ಸುರಪುರ: ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಂಗಂಪೇಟೆಯ ಕೃಷಿ ಅಭಿವೃಧ್ಧಿ ಬ್ಯಾಂಕ್ (ಎಡಿಬಿ) ಬ್ಯಾಂಕ್ ಶಾಖೆಯಿಂದ ರೈತರಿಗೆ ಸಾಲ ವಿತರಣೆ ಮಾಡದೆ ತೊಂದರೆ ನೀಡುತ್ತಿವೆ ಎಂದು ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ:ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಎಸ್.ಬಿ.ಐ ಮತ್ತು ಎಡಿಬಿ ಬ್ಯಾಂಕ್ ವ್ಯವಸ್ಥಾಪಕರು ಮೊದಲು ಸಾಲ ಕೊಡುವುದಾಗಿ ರೈತರಿಂದ ಹಣವನ್ನು ಕಟ್ಟಿಸಿಕೊಂಡು ಈಗ ದಿನಕ್ಕೊಂದು ಸಬೂಬು ಹೇಳತೊಡಗಿದ್ದಾರೆ.ಮೊದಲಿಗೆ ಫೀಲ್ಡ್ ಆಫಿಸರ್ ಇಲ್ಲ ಎನ್ನುವುದು,ನಂತರ ಮ್ಯಾನೇಜರ್ ಇಲ್ಲ ಎನ್ನುವುದು,ಇಬ್ಬರು ಬಂದರೆ ಮತ್ತೆ ಫೀಲ್ಡ್ ಆಫಿಸರ್ ವರ್ಗಾವಣೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ಆದರೆ ಈ ಬ್ಯಾಂಕ್ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಬೇರೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಿಲ್ಲ,ಇನ್ನು ಈ ಬ್ಯಾಂಕ್‌ಗಳಿಂದ ಸಾಲ ನೀಡುತ್ತಿಲ್ಲ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಆದ್ದರಿಂದ ಕೂಡಲೇ ರೈತರಿಗೆ ಸಾಲ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಲ್ಲದೆ ಸಮಯಕ್ಕೆ ಸರಿಯಾಗಿ ಸಾಲ ನೀಡುತ್ತಿಲ್ಲ,ಹೊಸ ಬೆಳೆ ಸಾಲ ಎಲ್ಲರಿಗೂ ನೀಡುವಂತಾಗಬೇಕು,ಸಾಲದ ಅರ್ಜಿಗಳನ್ನು ಯಾದಗಿರಿ ಆರ್.ಓ ಕಚೇರಿಯಲ್ಲಿ ವಿನಾಃಕಾರಣ ರಿಜೆಕ್ಟ್ ಮಾಡಲಾಗುತ್ತಿದೆ ಇದನ್ನು ನಿಲ್ಲಿಸಿ ಸಾಲ ನೀಡಬೇಕು,ಸಾಲ ನೀಡಲು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಒಕ್ಕೂಟದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಬ್ಯಾಂಕ್ ಅಧಿಕಾರಿಗಳಿಂದ ಸಲ್ಲಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂದಗೇರಿ,ರಾಜ್ಯ ಸಂಘಟನಾ ಕಾರ್ಯದರ್ಶಿ ನಿಂಗಣ್ಣ ಗೋನಾಲ,ಜಿಲ್ಲಾ ಕಾರ್ಯದರ್ಶಿ ಎನ್.ರಾಜು ದರಬಾರಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಶಂಕರ ಹೊಸ್ಮನಿ,ರೈತ ಘಟಕದ ಅಧ್ಯಕ್ಷ ಗೋಪಾಲ ಬಾಗಲಕೋಟೆ ಸೇರಿದಂತೆ ಅನೇಕರಿದ್ದರು.