ಕಲಬುರಗಿ ನಗರ ಗಾಂಜಾ ನಗರವಾಗಿ ಮಾರ್ಪಟ್ಟಿದೆ.
ರೌಡಿ ಪಟ್ಟಿಯಲ್ಲಿರುವವರು ಬಿಜೆಪಿ ಸೇರಿದರೆ ಆ ಪಟ್ಟಿಯಿಂದ ಹೊರಗೆ.
ಲಾಡ್ಜ್ ಗಳು ಪೊಲೀಸರ ಸೆಟೆಲ್ ಮೆಂಟ್ ಕೇಂದ್ರಗಳಾಗಿ ಪರಿವರ್ತನೆ.
ಹಾಡುಹಗಲೇ ಬಸ್ ನಿಲ್ದಾಣದಲ್ಲಿ ಕೊಲೆ ನಡೆದು ಭೀತಿ ಮಾತಾವರಣ ನಿರ್ಮಾಣ.
ಜೂಜು, ಮಸಾಜ್ ಪಾರ್ಲರ್ ಗಳು, ಅಕ್ರಮ ಅಕ್ಕಿ ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿವೆ.
ಕಲಬುರಗಿ: ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆ ಇದೆ ಎನ್ನುವುದೇ ಜನರಿಗೆ ಮರೆತುಹೋಗಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಚಟುಚಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ಗಾಂಜಾ, ಮಾದಕವಸ್ತುಗಳು ಮಾರಾಟ, ಇಸ್ಪೀಟ್- ಮಟ್ಕಾದಂತ ದಂದೆಗಳು ಎಗ್ಗಿಲ್ಲದೆ ಸಾಗಿವೆ..ಕಲಬುರಗಿ ಸಿಟಿ ಗಾಂಜಾ ಸಿಟಿಯಾಗಿ ಮಾರ್ಪಟ್ಟಿದೆ. ಗೃಹ ಇಲಾಖೆ ವಸೂಲಿಗೆ ಇಳಿದಿದೆ. ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಯಾರಿಗೂ ಸರ್ಕಾರದ ಭಯ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪಿಸಿ ಯಿಂದ ಡಿಸಿವರೆಗೂ ಎಲ್ಲ ಕಡೆ ಫಿಕ್ಸ್ ಆಗಿದೆ. ಚಿತ್ತಾಪುರದ ಸಿಪಿಐ ಎರಡು ಸಲ ವರ್ಗಾವಣೆಯಾದರೂ ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದರೆ ಕಾರಣ ಏನು? . ಅಧಿಕಾರಿಗಳು ಹಣ ಕೊಟ್ಟು ಜಿಲ್ಲೆಗೆ ವರ್ಗಾವಣೆ ಮಾಡಿಕೊಂಡು ಬಂದು ತಮ್ಮ ಇನ್ವೆಸ್ಟ್ ಮೆಂಟ್ ನ್ನು ವಸೂಲಿ ಮಾಡುತ್ತಿದ್ದಾರೆ.
ಪ್ರತಿಯೊಂದು ಸಿಪಿಐ, ಪಿಎಸ್ಐ, ಎಎಸ್ ಐ ಐಗಳಿಗೆ ಪ್ರತಿನಿತ್ಯ ಕನಿಷ್ಠ ತಲಾ 50 ಕೇಸು ದಾಖಲಿಸಲೇಬೇಕು ಎಂದು ಮೇಲಿನಿಂದ ಆದೇಶ ನೀಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲೆಯ ಜನರು ನೆಮ್ಮದಿಯ ಜೀವನ ಮಾಡಲು ಹೇಗೆ ಸಾಧ್ಯ.? ಗ್ರಾಮೀಣ ಭಾಗದ ಜನರು ಬೈಜ್ ಹತ್ತಲು ಹೆದರುವಂತಾಗಿದೆ. ದಾಖಲಾತಿಗಳು ಇದ್ದರೂ ರೂ 500 ದಂಡ ವಸೂಲಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 701 ಕೋಟಿ ರೂಪಾಯಿ ಪೊಲೀಸ್ ಇಲಾಖೆಯಿಂದ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದರು.
