ಕಲಬುರಗಿ: ನವೆಂಬರ್ 28 ರಂದು ಚೌಕ್ ಪೊಲೀಸ್ ಠಾಣೆಯಲ್ಲಿ ದುಂಡಪ್ಪ ಸಿದ್ರಾಮ ಜಮಾದಾರ ಎಂಬಾತನನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜಕುಮಾರ, ಉಮೇಶ, ಕೇಶುರಾವ ಮತ್ತು ಅಶೋಕ ಅಮಾನತ್ತುಗೊಂಡ ಪೊಲೀಸ್ ಸಿಬ್ಬಂದಿಗಳು. ಕಳೆದ ನ.೨೪ ರಂದು ರಾತ್ರಿ ಂಡಪ್ಪ ತಂದೆ ಸಿದ್ರಾಮ ಜಮಾದಾರ ಅವರನ್ನು ಸೇಡಂಕಲಬುರಗಿ ರಸ್ತೆಯ ಟೋಲ್ ಗೇಟ್ ಹತ್ತಿರ ಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಜಕುಮಾರ, ಉಮೇಶ, ಕೇಶುರಾವ ಮತ್ತು ಅಶೋಕ ಅವರು ವಿಚಾರಣೆ ನಡೆಸಲೆಂದು ಠಾಣೆಗೆ ಕರೆತಂದು ಆತನ ಮೇಲೆ ಹಲ್ಲೆ ನಡೆಸಿದ್ದರು.
ಈ ಸಂಬಂಧ ಕಲಬುರಗಿ ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರು ತನಿಖೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಸದರಿ ವರದಿ ಪ್ರಕಾರ ದುಂಡಪ್ಪ ಅವರ ಮೇಲೆ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅಮಾನತ್ತು ಮಾಡಲಾಗಿದೆ.
ಅಲ್ಲದೆ ಚೌಕ್ ಪೊಲೀಸ್ ಠಾಣೆಯ ಪಿಐ ಎಸ್.ಆರ್.ನಾಯಕ್ ವಿರುದ್ಧ ನಿಯಮ ೭ರ ಅಡಿಯಲ್ಲಿ (ಇನ್ ಕ್ರಿಮೆಂಟ್ ಮುಂದೂಡಿಕೆ) ಕ್ರಮ ಜರುಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವೈ. ಎಸ್.ರವಿಕುಮಾರ ತಿಳಿಸಿದ್ದಾರೆ.