ಕಲಬುರಗಿ ಜಿಲ್ಲಾ ಕಸಾಪ ಪದಾಧಿಕಾರಿಗಳ ಆಯ್ಕೆ

0
440

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಹೊಸ ತಂಡವನ್ನು ರಚಿಸಲಾಗುತ್ತಿದ್ದು, ಮೊದಲ ಭಾಗವಾಗಿ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳನ್ನಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಡಿ.ಬಡಿಗೇರ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಯುವ ಅಧ್ಯಕ್ಷ ಶಿವರಾಜ ಎಸ್.ಅಂಡಗಿ, ಗೌರವ ಕೋಶಾಧ್ಯಕ್ಷರನ್ನಾಗಿ ಲೋಕೋಪಯೋಗಿ ಇಲಾಖೆಯ ಶರಣರಾಜ್ ಛಪ್ಪರಬಂದಿ ಅವರನ್ನು ನೇಮಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ, ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಇನ್ನೊಂದು ವಾರದಲ್ಲಿ ಉಳಿದ ಎಲ್ಲಾ ಪದಾದಿಕಾರಿಗಳ ಆಯ್ಕೆ ಮಾಡಲಾಗುವುದು.

Contact Your\'s Advertisement; 9902492681

ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಸ್ಪರ್ಶ ಕೊಡುವ ಉದ್ದೇಶ ಹೊಂದಲಾಗಿದ್ದು, ಹೊಸ ಆಲೋಚನೆ ಮತ್ತು ಯೋಜನೆಗಳೊಂದಿಗೆ ಪರಿಷತ್ತಿಗೆ ಕಾಲಿಟ್ಟಿರುವ ನಮಗೆ ತಮ್ಮ ಮತವನ್ನು ಆಶೀರ್ವಾದದ ರೂಪದಲ್ಲಿ ನೀಡಿರುವ ಜಿಲ್ಲೆಯ ಸಮಸ್ತ ಗೌರವಾನ್ವಿತ ಸದಸ್ಯರಿಗೆ ಚಿರಋಣಿಯಾಗಿರುವೆ ಮತ್ತು ಅವರ ವಿಶ್ವಾಸಕ್ಕೆ ತಕ್ಕಂತೆ ಪರಿಷತ್ತಿನ ಅಡಿಯಲ್ಲಿ ಉತ್ತಮ ಕಾರ್ಯ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಘಟಕ ಹಾಗೂ ರಚನೆಗೊಳ್ಳುವ ತಾಲೂಕು ಘಟಕಗಳು ಕ್ರಿಯಾಶೀಲವಾಗಿರುವ ಹಾಗೇ ನೋಡಿಕೊಳ್ಳುತ್ತೇವೆ. ಆ ಮೂಲಕ ಇಡೀ ಜಿಲ್ಲೆಯನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಪ್ರಯತ್ನ ಮಾಡುತ್ತೇವೆ.

ಸ್ಥಳೀಯ ಜನಪ್ರತಿನಿಧಿಗಳು, ಸಾಹಿತ್ಯ ಪ್ರೇರಕರ ಸಹಕಾರದೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕನ್ನಡ ಭವನ ನಿರ್ಮಾಣ ಹಾಗೂ ಆಯಾ ತಾಲೂಕಿನ ಸಾಹಿತಿಗಳನ್ನು, ಆಜೀವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅವರೊಂದಿಗೆ ಚರ್ಚಿಸಿ, ಸಮರ್ಥ ಕಾರ್ಯನಿರ್ವಹಣೆಯ ತಾಲೂಕು ಘಟಕಗಳ ರಚನೆ ಮಾಡುವ ಉದ್ದೇಶ ಸೇರಿದಂತೆ ಅನೇಕ ರಚನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಟ್ಟು ನುಡಿ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದೇವೆ.

ಅತ್ಯಂತ ಜನಪರ, ಕನ್ನಡಪರ, ಕ್ರಿಯಾತ್ಮಕ ಪಾರದರ್ಶಕ ಹಾಗೂ ರಚನಾತ್ಮಕ ಆಡಳಿತ ನೀಡುವುದಾಗಿ ಭರವಸೆ ನೀಡಿದ ತೇಗಲತಿಪ್ಪಿ ಅವರು, ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲೂ ಪರಿಷತ್ತನ್ನು ಬಲಗೊಳಿಸಲಾಗುವುದು, ಜಿಲ್ಲ್ಲೆಯಲ್ಲಿ ಕನ್ನಡ ನಾಡು-ನುಡಿಗಾಗಿ ತಮ್ಮ ಅವಿರತ ಹೋರಾಟ ಮಾಡುತ್ತಿರುವ ವಿವಿಧ ಕನ್ನಡಪರ-ಜನಪರ ಸಂಘಟನೆಗಳ ಪ್ರಮುಖರನ್ನು ಗುರುತಿಸುವುದರ ಜತೆಗೆ, ಸಾಹಿತ್ಯ ಪರಿಷತ್ತಿನಲ್ಲಿ ಹೊಸ ಚಿಂತನೆಗಳು ಹಾಗೂ ಬದಲಾವಣೆ ಅಪೇಕ್ಷಿಸುವ ಜನತೆಯ ಆಶಯವನ್ನು ಈಡೇರಿಸುವುದಾಗಿ ಅಲ್ಲದೆ ರಚನಾತ್ಮಕ ಕೆಲಸ ಮಾಡುವುದಾಗಿ ಹೇಳಿದರು.

ನನ್ನ ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಹೇಳಿದ್ದ ಎಲ್ಲಾ ಕೆಲಸ-ಕಾರ್ಯಗಳನ್ನು ಹಂತ-ಹಂತವಾಗಿ ಮಾಡುತ್ತೇನೆ. ಇದಕ್ಕೆ ಜಿಲ್ಲೆಯ ಸರ್ವರ ಸಹಕಾರ ಬಯಸುತ್ತೇನೆ.

ಪರಿಷತ್ತಿನ ಚಟುವಟಿಕೆಗಳು ನಿಂತ ನೀರಾಗಿಸದೆ, ಹರಿಯುವ ನದಿಯಾಗುವ ಹಾಗೇ ಕಾರ್ಯ ಮಾಡುತ್ತೇವೆ. ಪರಿಷತ್ತನ್ನು ಪ್ರತಿಯೊಂದು ಶಾಲಾ-ಕಾಲೇಜು, ಹಳ್ಳಿಯವರಗೆ ತೆಗೆದುಕೊಂಡು ಹೋಗುತ್ತೇವೆ. ಹೊಸ ಸಾಂಸ್ಕೃತಿಕ ಲೋಕವನ್ನೇ ನಿರ್ಮಾಣ ಮಾಡುವ ಹಂಬಲ ನಮ್ಮದಿದೆ, ನಮ್ಮ ಹಂಬಲಕ್ಕೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಬೇಕೆಂದು ತೇಗಲತಿಪ್ಪಿ ಮನವಿ ಮಾಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here