ನಗರ ಹಾಗೂ ಜಿಲ್ಲೆಯಲ್ಲಿ ಗಾಂಜಾ, ಮಾದಕ ವಸ್ತುಗಳು ಸುಲಭವಾಗಿ ದೊರೆಯುತ್ತಿದೆ. ಇದಕ್ಕೆ ಪೊಲೀಸರೇ ಖುದ್ದಾಗಿ ಇಂತಹ ಅಕ್ರಮ ಚಟುಚಟಿಕೆಗಳಿಗೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಇಲ್ಲಿನ ಪ್ರತಿಷ್ಠಿತರ ಅಕ್ರಮ ಚಟುವಟಿಕೆಯ ತಾಣದ ಮೇಲೆ ದಾಳಿ ಮಾಡಲು ಬೆಳಗಾವಿ, ಬೆಂಗಳೂರು ಅಲ್ಲದೇ ಸೋಲಾಪುರ ಪೊಲೀಸರು ಬಂದಿದ್ದರು ಎಂದರು.
ಅಫೀಮು ಗಾಂಜಾ ತಾಣಗಳ ಮೇಲೆ ದಾಳಿ ಮಾಡುವ ಮುನ್ನ ಪೊಲೀಸರೆ ಅಕ್ರಮ ಸಂಗ್ರಹಗಾರರಿಗೆ ಮಾಹಿತಿ ನೀಡಿ ಕಡಿಮೆ ಪ್ರಮಾಣದಲ್ಲಿ ಸಂಗ್ರಹಿಸಿಡುವಂತೆ ಹೇಳುತ್ತಾರೆ. ಪ್ರತಿಯೊಂದು ವೈನ್ ಶಾಪ್ ಗಳಿಂದ ಪೊಲೀಸ್ ಇಲಾಖೆಗೆ ಕನಿಷ್ಠ 5000 ರೂಗಳ ಪ್ರತಿತಿಂಗಳ ಮಾಮೂಲು ಫಿಕ್ಸ್ ಮಾಡಲಾಗಿದೆ. ಅಕ್ರಮ ಅಕ್ಕಿ ಸಾಗಾಣಿಕೆಗೆ ಬಳಸುವ ಲಾರಿಗಳಲ್ಲಿ 45 ಲಾರಿಗಳು ಪೊಲೀಸರಿಗೆ ಸೇರಿವೆ. ಪ್ರತಿ ಲಾರಿಗೆ ಪ್ರತಿ ತಿಂಗಳಿಗೆ ರೂಪಾಯಿ ಮೂರು ಲಕ್ಷ ಮಾಮೂಲಿ ಫಿಕ್ಸ್ ಮಾಡಲಾಗಿದೆ. ಅಕ್ರಮ ಗುಟ್ಕಾ ಮಾರಾಟಕ್ಕೆ ಪ್ರತಿ ತಿಂಗಳು ರೂ 2.50 ಲಕ್ಷ ಮಾಮೂಲು ಫಿಕ್ಸ್ ಆಗಿದೆ ಎಂದು ವಿವರಿಸಿದರು.
ಇನ್ನೂ ಅಚ್ಚರಿ ಎಂದರೆ, ಬಿಜೆಪಿಗೆ ಸೇರಿದ ತಕ್ಷಣ ರೌಡಿ ಶೀಟರ್ ಪಟ್ಟಿಯಲ್ಲಿ ಇರುವವರು ಆಚೆ ಬಂದುಬಿಡಬಹುದು. ಇನ್ನೂ ತನಿಖೆ ನಡೆಯುತ್ತಿರುವವನ್ನು ಕೂಡಾ ಪಟ್ಟಿಯಿಂದ ಕೈಬಿಡಲಾಗಿದೆ. ಒಬ್ಬ ರೌಡಿ ಶೀಟರ್ ನನ್ನು ಪಟ್ಟಿಯಿಂದ ಕೈಬಿಡಬೇಕಾದರೆ ಆತ ಕ್ರೈಮ್ನಲ್ಲಿ ಭಾಗವಹಿಸದೆ ಸುಶಿಕ್ಷಿತ ಜೀವನ ನಡೆಸುತ್ತಿರುವ ಕುರಿತು ದಾಖಲೆ ಹೊಂದಿರಬೇಕು. ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ನಿಯಮ ಪಾಲಿಸುತ್ತಿದ್ದಾರೆಯೆ? ಎಂದು ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳು ರೌಡಿ ಶೀಟರ್ ಗಳ ಜತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಮಸಾಜ್ ಪಾರ್ಲರ್, ಜೂಜು ಅಡ್ಡೆಗಳು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದೆ. ಯಾವ ಅಪಾರ್ಟ್ನೆಂಟ್ ಹಾಗೂ ಮನೆಗಳಲ್ಲಿ ನಡೆಯುತ್ತಿವೆ ಎನ್ನುವುದು ಪೊಲೀಸರಿಗೆ ಗೊತ್ತಿಲ್ಲವೇ? ಪೊಲೀಸರು ಲಾಡ್ಜ್ ಗಳನ್ನೂ ಸೆಟಲ್ ಮೆಂಟ್ ಸ್ಪಾಟ್ಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇಷ್ಟೆಲ್ಲ ಅಕ್ರಮ ಅವ್ಯವಹಾರ ಎಲ್ಲಿ ನಡೆಯುತ್ತಿದೆ ಎಂದು ಗೊತ್ತಿಲ್ಲದಷ್ಟು ಇಂಟಲ್ಜೆನ್ಸಿ ವೀಕ್ ಇದೆಯಾ? ಎಂದು ಪ್ರಶ್ನಿಸಿದರು.
