ಕಲಬುರಗಿ: ರಾಜ್ಯದಲ್ಲಿ ಕೋವಿಡ್- 19 ನಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ 2020- 21 ನೇ ಸಾಲಿನ ಎಲ್ಲ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ಇದೀಗ ಹಿಂದಕ್ಕೆ ಪಡೆದಿದೆ.
ಇದರಿಂದಾಗಿ ಕಲಬುರಗಿ ಸೇರಿದಂತೆ ಕಲ್ಯಾಣದ ಸಪ್ತ ಜಿಲ್ಲೆಗಳಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಇದ್ದಂತಹ ತಡೆ ತೆರವಾಗಿದ್ದು ಇನ್ನು ಮುಂದೆ ಹುದ್ದೆ ಭರ್ತಿ ನಿರಾತಂಕವಾಗಿ ನಡೆಯಲಿದೆ. ಬೆಳಗಾವಿ ಸುವರ್ಣ ಸದನದಲ್ಲಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಎತ್ತಿದ್ದ ಮಹತ್ವದ ಪ್ರಶ್ನೆಗೆ ಸ್ಪಂದಿಸಿದ ಕಂದಾಯ ಸಚಿವ ಆರ್ ಅಶೋಕ ನೇರ ನೇಮಕಾತಿ ಮೇಲಿನ ತಡೆ ತೆರವು ಮಾಡಿದ್ದಾಗಿ ಹೇಳಿದ್ದಾರೆ.
ಕೋವಿಡ್‍ನಿಂದಾಗಿ ಹಳಿತಪ್ಪಿದ್ದ ಆರ್ಥಿಕತೆ ಸರಿದೂಗಿಸಲು ರಾಜ್ಯ ಸರಕಾರ ಖಾಲಿ ಹುದ್ದೆ ಭರ್ತಿಗೆ ತಡೆ ನೀಡಿತ್ತು. ಆದರೀಗ ಕಲ್ಯಾಣ ನಾಡಿನ ಜಿಲ್ಲೆಗಳ ಕಾಲಿ ಹುದ್ದೆಗಳ ಭರ್ತಿ ವಿಚಾರ ಗಮನದಲ್ಲಿಟ್ಟುಕೊಂಡು ಭರ್ತಿಗೆ ಮುಂದಾಗಿದೇವೆ. ಇದಕ್ಕೆ ತಕ್ಕಂತೆ ಸೂಕ್ತ ಸುತ್ತೋಲೆ ಹೊರಡಿಸಲಾಗಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರ ಆಗ್ರಹದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್ ಅಶೋಕ ಬೆಳಗಾವಿಯ ಸುವರ್ಣ ಸದನಕ್ಕೆಚಳಿಗಾಲದ ಕಲಾಪದಲ್ಲಿ ಸೋಮವಾರ ಉತ್ತರಿಸಿದ್ದಾರೆ.
2020 ರ ಜುಲೈ 6 ರಂದು ಹೊರಿಸಲಾಗಿದ್ದ ಸುತ್ತೋಲೆಯ ಮುಖಾಂತರ ಹುದ್ದೆ ಭರ್ತಿಗೆ ನಿಷೇಧ ಹೇರಲಾಗಿತ್ತು. ಕಳೆದ ನ. 24 ರಂದು ಹೊರಡಿಸಲಾಗಿರುವ ಮತ್ತೊಂದು ಸುತ್ತೋಲೆಯಿಂದ ಸದರಿ ನಿಷೇಧ ಹಿಂದಕ್ಕೆ ಪಡೆಯಲಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಕಲಬುರಗಿ ಸೇರಿದಂತೆ ಎಲ್ಲಾ 7 ಜಿಲ್ಲೆಗಳ ಖಾಲಿ ಹುದ್ದೆಗಳ ಭರ್ತಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಅಶೋಕ ಸದನಕ್ಕೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಯಡ್ರಾಮಿ ತಾಲೂಕು ಕಚೇರಿ ಕಟ್ಟಡ ಸೇರಿದಂತೆ ರಾಜ್ಯದ ತಾಲೂಕು ಕಚೇರಿಗಳ ಕಟ್ಟಡಗಳ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. ಈ ವಿಚಾರವಾಗಿ ಸಿಎಂ ಜೊತೆ ತಾವು ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿಯೂ ಕಂದಾಯ ಸಚಿವ ಅಶೋಕ ಸದನಕ್ಕೆ ಭರವಸೆ ನೀಡಿದ್ದಾರೆ.
ಯಡ್ರಾಮಿ ತಾಲೂಕು ಕಚೇರಿ ನಿಯೋಜಿತ ಸಿಬ್ಬಂದಿಗೆ ಬುಲಾವ್: ಯಡ್ರಾಮಿ ತಹಶೀಲ್ ಕಚೇರಿಯಿಂದ ಬೇರೆಡೆ ನಿಯೋಜನೆಗೊಂಡ ಸಿಬ್ಬಂದಿ ಆದೇಶ ತಕ್ಷಣ ರದ್ದುಗೊಳಿಸಬೇಕು, ಸದರಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನೆಲ್ಲ ಭರ್ತಿ ಮಾಡಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿ ಸೋಮವಾರ ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಕಲಾಪಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡಿರುವ ಡಾ. ಅಜಯ್ ಸಿಂಗ್ ಅವರ ಆಗ್ರಹದ ಹಿನ್ನೆಲೆಯಲ್ಲಿ ಕಂದಾ ಸಚಿವ ಅಶೋಕ ಸದನದಲ್ಲೇ ಉತ್ತರ ನೀಡಿದ್ದು ತಕ್ಷಣದಿಂದಲೇ ನಿಯೋಜಿತ ಸಿಬ್ಬಂದಿಗೆ ಮರಲಿ ತಾಲೂಕು ಕಚೇರಿಗೆ ಮರಳಿ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ.
ಯಡ್ರಾಮಿ ತಾಲೂಕು ಕಚೇರಿಯಿಂದ ನಿಯೋಜನೆಗೊಂಡು ಅನೇಕ ಸಿಬ್ಬಂದಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಅನ್ಯ ಜಿಲ್ಲೆಗಳಿಗೂ ನಿಓಜಿತರಾಗಿದ್ದಾರೆ. ಹೀಗೆ ನಿಯೋಜಿತರಾಗಿರುವ 6 ಗ್ರಾಮ ಲೆಕ್ಕಾಧಿಕರಿಗಳು, ಪ್ರಥಮ ದರ್ಜೆ ಸಹಾಯಕರು, ಗುಮಾಸ್ತರು ಸೇರಿದಂತೆ ಎಲ್ಲಾ ಸಿಬ್ಹಂದಿಗಳ ನಿಯೋಜನೆ ತಕ್ಷಣ ರದ್ದುಗೊಳಿಸಬೇಕು.
ಅವರನ್ನೆಲ್ಲ ಮರಳಿ ಯಡ್ರಾಮಿ ತಾಲೂಕು ಕಚೇರಿಗಳಿಗೆ ಮರಳಿ ತರಬೇಕು ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದಾಗ ಕಂದಾಯ ಸಚಿವ ಆರ್. ಅಶೋಕ ಮಾನಾಡುತ್ತ ಯಡ್ರಾಮಿ ತಾಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವು ಕಚೇರಿಗಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ತಕ್ಷಣ ಬಿಡುಗಡೆ ಮಾಡಿ ಆದೇಶ ನೀಡಲು ಕಲಬುರಗಿ ಪ್ರಾ. ಆಯುಕ್ತರಿಗೆ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಈ ಕೂಡಲೆ ಆದೇಶಿಸಲಾಗುತ್ತದೆ ಎಂದು ಸದನದಲ್ಲಿ ಭರವಸೆ ನೀಡಿದರು.
ಡಾ. ಅಜಯ್ ಸಿಂಗ್ ಈ ವಿಚಾರವಾಗಿ ತಮ್ಮ ಚುಕ್ಕೆ ಗುರುತಿನ ಪ್ರಶ್ನೆ ಕಲಾಪದಲ್ಲಿ ಬಂದಾಗ ಸಭಾದ್ಯಕ್ಷರ ಅನುಮತಿ ಮೇರೆಗೆ ಸದರಿ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲೆ ಯಡ್ರಾಮಿ ಭಾಗದ ಹಳ್ಳಿ ಜನ, ರೈತರು ಅದೆಷ್ಟು ಪರಿತಪಿಸುತ್ತಿದ್ದಾರೆ, ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆ ಅದು ಹೇಗೆ ಒದ್ದಾಡುತ್ತಿದ್ದಾರಂಬುದನ್ನೆಲ್ಲ ವಿವರಿಸಿ ಸರಕಾರದ ಗಮನ ಸೆಳೆದರು.