ಎ.ಇ.ಎಸ್. ಹುಟ್ಟಿದ್ದು ಏಕೆ? ಪುಂಡರ ಗುಂಪಾಗಿದ್ದು ಏಕೆ? ಬಿಜೆಪಿ ಜೊತೆಗೆ ಅದರ ಸಖ್ಯವೇನು?

0
15
  • # ಕೆ.ಶಿವು.ಲಕ್ಕಣ್ಣವರ

50ರ ದಶಕದಿಂದ ಶುರುವಾದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ರಗಳೆ 90ರ ದಶಕದ ಅಂತ್ಯದಲ್ಲಿ ನೆಲಕ್ಕೆ ಬಿದ್ದಿತು. ಆದರೂ ಆಗಾಗ ಭಾಷಾ ವೈಷಮ್ಯ ಸೃಷ್ಟಿಸುವ ಮೂಲಕ ಅದು ಚಾಲ್ತಿಯಲ್ಲಿರಲು ಬಯಸಿದೆ. ಅದೀಗ ಪಕ್ಕಾ ಪುಂಡರ ಗುಂಪಾಗಿದೆಯಾ ಎಂಬ ಅನುಮಾನ ಕಾಡುತ್ತಿದೆ.

ʼತರುಣ್‌ ಭಾರತ್ʼ ಎಂಬ ಮರಾಠಿ ದೈನಿಕ ಆರಂಭಿಸಿದ ಬಾಬುರಾವ್‌ ಠಾಕೂರ್‌ ಎಂಇಎಸ್‌ ಕಟ್ಟಿದರು. 1980ರಲ್ಲಿ ಅವರ ನಿಧನದ ನಂತರ ಅವರ ಮಗ ಕಿರಣ್‌ ಠಾಕೂರ್‌ ಸಕ್ರಿಯವಾಗಿದ್ದರು. ಈಗ ಅವರೂ ಎಂಇಎಸ್‌ ಭಾಗವಾಗಿಲ್ಲ. ದೀಪಕ್‌ ದಳವಿ, ಶುಭಂ ಚಳ್ಕೆ ಮುಂತಾದವರು ಈಗ ಎಂಇಎಸ್‌ ನಡೆಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಮತ್ತೆ ಹೇಗಾದರೂ ವಿಧಾನಸಭೆಗೆ ಎಂಟ್ರಿ ಪಡೆಯಲು. ಎಂಇಎಸ್‌ ಪುಂಡಾಟಿಕೆ ಮೂಲಕ ಮರಾಠಿಗರ ಒಲವು ಗಳಿಸಲು ಯತ್ನಿಸುತ್ತಿದೆ. ಇದಕ್ಕೆ ಶಿವಸೇನೆಯ ಪರೋಕ್ಷ ಬೆಂಬಲವೂ ಇದೆ. ಹಾಗೆಯೇ ಎಂಇಎಸ್‌ ಕರ್ನಾಟಜದ ಮಟ್ಟಿಗೆ ಅಪ್ಪಟ ಬಿಜೆಪಿ ಬೆಂಬಲಿಗ ಸಂಘಟನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Contact Your\'s Advertisement; 9902492681

ಎಂಇಎಸ್ ಹಣ ಮಾಡುವ ದಂಧೆಗೂ ನಿಂತಿದ್ದು, ಪುಂಡರ ಕೂಟವಾಗಿದೆ. ಭಾಷಾ ವೈಷಮ್ಯ ಹೆಚ್ಚಿದಷ್ಟೂ ಅದಕ್ಕೆ ಆರ್ಥಿಕ ಮತ್ತು ರಾಜಕೀಯ ಲಾಭಗಳಿವೆ. ರಾಜ್ಯದ ಬಿಜೆಪಿ ಸರ್ಕಾರ ಎಂಇಎಸ್‌ ಬಗ್ಗೆ ಮೃದು ಧೋರಣೆ ತಳೆದಿರುವುದು ಕೂಡ ಆಶ್ಚರ್ಯದ ವಿಷಯವಲ್ಲ. ಎಷ್ಟಾದರೂ ಎರಡೂ ಮತಾಂಧ ಗುಂಪುಗಳೇ ಅಲ್ಲವೇ?