ಕಲಬುರಗಿ ನಗರ ಕೊಲೆ ಪಾತಕಿಗಳ ತಾಣವಾಗಿದೆ. ಹಾಡುಹಗಲೇ ಇತ್ತೀಚಿಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಕೊಲೆ ನಡೆದು ಸಾರ್ವಜನಿಕರಿಗೆ ಭೀತಿ ಮೂಡಿಸಿತ್ತು. ಪಾತಕಿಗಳು ಯಾವುದೇ ಅಂಜಿಕೆಯಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಭೀತಿ ಹುಟ್ಟಿಸಿ ಕೊಲೆ ಮಾಡುತ್ತಿದ್ದಾರೆ ಎಂದರೆ ಈ ವ್ಯವಸ್ಥೆ ಯಲ್ಲಿ ಅವರಿಗೆ ರಕ್ಷಣೆ ಸಿಗುತ್ತಿದೆ ಎಂದು ಗೊತ್ತಿದೆ. ಜನರಿಗೆ ತೋರಿಸಲು ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಅವರಲ್ಲಿ ಎಲ್ಲರೂ 25 ವರ್ಷ ಒಳಗಿನವರು. ಯಾವ ವಯಸಲ್ಲಿ ಯುವಕರು ಉದ್ಯೋಗ ಹೊಂದಬೇಕಾಗಿತ್ತೋ ಆ ವಯಸ್ಸಲ್ಲಿ ಕ್ರೈಮ್ನಲ್ಲಿ ತೊಡಗಿಕೊಂಡಿದ್ದಾರೆ ಎಂದು ವಿಷಾದಿಸಿದರು.
ಜಿಲ್ಲೆಯಲ್ಲಿ ಕ್ರೈಮ್ ಜಾಸ್ತಿ ಆಗುತ್ತಿವೆ ಎಂದು ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದ ಕಮಿಟಿಯೊಂದನ್ನು ರಚನೆ ಮಾಡಿ ಕ್ರೈಮ್ ಹೆಚ್ಚಾಗಲು ಕಾರಣಗಳೇನು ಎಂದು ಕಂಡುಹಿಡಿದು, ಜೂಜು, ಗಾಂಜಾ, ಮಾದಕವಸ್ತುಗಳಂತ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆ ಕೊಡಿಸಲಿ ಎಂದು ಸಿಎಂ ಅವರಿಗೆ ಮನವಿ ಮಾಡುತ್ತೇನೆ.
