ಶಹಾಬಾದ :ಅಫಜಲಪೂರ ತಾಲೂಕಿನ ತಾಡ್ ತೆಗನೂರ ಮಸೀದಿಯಲ್ಲಿ ಪವಿತ್ರ ಗ್ರಂಥ ಕುರಾನ್‌ನನ್ನು ಸುಟ್ಟು ಹಾಕಿದ ಸಮಾಜ ಘಾತುಕ ಕಿಡಿಗೇಡಿಗಳ ವಿರುದ್ಧ ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಜಲಿಸ್-ಇ-ಕಿದಮತ್-ಇ- ಮಿಲತ್ ಸಂಘಟನೆ ವತಿಯಿಂದ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಅಫಜಲಪೂರ ತಾಲೂಕಿನ ತಾಡ್ ತೆಗನೂರ ಮಸೀದಿಯಲ್ಲಿ ಪವಿತ್ರ ಗ್ರಂಥ ಕುರಾನ್‌ನನ್ನು ಸುಟ್ಟು ಹಾಕಿ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಲು ಹೊರಟಿದ್ದಾರೆ.ಈಗಾಗಲೇ ಸಮಾಜದಲ್ಲಿ ಜಾತಿ, ಧರ್ಮದ ನಡುವೆ ಕಂದಕ ನಿರ್ಮಾಣ ಮಾಡುವ ಕೆಲಸಗಳು ಹೆಚ್ಚಿವೆ.ಇದರ ನಡುವೆ ಈ ರಿತೀಯ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಈ ಘಟನೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಅಲ್ಲದೇ ಈ ರಿತೀಯ ಘಟನೆಗಳು ಮರುಕಳಿಸದಂತೆ ನಿಗಾವಹಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಜಿದ್ ಚೌಕ್‌ದಿಂದ ನೆಹರು ಚೌಕ್‌ವರೆಗೆ ಮೆರವಣಿಗೆ ನಡೆಸುವ ಮೂಲಕ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಹಮ್ಮದ್ ಮಸ್ತಾನ, ಅಝರ್ ಬಾಖರ್,ಮುಬಿನ್ ಅಲಿ,ಅಬ್ದುಲ್ ಖಾದಿರ್,ಮೌಲನ ಖೈಸರ್,ಡಾ.ಅಹ್ಮದ್ ಪಟೇಲ್,ಜಹೀರ್ ಅಹ್ಮದ್ ಪಟವೇಗರ್,ರಫೀಕ್ ಬಾಗ್ವಾನ್ ಸೇರಿದಂತೆ ಅನೇಕ ಜನರು ಹಾಜರಿದ್ದರು.