ಬೆಳಗಾವಿ – ಎಂಇಎಸ್‌ ಹಿಸ್ಟರಿ —

1947 ರಲ್ಲಿ ಭಾರತ ಸ್ವತಂತ್ರವಾದಾಗ, ಬೆಳಗಾವಿ ಜಿಲ್ಲೆ ಬಾಂಬೆ ರಾಜ್ಯದ ಭಾಗವಾಯಿತು. 1948 ರಲ್ಲಿ ಬೆಳಗಾವಿ ನಗರ ಸಭೆಯು ಜಿಲ್ಲೆಯನ್ನು ಮರಾಠಿ ಬಹುಸಂಖ್ಯಾತ ಜಿಲ್ಲೆ ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯ ಕೈಗೊಂಡಿತು. ಈ ಒಂದು ನಿರ್ಣಯದಿಂದ ಸ್ಪೂರ್ತಿಹೊಂಡ ಕೆಲವರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸ್ಥಾಪಿಸಿದರು. ಬೆಳಗಾವಿ ಜಿಲ್ಲೆ ಮೈಸೂರು ರಾಜ್ಯಕ್ಕೆ ಸೇರಿದ್ದು ಎಂದು ರಾಜ್ಯಗಳ ಪುನರ್‌ ವಿಂಗಡಣೆ ಆಯೋಗವು ವರದಿ ನೀಡಿತು.

2018ರಲ್ಲಿ ಎಂಇಎಸ್ ಎರಡು ಬಣಗಳಾಗಿ ವಿಭಜನೆ ಹೊಂದಿತ್ತು. ಕಿರಣ್ ಠಾಕೂರ್ ನೇತೃತ್ವದಲ್ಲಿ ಶಹರ್ ಏಕೀಕರಣ ಸಮಿತಿ ಮತ್ತು ದೀಪಕ್ ದಳವಿ ನೇತೃತ್ವದಲ್ಲಿ ಕೇಂದ್ರ ಏಕೀಕರಣ ಸಮಿತಿ ಹುಟ್ಟಿದವು. ಒಂದು ಹಂತದಲ್ಲಿ, ಬೆಳಗಾವಿ, ಕಾರವಾರ, ಬೀದರ್‌, ಕಲಬುರ್ಗಿ ಜಿಲ್ಲೆಗಳ ಗಡಿ ಭಾಗಗಳಲ್ಲಿ ಒಂದರಿಂದ ಐವರು ಎಂಇಎಸ್‌ ಬೆಂಬಲಿತ ಶಾಸಕರು ಇರುತ್ತಿದ್ದರು. 1999ರಲ್ಲಿ ಇದಕ್ಕೆ ಬ್ರೇಕ್‌ ಬಿದ್ದಿತು. ಸದ್ಯ ಎಂಇಎಸ್‌ ಬೆಂಬಲಿತ ಒಬ್ಬನೇ ಒಬ್ಬ ಶಾಸಕರಿಲ್ಲ. ಬೆಳಗಾವಿ ಪಾಲಿಕೆಯಲ್ಲೂ ಅದು ನಿಶಕ್ತಗೊಂಡಿದೆ. ಈ ಸಲ ಪಾಲಿಕೆ ಚುನಾವಣೆಯಲ್ಲಿ ಒಂದು ಹೊಸ ಬೆಳವಣಿಗೆ ಸಂಭವಿಸಿತು. ಹಿಂದೆಲ್ಲ ಇಲ್ಲಿ ಪಕ್ಷಗಳು ಪಕ್ಷದ ಚಿಹ್ನೆಯಿಂದ ಸ್ಪರ್ಧಿಸದೇ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದ್ದರು. ಗೆದ್ದ ಮರಾಠಿ ಅಭ್ಯರ್ಥಿಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದ ಎಂಇಎಸ್‌ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತ ಬಂದಿತ್ತು.

ಈ ಸಲದ ಪಾಲಿಕೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ತಮ್ಮ ಚಿಹ್ನೆ ಅಡಿಯೇ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರಿಂದ ಎಂಇಎಸ್‌ ಸಂಕಷ್ಟಕ್ಕೆ ಸಿಲುಕಿತು. ಪಕ್ಷಗಳ ಅಡಿ ಗೆದ್ದ ಮರಾಠಿಗರನ್ನು ಸೆಳೆದುಕೊಳ್ಳಲು ಎಂಇಎಸ್‌ಗೆ ಪಕ್ಷಾಂತರ ನಿಯಮಗಳು ಅಡ್ಡಿಯಾದವು. ಹೀಗಾಗಿ ಅದು ಹತಾಶಗೊಂಡಿದೆ. ಆ ಕಾರಣಕ್ಕೆ ಅದು ಸುದ್ದಿಯಲ್ಲಿ ಇರಲು, 2023 ಚುನಾವಣೆಯಲ್ಲಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಚಾರದ ಸ್ಟಂಟ್‌ ಮಾಡುತ್ತಿದೆ. ಅದರ ಭಾಗವಾಗಿಯೇ ಈಗ ಅದು ಭಾಷಾ ವಿಷಯಕ್ಕೆ ಕೈ ಹಾಕಿ ಮರಾಠಿ ಜನಸಾಂದ್ರಿತ ಪ್ರದೇಶಗಳಲ್ಲಿ ಮುನ್ನೆಲೆಗೆ ಬರಲು ಯತ್ನಿಸುತ್ತಿದೆ.

