ಇಂಜಿನಿಯರಿಂಗ್ ಪ್ರವೇಶಾತಿಗೆ ಶುಲ್ಕ ಏರಿಕೆ ವಾಪಸ್ ಗೆ ಆಗ್ರಹ

0
20

ಕಲಬುರಗಿ: ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಈ ವರ್ಷದ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಏಕಾಏಕಿ ೧೦ ಸಾವಿರದವರೆಗೂ ಶುಲ್ಕ ಏರುಕೆ ಮಾಡಿರುವುದನ್ನು ರಾಜ್ಯದ ವಿದ್ಯಾರ್ಥಿಗಳು ಮತ್ತು ಎಐಡಿಎಸ್‌ಓ ಅತ್ಯಂತ ಉಗ್ರವಾಗಿ ಖಂಡಿಸುತ್ತೇವೆ ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ರಾಜ್ಯದ ಜನತೆ ಹಾಗು ವಿದ್ಯಾರ್ಥಿ ಸಮೂಹವು ಕೋವಿಡ್ ಸಾಂಕ್ರಾಮಿಕ ಹಾಗು ನಂತರದ ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಸಂಕಷ್ಟವನ್ನು ಎದುರಿಸಿದ್ದಾರೆ. ಸಂಸಾರವನ್ನು ತೂಗಿಸಲು ಹಲವರು ಉದ್ಯೋಗ ಅರಸಿದ್ದರೆ, ಹಲವರು ತಮ್ಮ ಪೋಷಕರು-ಸಂಬಂಧಿಕರನ್ನು ಕಳೆದುಕೊಂಡು ಈಗಲೂ ಆ ಆಘಾತದಿಂದ ಹೊರ ಬರಲು ಸಾಧ್ಯವಾಗಿಲ್ಲ. ಜನಸಾಮಾನ್ಯರ ಆದಾಯ ಕುಂಠಿತವಾಗಿದೆ. ಇದರೊಂದಿಗೆ, ಈ ಬಾರಿ ಅತ್ಯಂತ ಭೀಕರ ಮಳೆಯಿಂದಾಗಿ, ರಾಜ್ಯದಲ್ಲಿ ಕಾಫಿ ತೋಟಗಳು ಸೇರಿದಂತೆ ಹೊಲಗಳಲ್ಲಿ ಶೇ. ೭೦ ರಷ್ಟು ಬೆಳೆ ನಷ್ಟ ಸಂಭವಿಸಿದೆ. ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿ ಇರುವ ರೈತ ಸಮುದಾಯದ ವಿದ್ಯಾರ್ಥಿಗಳಿಗೆ ಈ ಹಾನಿಯು ಅತ್ಯಂತ ಭೀಕರ ಪರಿಸ್ಥಿತಿಯನ್ನು ತಂದೊಡ್ಡಿದೆ.

Contact Your\'s Advertisement; 9902492681

ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹಲವು ಏರುಪೇರುಗಳು ಸಂಭವಿಸಿವೆ. ಒಂದೆಡೆ, ಈ ಎಲ್ಲ ಸವಾಲುಗಳ ನಡುವೆ ಸಿಲಿಕಿರುವ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸನ್ನು ಸಂಪೂರ್ಣ ಕೈಬಿಡುವಂತಾಗಿದೆ. ಹೀಗಿರುವಾಗ, ಏಕಾಏಕಿ ಶುಲ್ಕ ಏರಿಕೆಯ ನಿರ್ಧಾರವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಅತಿ ದೊಡ್ಡ ಪ್ರಹಾರ ಮಾಡಿದಂತೆ ಆಗುತ್ತದೆ. ಇದರೊಂದಿಗೆ ಮತ್ತೊಂದು ವಿದ್ಯಾಮಾನದ ಬಗ್ಗೆ ಹೇಳುವುದಾದರೆ, ಈ ವರ್ಷ ಪದವಿ ಕೋರ್ಸಿಗೆ ಪ್ರತಿ ವರ್ಷಕ್ಕಿಂತ ೫೦ ಸಾವಿರ ಹೆಚ್ಚಿಗೆ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆದಿದ್ದಾರೆ.

ಪಿಯುಸಿ ದಾಖಲಾತಿ ಸಹ ಗಣನೀಯವಾಗಿ ಏರಿಕೆ ಆಗಿದೆ. ಅಂದರೆ, ಈ ಪರಿಸ್ಥಿತಿಯು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಗೆ ಮಾಡುವ ತಕ್ಷಣದ ಅವಶ್ಯಕತೆಯನ್ನು ಬಿಂಬಿಸುತ್ತದೆ. ಸರ್ಕಾರವು ಹೆಚ್ಚುವರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕಿತ್ತು, ಹೆಚ್ಚುವರಿ ಬೋಧಕರನ್ನು ನೇಮಕಾತಿ ಮಾಡಬೇಕಿತ್ತು, ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸುವ ಯೋಚನೆ ನಡೆಸಬೇಕಿತ್ತು, ಹೆಚ್ಚುವರಿ ಗ್ರಂಥಾಲಯಗಳು- ಪ್ರಯೋಗಾಲಯಗಳನ್ನು ನಿರ್ಮಿಸಬೇಕಿತ್ತು.

ಇದೆಲ್ಲದರ ಬದಲಾಗಿ ಶುಲ್ಕ ಏರಿಕೆ ಮಾಡಿರುವುದು ಕಡು ವಿದ್ಯಾರ್ಥಿ ವಿರೋಧಿ ಮತ್ತು ಶಿಕ್ಷಣ ವಿರೋಧಿ ನಿಲುವಾಗಿದೆ. ಈ ಕೂಡಲೇ ಸರ್ಕಾರ ಈ ಶುಲ್ಕ ಏರಿಕೆಯನ್ನು ವಾಪಸ್ ಪಡೆದು, ಮೊದಲು ಮೊದಲು ಇದ್ದ ಶುಲ್ಕವನ್ನು ಮಾತ್ರ ಪಡೆಯಬೇಕು ಹಾಗೂ ಇತರೆ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದನ್ನು ಈ ಕೂಡಲೇ ನಿಲ್ಲಿಸಲು ಆದೇಶ ನೀಡಬೇಕು ಎಂದು ರಾಜ್ಯದ ವಿದ್ಯಾರ್ಥಿಗಳು ಮತ್ತು ಎಐಡಿಎಸ್‌ಓ ಆಗ್ರಹಿಸುತ್ತದೆ. ಸರ್ಕಾರ ಶುಲ್ಕ ಏರಿಕೆಯ ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ, ರಾಜ್ಯದ ವಿದ್ಯಾರ್ಥಿಗಳು ಪ್ರಬಲ ಹೋರಾಟಕ್ಕೆ ಅಣಿಯಾಗಬೇಕು ಎಂದು ಎಐಡಿಎಸ್‌ಓ ರಾಜ್ಯ ಸಮಿತಿ ಕರೆ ನೀಡುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here