ಕಲಬುರಗಿ: ಮಳೆಯಿಂದಾಗಿ ಜೇವರ್ಗಿ ಮತಕ್ಷೇತ್ರದ ಹಳ್ಳಿಗಾಡಿನ ರಸ್ತೆಗಳು ಹರಿದು ಹೋಗಿದ್ದು ಅವುಗಳ ದುರಸ್ಥಿಗಾಗಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್‍ಸಿಂಗ್ ಪ್ರಶ್ನೆಗೆ ಬೆಳಗಾವಿ ಸುವರ್ಣ ಸೌಧದಲ್ಲಿನ ಚಳಿಗಾಲದ ಕಲಾಪದಲ್ಲಿ ಉತ್ತರ ನೀಡಿರುವ ಪಿಡಬ್ಲೂಡಿ ಸಚಿವರಾದ ಸಿಸಿ ಪಾಟೀಲರು ಜೇವರ್ಗಿ ಮತಕ್ಷೇತ್ರದ ಹಳ್ಳಿ ರಸ್ತೆಗಳ ಸುಧಾರಣೆಗೆ 25 ಕೋಟಿ ರು ಪ್ರಸ್ತಾವನೆ ಸಿದ್ಧವಾಗಿದ್ದು 2021- 21 ನೇ ಸಾಲಿಗಾಗಿ 3. 23 ಕೋಟಿ ರು ಅನುದಾನದ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಜೇವರ್ಗಿಯಿಂದ ಕಟ್ಟಿ ಸಂಗಾವಿ, ಗುಡೂರ, ನರಿಬೋಳ್, ಮದರಿ, ಹೊಸೂರ್ ಮಾರ್ಗ, ಆಂದೋಲಾ, ಬಿರಾಳ (ಬಿ) ಮತ್ತು (ಕೆ), ಜೇವರ್ಗಿಯಿಂದ ನೋಲೋಗಿ ಮಾರ್ಗದ ಗೊನಳ್ಳಿ, ಹರವಾಳ, ಚಿಗರಳ್ಳಿ ಕ್ರಾಸ್‍ನಿಂದ ಯಡ್ರಾಮಿ ವರೆಗಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇವೆಲ್ಲವೂ ಪಿಡಬ್ಲೂಡಿ ಇಲಾಖೆಯಡಿಲ್ಲಿಯೇ ಬರುತ್ತವೆ, ಇವುಗಳ ದುರಸ್ಥಿಗೆ ಕೈಗೊಂಡ ಕ್ರಮಗಳ ಬಗ್ಗೆ ಸದನದಲ್ಲಿ ಡಾ. ಅಜಯ್ ಸಿಂಗ್ ಎತ್ತಿದ್ದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಸಿಸಿ ಪಾಟೀಲ್ ಕ್ರಿಯಾ ಯೋಜನೆ ಸಿದ್ಧಗೊಂಡಿವೆ, ಅನುದಾನದ ಲಭ್ಯತೆ ನೋಡಿಕೊಂಡು ಹಣ ಬಿಡುಗಡೆ ಮಾಡಲಾಗುತ್ತದೆ. ಸದರಿ ಹಳ್ಳಿಗಳನ್ನೊಳಗೊಂಡಿರುವ ಎಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಎಸ್‍ಎಚ್‍ಡಿಪಿ ಯೋಜನೆ- 4 ರಲ್ಲಿ 9. 50 ಕೋಟಿ ರು ಪ್ರಸ್ತಾವನೆ ವಿಸ್ತೃತ ಯೋಜನಾ ವರದಿ ತಯ್ಯಾರಿಕೆ ಹಂತಂದಲ್ಲಿದೆ ಎಂದೂ ಹೇಳಿದ್ದಾರೆ.
ಇವೆಲ್ಲ ರಸ್ತೆಗಳ ಕಾಯಂ ದುರಸ್ಥಿಗಾಗಿ 100 ಕೋಟಿ ರು ಗಳ ಅಗತ್ಯವಿರುತ್ತದೆ. ಅನುದಾನದ ಲಭ್ಯತೆ ನೋಡಿಕೊಂಡು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದೂ ಪಿಡಬ್ಲೂಡಿ ಸಚಿವರಾದ ಸಿಸಿ ಪಾಟೀಲರು ಶಾಸಕ ಡಾ. ಅಜಯ್ ಸಿಂಗ್ ಅವರ ಗಮನ ಸೆಳೆಯುವ ಪ್ರಸ್ನೆಗೆ ಸದನದಲ್ಲಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಎರಡೂ ರೂಪದಲ್ಲಿ ಉತ್ತರಿಸಿದ್ದಾರೆ.