ಗದಗ : ಅವಳಿ ನಗರ ಗದಗ ಬೆಟಗೇರಿಯಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ರಸ್ತೆಗಳು ಹದಗೆಟ್ಟು ಹೋಗಿದ್ದು, ಜನನಿಬಿಡ ಹಾಗೂ ಕೂಡು ರಸ್ತೆಗಳಲ್ಲಿರುವ ಪ್ರತಿಮೆಗಳಿಗೆ ಪ್ರತಿನಿತ್ಯವೂ ದೂಳಿನ ಮಜ್ಜನವಾಗುತ್ತಿದೆ.
ಗದಗ ಬೆಟಗೇರಿ ನಗರಸಭೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಹೊರಬಂದರೆ ಕಾಣಿಸುವ ಮಹಾತ್ಮ ಗಾಂಧಿ, ಅಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಆಕರ್ಷಕ ಪ್ರತಿಮೆ, ಅಲ್ಲಿಂದ ಬಲಕ್ಕೆ ತಿರುಗಿದರೆ ಐನೂರು ಮೀಟರ್ ದೂರದಲ್ಲಿ ಕಾಣಿಸುವ ಕೆ.ಎಚ್.ಪಾಟೀಲರ ಪ್ರತಿಮೆ, ಮುಂದೆ ಹೋದರೆ ಸಿಗುವ ಬಸವಣ್ಣ, ಅಲ್ಲಿಂದ ಒಂದೆರಡು ಕಿ.ಮೀ. ಸಾಗಿದರೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳು ಇವೆ. ಜತೆಗೆ ಟಾಂಗಾಕೂಟ್‌ನಲ್ಲಿ ಹುಯಿಲಗೋಳ ನಾರಾಯಣರಾವ್ ಪ್ರತಿಮೆ ಸಹ ಇದೆ.
ಆಯಾ ವ್ಯಕ್ತಿಗಳ ