ಕಲಬುರಗಿ: ಕನ್ನಡ ನಾಡು ನುಡಿಗೆ ಎಲ್ಲರೂ ಸದಾ ಸಿದ್ಧರಾಗಿರಬೇಕು.ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚುಸುತ್ತವೆ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ವತಿಯಿಂದ ನಗರದ ಹಿಂದಿ ಪ್ರಚಾರ ಸಭಾದಲ್ಲಿ ಇಂದು ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಕನ್ನಡ ಪರ ಸಂಘಟನೆಗಳು ಕನ್ನಡ ನಾಡು ನುಡಿ ರಕ್ಷಣೆಗೆ ಹೋರಾಡುತ್ತಿರುವುದು ಶ್ಲಾಘನೀಯ.ಭಾಷೆ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳಬಾರದು.ಪ್ರಶಸ್ತಿಗೆ ಪಾತ್ರರಾದ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರ ಸಾಮಾಜಿಕ ಕಾಳಜಿ ಅಪ್ರತಿಮ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ ಮಾತನಾಡಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕನ್ನಡ ಬಳಕೆ ಕಡ್ಡಾಯಕ್ಕೆ ಎಲ್ಲರೂ ಕೈಜೋಡಿಸಬೇಕು.ಇಂದಿನ ಹೋರಾಟಗಳು ಪತ್ರಿಕೆಗೆ ಸೀಮಿತವಾಗಿವೆ.ನಿಜವಾದ ಹೋರಾಟ ಆಗಬೇಕು.ಮನೆ ಮಠ ಬಿಟ್ಟು ಹೋರಾಡುತ್ತಿರುವ ಕನ್ನಡ ಪರ ಹೋರಾಟಗಾರರನ್ನು ಸರ್ಕಾರ, ಜಿಲ್ಲಾಡಳಿತ ಗುರುತಿಸಿ ಸನ್ಮಾನಿಸಬೇಕು ಎಂದರು.ಯುವ ಮುಖಂಡ ಗುಂಡುರಾವ ಮತ್ತಿಮೂಡ ಕಾರ್ಯಕ್ರಮ ಉದ್ಘಾಟಿಸಿದರು.
ಕಾಂಗ್ರೆಸ್ ಮುಖಂಡ ನೀಲಕಂಠ ಮೂಲೆಗೆ ಪ್ರಶಸ್ತಿ ಪ್ರದಾನ ಮಾಡಿದರು.ವೇದಿಕೆ ಜಿಲ್ಲಾ ಅಧ್ಯಕ್ಷ ಆನಂದ ತೆಗನೂರ ಅಧ್ಯಕ್ಷತೆ ವಹಿಸಿದ್ದರು.ಹೋರಾಟ ಕ್ಷೇತ್ರದಲ್ಲಿ ಹೋರಾಟಗಾರ ಲಿಂಗರಾಜ ಸಿರಗಾಪೂರ, ಸಮಾಜಸೇವಕ ಡಾ.ಎ.ಎಸ್.ಭದ್ರಶೆಟ್ಟಿ ಹಾಗೂ ಉದ್ಯಮಿ ಮಲ್ಲಿಕಾರ್ಜುನ ಮರತೂರಕರ ಅವರನ್ನು ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿ.ಜಿ.ವಣಿಕ್ಯಾಳ ಕಾರ್ಯಕ್ರಮ ನಿರೂಪಿಸಿದರು.ರವಿ ಬೆಲ್ಲದ ಸ್ವಾಗತಿಸಿದರು.ಬಸವರಾಜ ವಂದಿಸಿದರು.ಪ್ರಶಾಂತ ತಂಬೂರಿ, ಸೂರ್ಯಕಾಂತ ಬಾಲಕೊಂದೆ,ಸಾಲೋಮನ ದೀವಾಕರ, ವಿನೋದ ಪಾಟೀಲ್,ಜ್ಞಾನಮಿತ್ರ, ಗುರುಲಿಂಗಪ್ಪ ಟೆಂಗಳಿ, ಮುತ್ತಣ್ಣ ನಾಡಿಗೇರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.