇರಿ (ಬಾಗಲಕೋಟೆ), ಹಣಮಂತ ಬಾಡದ (ಯಾದಗಿರಿ) ಅವರು ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ೮ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಮತ್ತು ರಾಜ್ಯಮಟ್ಟದ ಚಿತ್ರ-ಶಿಲ್ಪಕಲಾ ಶಿಬಿರ

ನವೆಂಬರ್ ೧೨, ೧೩ ಮತ್ತು ೧೪ ರಂದು ರಾಜ್ಯಮಟ್ಟದ ಚಿತ್ರ-ಶಿಲ್ಪಕಲಾ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ೧೦೦ಕ್ಕೂ ಹೆಚ್ಚು ಚಿತ್ರಕಲಾವಿದರ ಚಿತ್ರ-ಶಿಲ್ಪ ಮತ್ತು ಛಾಯಾಚಿತ್ರಗಳು ಬೆಳಿಗ್ಗೆ ೧೦.೦೦ ರಿಂದ ಸಂಜೆ ೫.೩೦ರ ವರೆಗೆ ಪ್ರದರ್ಶನಗೊಳ್ಳಲಿವೆ. ದಿನಾಂಕ: ನವೆಂಬರ್ ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕಲಬುರಗಿಯ ಹಿರಿಯ ಕಲಾವಿದರಾದ ಮಲ್ಲಿಕಾರ್ಜುನ ಶೆಟ್ಟಿ ಅವರು ಕಲಾಪ್ರದರ್ಶನವನ್ನು ಉದ್ಘಾಟಿಸುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಾದ ಕೆ.ಎಚ್. ಚನ್ನೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ವಿಭಿನ್ನ ಮಾಧ್ಯಮದ ಅತ್ಯುತ್ತಮವಾದ ಚಿತ್ರಕಲಾಕೃತಿಗಳನ್ನು ೮ನೆಯ ವಾರ್ಷಿಕ ಕಲಾಪ್ರದರ್ಶನದ ಅಂಗವಾಗಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ನಗರದ ವಾಣಿಜ್ಯೊದ್ಧಿಮಿಗಳು, ಕೈಗಾರಿಕೋದ್ಯಮಿಗಳು, ಇಂಜೀನಿಯರ‍್ಸ್‌ಗಳು, ವೈದ್ಯರು, ಕಲಾಸಕ್ತರು ಈ ಕಲಾಪ್ರದರ್ಶನಕ್ಕೆ ಆಗಮಿಸಿ ಕಲಾಕೃತಿಗಳನ್ನು ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು.

ಇದೆ ಸಂದರ್ಭದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಚಿತ್ರ-ಶಿಲ್ಪಕಲಾ ಶಿಬಿರವನ್ನು ಹಮ್ಮಿಕೊಂಡಿದ್ದು, ಚಿತ್ರ-ಶಿಲ್ಪಕಲಾ ಶಿಬಿರದ ಉದ್ಘಾಟನೆಯನ್ನು ರಂಗಾಯಣದ ಆಡಳಿತಾಧಿಕಾರಿಗಳಾದ ಶ್ರೀಮತಿ ಜಗದಿಶ್ವರಿ ಅ. ನಾಶಿ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ಶ್ರೀ ನಟರಾಜ ಶಿಲ್ಪಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ನಯನಾ ಬಾಬುರಾವ್ ಅವರು ಶಿಬಿರದ ಸಂಚಾಲಕತ್ವನ್ನು ವಹಿಸಲಿದ್ದಾರೆ.

