ಹಾವೇರಿ: ಹನುಮನಮಟ್ಟಿ (ಐ.ಸಿ.ಎ.ಆರ್)ಕೃಷಿ ವಿಜ್ಞಾನ ಕೇಂದ್ರದಿಂದ ರಾಣೇಬೆನ್ನೂರ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಪ್ರಗತಿಪರ ರೈತ ನಾಗಪ್ಪ ಕುಪ್ಪೆಲೂರ ಅವರ ಹೊಲದಲ್ಲಿ ಮಂಗಳವಾರ ಸೂರ್ಯಕಾಂತಿ ಬೆಳೆ ಕ್ಷೇತ್ರ ಭೇಟಿ ಹಾಗೂ ತಾಂತ್ರಿಕ ಮಾಹಿತಿ ಕಾರ್ಯಕ್ರಮ ಜರುಗಿತು.
ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ ಅವರು ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಈ ಬೆಳೆಯನ್ನು ಎಲ್ಲಾ ತಾಲೂಕುಗಳಲ್ಲಿ ಬೆಳೆಯುತ್ತಿದ್ದಾರೆ. ಕರ್ನಾಟಕವು ದೇಶದ ಶೇಕಡಾ 50 ರಷ್ಟು ಪ್ರದೇಶ ಮತ್ತು ಶೇ.30 ರಷ್ಟು ಉತ್ಪಾದನೆಯನ್ನು ಹೊಂದಿರುವುದರಿಂದ ‘ಸೂರ್ಯಕಾಂತಿಯ ರಾಜ್ಯ’ ಎಂಬ ಬಿರುದನ್ನು ಪಡೆದಿದೆ. ಸೂರ್ಯಕಾಂತಿಯ ಬೀಜವು ಶೇಕಡಾ 10 ರಿಂದ ರಷ್ಟು ಪ್ರೋಟೀನ್ ಹಾಗೂ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿರುವುದರಿಂದ ಉತ್ತಮ ಅಡುಗೆ ಎಣ್ಣೆಯಾಗಿ ಹೊರಹೊಮ್ಮಿದೆ.
ಇಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಲಘುಪೋಷಕಾಂಶಗಳ ಕೊರತೆಯ ಜೊತೆಗೆ ಉತ್ಪಾದನಾ ವೆಚ್ಚದೊಂದಿಗೆ ಹೆಚ್ಚಿನ ಇಳುವರಿ ನೀಡುವ ತಂತ್ರಜ್ಞಾನ ಮೊರೆ ಹೋಗುವುದು ಅನಿವಾರ್ಯವಾಗಿದೆ. ಸೂರ್ಯಕಾಂತಿ ಬೆಳೆಯಲ್ಲಿ, ಮೊಗ್ಗು ಅರಳುವಾಗ ಅತಿ ಹೆಚ್ಚು ಸಂಖ್ಯೆಯಲ್ಲಿ ಜೇನು ನೊಣಗಳು ಕಂಡುಬರುವುದರಿಂದ, ಈ ಬೆಳೆಯ ಬೇಸಾಯದಲ್ಲಿ ಜೇನು ಸಾಕಾಣಿಕೆ ಅಳವಡಿಸಿಕೊಳ್ಳುವುದರಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದೆಂದು ವಿವರಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರವನ್ನು ವೀಕ್ಷಿಸಿ, ಈ ಕ್ಷೇತ್ರದಲ್ಲಿ ಎಲೆ ತಿನ್ನುವ ಕೀಟಗಳು (ಸ್ಪೋಡೊಪ್ಟೆರಾ ಕೀಡೆ, ಕಂಬಳಿ ಹುಳು) ಎಲೆಯನ್ನು ತಿನ್ನುವ ಬಾಧೆ ಕಂಡು ಬಂದಿದ್ದು ಹಾಗೂ ಇದು ಅತಿಯಾದ ಹಾನಿ ಆದಾಗ ಸಂಪೂರ್ಣಎಲೆ ಭಾಗವನ್ನು ತಿಂದು ದೇಟನ್ನು ಮಾತ್ರ ಬಿಡುತ್ತವೆ. ಸೂರ್ಯಕಾಂತಿ ಬೆಳೆಯಲ್ಲಿ ಈ ಎಲೆ ತಿನ್ನುವ ಹುಳುಗಳ ಹತೋಟಿಗಾಗಿ ಹುಳುಗಳ ತತ್ತಿಗಳ ಹಾಗೂ ಮರಿ ಕೀಟಗಳ ಗುಂಪನ್ನು ಎಲೆಯಿಂದ ತೆಗೆದು ನಾಶಪಡಿಸಬೇಕು.