ಜಿಲ್ಲೆಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನೂರು ದಿನಗಳಾದರೂ ಜಿಲ್ಲೆಗೆ ಒಬ್ಬ ಜಿಲ್ಲಾ ಉಸ್ತುವಾರಿ ಮಂತ್ರಿ ನೇಮಕ ಮಾಡಿಲ್ಲ. ಬೊಮ್ಮಾಯಿಯವರೇ, ಕೇವಲ ಧ್ವಜ ಏರಿಸಲು ಹಾಗೂ ಇಳಿಸಲು ಮಾತ್ರ ಮಂತ್ರಿಗಳನ್ನು ಇಲ್ಲಿಗೆ ಕಳಿಸಬೇಡಿ. ಸಾರ್ವಜನಿಕರ ಹಿತದೃಷ್ಠಿಯಿಂದ ಜಿಲ್ಲಾ ಮಂತ್ರಿಯನ್ನು ಈ ಕೂಡಲೇ ನೇಮಿಸಿ ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ಮಟ್ಟದ ಹಣದ ವ್ಯವಹಾರ ನಡೆದಿದೆ. ಐಪಿಲ್, ಗಾಂಜಾ ಮಾರಾಟ, ಮಟ್ಕಾ ದಂದೆ ನಡೆಯುತ್ತಿವೆ. ಈ ಬಗ್ಗೆ ಕಮೀಷನರ್ ಅವರಿಗೆ ಆಗ್ರಹಿಸಿದರೂ ಕೂಡಾ ಕಮೀಷನರ್ ಕ್ರಮ ಕೈಗೊಳ್ಳುವ ಬದಲು ರೌಡಿ ಶೀಟರ್ ಗಳೊಂದಿಗೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಹೇಳಿದರು.
ದಲಿತರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ವಿರೋಧಕ್ಷದ ನಾಯಕರಾದ ಸಿದ್ದರಾಮಯ್ಯ ನವರ ವಿರುದ್ದ ಬಿಜೆಪಿ ತೇಜೋವಧೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಜನಪರ ಕಾಳಜಿಯುಳ್ಳ ನಾಯಕರಾಗಿದ್ದು, ಅವರು ಸಿಎಂ ಆಗಿದ್ದಾಗ ಶೋಷಿತ ಸಮಾಜದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದರು ಎಂದು ನೆನಪಿಸಿದರು.
ಅಕ್ರಮ ಚಟುವಟಿಕೆಯಲ್ಲಿ ಹಾಗೂ ಅಕ್ರಮ ಮರಳು ಸಾಗಾಣಿಕೆಯಲ್ಲಿ ಯಾರೇ ಭಾಗಿಯಾಗಿದ್ದರು ಅವರು ವಿರುದ್ದ ಕ್ರಮ ಕೈಗೊಳ್ಳಲಿ ಅಧಿಕಾರದಲ್ಲಿ ಇರುವವರು ಯಾರು ? ಎಂದು ತಿರುಗೇಟು ನೀಡಿದರು.
ಮೇಯರ್ ಪಟ್ಟ ಕಾಂಗ್ರೆಸ್ ಪಾಲಿಗೆ: ಕಲಬುರಗಿ ನಗರಪಾಲಿಕೆಯ ಮೇಯರ್ ಅವರು ಕಾಂಗ್ರೆಸ್ ನವರಾಗಿತ್ತಾರೆ. ಜೆಡಿಎಸ್ ನಾಯಕರ ಜೊತೆ ನಮ್ಮ ಪಕ್ಷದ ನಾಯಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಎಂ ಎಲ್ ಸಿ ಚುನಾವಣೆಯ ಅಭ್ಯರ್ಥಿಗಳ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಸಿಎಂ ಬಲಿ ಪಡೆಯಲಿದೆ: ಬಿಟ್ ಕಾಯಿನ್ ಹಗರಣ ಕರ್ನಾಟಕದ ಮುಖ್ಯಮಂತ್ರಿಯನ್ನು ಖಂಡಿತವಾಗಿ ಬಲಿ ತೆಗೆದುಕೊಳ್ಳಲಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದರು. ಪಾರದರ್ಶಕ ತನಿಖೆ ನಡೆಸಿದರೆ ಈ ಹಗರಣದಲ್ಲಿ ಯಾರು ಭಾಗವಹಿಸಿದ್ದಾರೆ ಎನ್ನುವುದು ಒಂದೇ ಒಂದು ತಿಂಗಳಲ್ಲಿ ಹೊರಬರಲಿದೆ. ಆದರೆ, ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇದೆಯಾ ಎನ್ನುವುದು ಮುಖ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷರಾದ ಸಿದ್ದು ಪಾಟೀಲ್, ಈರಣ್ಣ ಝಳಕಿ ಮತ್ತಿತರು ಇದ್ದರು.