ರಾಜ್ಯಮಟ್ಟದ ಶಿಬಿರದಲ್ಲಿ ಡಾ. ಎಸ್.ಎಸ್. ಗಡ್ಡಿ (ಯಾದಗಿರಿ), ವಿರೇಶ ರುದ್ರಸ್ವಾಮಿ (ಬಾಗಲಕೋಟೆ), ಶಿವಪ್ರಸಾದ ಬನ್ನಟ್ಟಿ (ಕಲಬುರಗಿ), ಕವಿತಾ ಕಟ್ಟೆ (ಕಲಬುರಗಿ), ಶಿವಕುಮಾರ ಪ್ರಕಾಶ (ಬೀದರ್), ಗಂಗಮ್ಮ ವಾಲಿಕಾರ (ಕಲಬುರಗಿ), ನಿಂಗನಗೌಡ ಸಿ. ಪಾಟೀಲ (ವಿಜಯಪೂರ), ಅರುಣ ಕಾಡಾಪುರೆ (ಬೆಳಗಾವಿ), ಬಾಲಾಜಿ ಗಾಯಕವಾಡ (ಕಲಬುರಗಿ), ವಿಜಯಕುಮಾರ ಎಸ್. ಔರಾದ (ಕಲಬುರಗಿ), ಹಣಮಂತ ಮಲ್ಕಾಪೂರೆ (ಬೀದರ್), ದಾನಯ್ಯ ಸಿ. ಚೌಕಿಮಠ (ಬಾಗಲಕೋಟೆ), ರಾಜಕುಮಾರ ಮಾಲಗತ್ತಿ (ಕಲಬುರಗಿ), ಮೌನೇಶ ಬಡಿಗೇರ್ (ಕಲಬುರಗಿ), ಪ್ರಸನ್ನ ಶಿಲ್ಪಿ (ಕಲಬುರಗಿ) ಅವರು ಭಾಗವಹಿಸಿ ತಲಾ ಒಂದೊಂದು ಕಲಾಕೃತಿಗಳನ್ನು ರಚಿಸಲಿದ್ದಾರೆ.

ದಿನಾಂಕ: ೧೪.೧೧.೨೦೨೧ ರಂದು ಬೆಳಿಗ್ಗೆ ೧೧:೦೦ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವನ್ನು ನಗರದ ಹಿರಿಯ ಚಿತ್ರಕಲಾವಿದರಾದ ಶ್ರೀ ಬಸವರಾಜ ಎಲ್. ಜಾನೆ ಅವರು ನಡೆಸಿಕೊಡುವವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಹಿರಿಯ ಶಿಲ್ಪಕಲಾವಿದರಾದ ಶ್ರೀ ಮಾನಯ್ಯಾ ನಾ. ಬಡಿಗೇರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ದತ್ತಪ್ಪ ಸಾಗನೂರ ಅವರು ಭಾಗವಹಿಸುವರು. ಕಲಬುರಗಿ ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಭಾಕರ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ

ವಿಶೇಷ ಸನ್ಮಾನಿತರು: ಕರ್ನಾಟಕ ಲಲಿತಕಲಾ ಅಕಾಡೆಮಿಯ ೪೯ನೆಯ ವಾರ್ಷಿಕ ಕಲಾಪ್ರದರ್ಶನದ ಬಹುಮಾನಿತರಾದ ಸಂತೋಷ ರಾಠೋಡ, ಚಂದ್ರಶೇಖರ ಜಿ. ಪಾಟೀಲ ಮತ್ತು ದಸ್ತಗಿರಿ ಮಸ್ತಾನಸಾಬ್ ಹಾಗೂ ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ: ಶಿವಪ್ರಸಾದ ಎಸ್. ಬನ್ನಟ್ಟಿ ಇವರಿಗೆ ಸನ್ಮಾನಿಸಲಾಗುವುದು. ನಗರದ ಯುವ ಸಂಗೀತಗಾರರಾದ ಜಯತೀರ್ಥ ಆದ್ಯ, ಸ್ವಾತಿ ಶಂಕರ ಜೋಶಿ ಮತ್ತು ಸಿದ್ದಾರ್ಥ ಡಿ. ಚಿಮ್ಮಾಯಿದ್ಲಾಯಿ ಅವರು ಸುಗಮ ಸಂಗೀತವನ್ನು ಪ್ರಸ್ತುತಪಡಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here