8 ಕಿ. ಗ್ರಾಂ ಶೇ. 2 ರ ಮಿಥೈಲ್ ಪ್ಯಾರಾಥಿಯಾನ್ ಅಥವಾ ಶೇ. 5 ರ ಮೆಲಾಥಿಯನ್ ಪುಡಿಯನ್ನು ಧೂಳೀಕರಿಸಬೇಕು. ಅಥವಾ ಪ್ರತಿ ಲೀ. ನೀರಿನಲ್ಲಿ 0.5 ಮಿ. ಲೀ. ಲ್ಯಾಮ್ಡಾ ಸೈಲೋಥ್ರಿನ್ 5 ಇ.ಸಿ. ಅಥವಾ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇ. ಸಿ. ಅಥವಾ 0.1 ಮಿ.ಲೀ. ಸ್ಪೈನೋಸ್ಯಾಡ್ 45 ಎಸ್. ಸಿ ಪ್ರತಿ ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ಇದರ ಹತೋಟಿಯನ್ನು ಮಾಡಬಹುದು ಎಂದು ಮಾಹಿತಿ ನೀಡಿದರು.
ಸೂರ್ಯಕಾಂತಿ ಬೆಳೆಯಲ್ಲಿ ಹೂ ಬಿಡುವ ಸಮಯದಲ್ಲಿ ಕೀಟನಾಶಕ ಸಿಂಪರಣೆ ಅಥವಾ ಧೂಳೀಕರಿಸಬಾರದು. ರೋಗ ಅಥವಾ ಕೀಟಗಳು ಬಂದಾಗ ಮಾತ್ರ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರತಿ ವರ್ಷವೂ ರೋಗ ಹಾಗೂ ಕೀಟಗಳ ಬಾಧೆ ಇರುವ ಪ್ರದೇಶಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳವುದು. ಸೂರ್ಯಕಾಂತಿಯ ನಂತರ ಮತ್ತೆ ಸೂರ್ಯಕಾಂತಿ ಬೆಳೆಯಬಾರದು. ಸವಳು ಭೂಮಿಯಲ್ಲಿ (5 ಡಿ.ಎಸ್/ಮೀ.) ಸೂರ್ಯಕಾಂತಿಯನ್ನು ಬೋದುಗಳಲ್ಲಿ ಬಿತ್ತನೆ ಮಾಡಿ ಶಿಫಾರಸ್ಸು ಮಾಡಿದ ಸಾರಜನಕದ ಪ್ರಮಾಣಕ್ಕಿಂತ 20 ಕಿ. ಗ್ರಾಂ ಹೆಚ್ಚು ಸಾರಜನಕವನ್ನು ಒದಗಿಸಬೇಕು.
ಈ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿಯಾದ ಡಾ. ರಾಜಕುಮಾರ ಜಿ ಆರ್ ರವರು ಮಣ್ಣಿನ ಫಲವತ್ತತೆ ಮಾಹಿತಿ ನೀಡಿದರು. ಹೂವು ಬಿಡುವ ಹಂತದ ಬೆಳೆಯಲ್ಲಿ ಶೇ. 0.2 ರಷ್ಟು ಬೋರಾನನ್ನು ತೆನೆಯ ಮೇಲೆ ಸಿಂಪಡಿಸುವುದರಿಂದ, ಶೇ. 25 ರಷ್ಟು ಹೆಚ್ಚಿನ ಬೀಜದ ಇಳುವರಿ ಶೇ. 27 ರಷ್ಟು ಹೆಚ್ಚಿನ ಎಣ್ಣೆಯ ಇಳುವರಿಯನ್ನು ಪಡೆಯಬಹುದು ಎಂದರು. ಕಾರ್ಯಕ್ರಮದಲ್ಲಿ ಕೇಂದ್ರದ ಹವಾಮಾನ ಶಾಸ್ತ್ರಜ್ಞರಾದ ಡಾ.ಶಾಂತವೀರಯ್ಯ ಹಾಗೂ ಗ್ರಾಮದ ಹನುಮಂತಪ್ಪ ಮುದ್ದಿ, ಮಂಜುನಾಥ ಮುದ್ದಿ ಮತ್ತು ಪರಶುರಾಮ ದೇಶೆರ ಉಪಸ್ಥಿತರಿದ್ದರು.