ಕಲಬುರಗಿ: ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಆಸ್ತಿಗಳಾಗಿ ಪರಿಣಮಿಸಬೇಕು ಎಂದು ಪತ್ರಕರ್ತ ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಎಂ.ಎನ್. ದೇಸಾಯಿ ಪದವಿ ಕಾಲೇಜಿನಲ್ಲಿ ಹೊಸ ವರ್ಷದ ಆಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಹೊಸ ವರ್ಷಾಚರಣೆ ಹಾಗೂ ೨೦೨೨ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಹೊಸ ವರ್ಷದ ದಿನ ಹೊಸ ಯೋಜನೆ, ಯೋಚನೆ ಹಾಕಿಕೊಂಡು ಬಸುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.
ಸತತ ಪ್ರಯತ್ನ, ಶ್ರಮ ಜೀವನ, ವೈಜ್ಞಾನಿಕ, ವೈಚಾರಿಕ ಜೀವನ ಸಾಗಿಸುವ ಮೂಲಕ ಬದುಕಿಗೆ ಬೆಲೆ ತಂದುಕೊಳ್ಳಬೇಕು. ಕನಸು ಕಾಣಬೇಕು. ಆದರೆ ನಮ್ಮ ಕನಸಾಗುವ ದಿಸೆಯಲ್ಲಿ ಮುಂದೆ ಸಾಗಬೇಕು. ಬುದ್ಧ, ಬಸವ ಅಂಬೇಡ್ಕರ್ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ಉಪನ್ಯಾಸಕ ಕಾಶಿನಾಥ ಬಿರಾದಾರ ಮಾತನಾಡಿ, ಸತತ ಅಧ್ಯಯನ, ಕಠಿಣ ಶ್ರಮ, ತಾಳ್ಮೆಯಿಂದ ಬದುಕು ಸಾಗಿಸಬೇಕು. ನಕಾರಾತ್ಮಕವಾಗಿ ಚಿಂತಿಸದೆ ಸಕಾರಾತ್ಮಕ ಚಿಂತನೆಯನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಜೀವನದಲ್ಲಿ ಗುರಿ ಇರಬೇಕು. ಆ ಗುರಿಯ ಬೆನ್ನು ಹತ್ತಿ ಗುರಿ ಸಾಧಿಸುವವರೆಗೆ ವಿಶ್ರಮಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು. ಸಂಸ್ಥೆಯ ಅಧ್ಯಕ್ಷ ಸಂದೀಪ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಗನ್ನಾಥ ನಾಗೂರ, ಉದ್ಯಮಿ ಅಬ್ಜಲ್ ಅಲಿ, ಶೃಂಗೇರಿ ಅಕಾಡೆಮಿಯ ಗಾಳೇಶ ವೇದಿಕೆಯಲ್ಲಿದ್ದರು.
ಆನಂತತೀರ್ಥ ಜೋಶಿ ನಿರೂಪಿಸಿದರು. ಮಂಜುನಾಥ ಬನ್ನೂರ ಸ್ವಾಗತಿಸಿದರು. ನಾಗರಾಜ ಪಟ್ಟಣಕರ ವಂದಿಸಿದರು. ಉಪನ್ಯಾಸಕಾರದ ಅನುರಾಧ ಮದ್ರಕಿ, ಪ್ರಿಯಾಂಕಾ, ಸುಪ್ರಿತಾ, ಅನ್ನಪೂರ್ಣ, ಅಮರ, ಶ್ರುತಿ, ಶಿಲ್ಪಾ ಇತರರಿದ್ದರು.