ಕಲಬುರಗಿ: ಸಾಹಿತ್ಯಕ ಚಟುವಟಿಕೆಗಳಲ್ಲಿ ಹಿರಿಯರು ಯುವಕರನ್ನು ಸೇರಿಸಿಕೊಂಡು ಅವರಿಗೆ ಪ್ರೋತ್ಸಾಹಿಸಿ ಉತ್ತಮ ವೇದಿಕೆ ನಿರ್ಮಾಣ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹೇಳಿದರು.
ನಗರದ ವಿ.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಕನ್ನಡ ನಾಡು ಲೇಖಕರ ಹಾಗೂ ಓದುಗರ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ೨೦೨೧ನೇ ಸಾಲಿನ ೧೧ ಪುಸ್ತಕಗಳ ಬಿಡುಗಡೆ ಹಾಗೂ ೨೦೨೦ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ, ಪತ್ರಿಕೆಗಳ ಓದು ಕಡಿಮೆಯಾಗುತ್ತದೆ.
ಸಮಯವಿದ್ದರೆ ಮಾತ್ರ ಮೊಬೈಲ್ ನಲ್ಲಿ ಓದುವ ಪರಿಪಾಠ ಬೆಳೆಯುತ್ತಿದೆ. ಹೀಗಾಗಿ ಯುವಕರನ್ನು ಹಿರಿಯರು ತಮ್ಮ ಜತೆಗೆ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಕಾಶನ ಇಂದು ವ್ಯಾಪಾರವಾಗಿದೆ. ಈ ಹಿಂದೆ ಒಂದು ಪುಸಕ್ತ ನಾಲ್ಕೈದು ಸಾವಿರದಲ್ಲಿ ಹೊರಬರುತ್ತಿತ್ತು. ಈಗ ಪುಸ್ತಕ ಪ್ರಕಟಣೆಗೆ ಕನಿಷ್ಠ ಎರಡು ಲಕ್ಷಗಳಾದರೂ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಪುಸಕ್ತಗಳ ಬಿಡುಗಡೆ ಮಾಡುತ್ತಿರುವುದು ಮಾದರಿಯ ಕೆಲಸ ಎಂದು ಅವರು ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ನಿರ್ದೇಶಕ ಡಾ.ಸತೀಶ ಹೊಸಮನಿ ಮಾತನಾಡಿ, ಪ್ರತಿ ವರ್ಷ ಎಂಟು ಸಾವಿರ ಪುಸ್ತಕಗಳು ಆಯ್ಕೆ ಸಮಿತಿಗೆ ಬರುತ್ತಿದ್ದು, ಸಾಫ್ಟ್ ಕಾಪಿ ಕೊಟ್ಟರೆ ಡಿಜಿಟಲ್ ಗ್ರಂಥಾಲಯದಲ್ಲಿ ಅಳವಡಿಕೆ ಮಾಡಲಾಗುತ್ತದೆ. 2.17 ಕೋಟಿ ಓದುಗರು ಆನ್ ಲೈನ್ ನೊಂದಣಿಯಾಗಿದ್ದಾರೆ. ಆನ್ ಲೈನ್ ನಲ್ಲಿ 30 ಲಕ್ಷ ಪುಸ್ತಕಗಳನ್ನು ಓದಲಾಗಿದೆ. ಡಿಜಿಟಲ್ ಅಳವಡಿಸಿದ ಪುಸ್ತಕಗಳನ್ನು ಕಾಪಿ, ಡೌನ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಲೇಖಕರನ್ನು ಒಗ್ಗೂಡಿಸಿ ಪುಸ್ತಕಗಳ ಬಿಡುಗಡೆಯನ್ನು ಸ್ವಪ್ನ ಬುಕ್ ಹೌಸ್ ಮತ್ತು ನವ ಕರ್ನಾಟಕ ಮಾಡುತ್ತವೆ. ರಾಜ್ಯದಲ್ಲಿ ಈ ರೀತಿಯ ಮಾಡುತ್ತಿರುವ ಮತ್ತೊಂದು ಸಂಸ್ಥೆ ಕನ್ನಡ ನಾಡು ಸಂಘ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಮೊದಲ ಸಂಸ್ಥೆ ಎಂಬುದೇ ಹೆಮ್ಮೆಯ ವಿಷಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಕೇಂದ್ರೀಯ ವಿವಿ ಕುಲಸಚಿವ ಡಾ.ಬಸವರಾಜ ಡೋಣೂರು, ಗುಲ್ಬರ್ಗ ವಿವಿ ಕುಲಪತಿ ಡಾ.ದಯಾನಂದ ಅಗಸರ ಮಾತನಾಡಿದರು.
ಇದೇವೇಳೆಯಲ್ಲಿ ಡಾ. ಬಾಲಚಂದ್ರ ಜಯಶೆಟ್ಟಿ, ಕೆ.ನೀಲಾ, ಸಿದ್ಧರಾಮ ಹೊನ್ಕಲ್, ಪ್ರಬುಲಿಂಗ ನೀಲೂರೆ, ಶ್ರೀನಿವಾಸ ಸಿರನೂರಕರ್, ಆನಂದ ಎಸ್. ಗೊಬ್ಬಿ ಅವರಿಗೆ ೨೦೨೦ರ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾವ್ಯಶ್ರೀ ಮಹಾಗಾಂವಕರ ನಿರೂಪಿಸಿದರು. ಡಾ. ಶರಣ ಬಸವ ವಡ್ಡನಕೇರಿ ವಂದಿಸಿದರು.