ಬೆಳಗಾವಿಯ ಕನ್ನಡ ಸಂಘಟನೆಗಳ ಒಕ್ಕೂಟದ ಪ್ರಮುಖ ಅಶೋಕ್‌ ಚಂದರಗಿ ʼಪ್ರತಿಧ್ವನಿʼಯೊಂದಗೆ ಮಾತನಾಡಿ, “1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಬೆಳಗಾವಿ ಜಿಲ್ಲೆ ಅಂದಿನ ಮೈಸೂರು ರಾಜ್ಯಕ್ಕೆ ಸೇರಿತು. ಆಗಿನಿಂದ ಮರಾಠಿ ಭಾಷೆಯ ಹಿನ್ನೆಲೆ ಇಟ್ಟುಕೊಂಡು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಅಜೆಂಡಾದೊಂದಿಗೆ ಎಂಇಎಸ್‌ ಹುಟ್ಟಿತು. ಆಗಿನಿಂದ ಅವರು ರಾಜ್ಯದ ಬೆಳಗಾವಿ, ಕಾರವಾರ, ಬೀದರ್‌, ಕಲಬುರ್ಗಿ ಜಿಲ್ಲೆಗಳಿಂದ ಒಂದರಿಂದ ಐದು ಸ್ಥಾನದವರೆಗೆ ಎಂಇಎಸ್‌ ಬೆಂಬಲಿತರು ಗೆಲ್ಲುತ್ತ ಬಂದಿದ್ದರು. 1999ರಲ್ಲಿ ಐವರು ಎಂಇಎಸ್‌ ಬೆಂಬಲಿತರು ಸೋತರು. 2013ರಲ್ಲಿ ಬೆಳಗಾವಿ ದಕ್ಷಿಣ ಮತ್ತು ಉಚಗಾಂವ್‌ನಿಂದ ಇಬ್ಬರು ಗೆದ್ದರು. ಈಗ ಸದ್ಯಕ್ಕೆ ಎಂಇಎಸ್‌ ಬೆಂಬಲಿತ ಶಾಸಕರ ಸಂಖ್ಯೆ ಶೂನ್ಯʼ ಎಂದು ವಿವರಿಸಿದರು.

ʼ1966ರ ಅಕ್ಟೋಬರ್‌ 25ರಂದು ಕಾರ್ಯಾರಂಭ ಮಾಡಿದ ಮಹಾಜನ್‌ ಆಯೋಗವು 1967ರಲ್ಲಿ ವರದಿ ನೀಡಿ, ಬೆಳಗಾವಿ ಕರ್ನಾಟಕದ ಭಾಗ ಎಂದು ಸ್ಪಷ್ಟವಾಗಿ ಹೇಳಿತು. 1970ರಲ್ಲಿ ಇದು ಸಂಸತ್ತಿನ ಮುಂದೆ ಬಂದಿತು. ಆದರೆ ಅದು ಇಂದಿಗೂ ಅಂಗೀಕಾರವಾಗಿಲ್ಲ. ಬೆಳಗಾವಿ ಸೇರಿದಂತೆ ಬೀದರ್‌, ಕಾರವಾರ, ಕಲಬುರ್ಗಿ ಜಿಲ್ಲೆ ಸೇರಿ 864 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಎಂಇಎಸ್‌ ಗುಂಪು ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ಆ ಪ್ರಕರಣವೂ ವಿಚಾರಣೆಗೆ ಬಂದಿಲ್ಲ,” ಎಂದು ಚಂದರಗಿ ತಿಳಿಸಿದರು.

ಒಟ್ಟಾರೆ ಎಂಇಸ್ ಈಗ ಗದ್ದಲ, ಪುಂಡಾಟಿಕೆ ಮೂಲಕ ಭಾಷಾ ವೈಷಮ್ಯ ಸೃಷ್ಟಿಸಿ ಭಾಷೆಯ ಆಧಾರದಲ್ಲಿ ಮತ ವಿಭಜನೆ ಮಾಡುವ ವ್ಯರ್ಥ ಕಸರತ್ತಿಗೆ ಬಿದ್ದಿದೆ. ಸಾಮಾನ್ಯ ಮರಾಠಿಗರು ಈಗ ಎಂಇಎಸ್‌ನ ಹಣಕಾಸು ದಂಧೆಯಿಂದ ಬೇಸತ್ತಿದ್ದಾರೆ ಮತ್ತು ಕರ್ನಾಟಕವೇ ತಮ್ಮ ನೆಲೆ ಎಂದು ಮನಗಂಡಿದ್ದಾರೆ. ಈಗ ಎಂಇಎಸ್‌ ಒಂದು ಪುಂಡರ, ವಸೂಲಿಕೋರರ ಗುಂಪಾಗಿ ಪರಿವರ್ತನೆಗೊಂಡಿದೆ ಅಷ್ಟೇ..!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here