ಕಲಬುರಗಿ: ಜಿಲ್ಲೆಯ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕುಂದು ಕೊರತೆ ಸಭೆಯನ್ನು ಕರೆಯಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕಲಬುರಗಿ ಜಿಲ್ಲಾ ಸಮಿತಿಯಿಂದ ಸತತವಾಗಿ ಒತ್ತಾಯಿಸಿದ ಕಾರಣ ಜಿಲ್ಲಾ ಮಟ್ಟದ ಆಶಾ ಕುಂದು ಕೊರತೆ ಸಭೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಯಿತು.
ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ೧೮ ಬೇಡಿಕೆಯುಳ್ಳ ಮನವಿ ಪತ್ರವನ್ನು ಆಶಾ ಜಿಲ್ಲಾ ಸಂಚಾಲಕರಾದ ವಿ.ಜಿ. ದೇಸಾಯಿ ಅವರು ಈ ಸಭೆಯಲ್ಲಿ ಮಂಡಿಸಿದರು. ೨೦೧೯ನೇ ಸಾಲಿನ ೧೩೫ ಆಶಾಗಳ ೧೩ ಲಕ್ಷ ರೂ. ಪ್ರೋತ್ಸಾಹ ಧನ ಬಾಕಿ, ಈ ವರ್ಷದ ಜೇವರ್ಗಿ ತಾಲೂಕಿನ ೩೧ ಆಶಾಗಳ ೩ ಲಕ್ಷ ರೂ. ಸಂಬಳ ಬಾಕಿ, ಇತ್ತೀಚಿಗೆ ಡಿ.ಬಿ.ಟಿ. ಪದ್ದತಿಯಿಂದ ಮತ್ತೆ ನೂರಾರು ಆಶಾಗಳ ಕೇಂದ್ರ ಹಾಗೂ ರಾಜ್ಯದ ಪ್ರೋತ್ಸಾಹ ಧನ ಬಾಕಿ ಇದ್ದು ಕೂಡಲೇ ಬಿಡುಗಡೆ ಮಾಡಿಸಬೇಕೆಂದು ಸಂಘಟನಾಕಾರರು ಒತ್ತಾಯಿಸಿದರು.
ಇದರೊಂದಿಗೆ ಎ.ಎನ್.ಸಿ (ಗರ್ಭಿಣಿ) ಮತ್ತು ಪಿ.ಎನ್.ಸಿ.(ಬಾಣಂತಿ) ಕೆಲಸ ಮಾಡಿದ್ದು ಆಶಾ ಸಾಫ್ಟ್‌ನಲ್ಲಿ ದಾಖಲಾಗದೆ ಇರುವದು, ಖಾಲಿ ಇರುವ ಆಶಾ ಪೆಸಲಿಟೆಟರ್ ಹಾಗೂ ಆಶಾ ಸ್ಥಾನಗಳನ್ನು ಡಾಟಾ ಎಂಟ್ರಿ ಅಪರೇಟರ್ ಸ್ಥಾನಗಳನ್ನು ಭರ್ತಿಮಾಡುವುದು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಶಾಗಳಿಗೆ ವಿಶ್ರಾಂತಿ ಕೋಣೆ ಒದಗಿಸುವುದು, ಪ್ರತಿ ೩ ತಿಂಗಳಿಗೊಮ್ಮೆ ಕುಂದು ಕೊರತೆ ಸಭೆ ನಡೆಸುವುದು ಮೊದಲಾದ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಆದಷ್ಟು ಬೇಗನೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಈ ಸಭೆಯಲ್ಲಿ ಆರ್.ಸಿ.ಹೆಚ್.ಓ, ಸೇರಿದಂತೆ ಸಂಘಟನೆಯ ಜಿಲ್ಲಾ ಸಂಚಾಲಕರಾದ ವಿ.ಜಿ.ದೇಸಾಯಿ. ಎ.ಐ.ಯು.ಟಿ.ಯು.ಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಂ.ಶರ್ಮಾ, ಆಶಾ ಸಂಘಟನಾಕಾರರಾದ ಶಿವಲಿಂಗಮ್ಮ, ರಾಧಾ, ಜಯಶ್ರೀ, ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ೭ ತಾಲೂಕಿಯ ಆಶಾ ಮುಖಂಡರು, ೭ ತಾಲೂಕಿನ ಆಶಾ ಮೆಂಟರ್‌ಗಳು, ಆಶಾ ಕೊಆರ್ಡಿನೇಟರ್ ಹಾಗೂ ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.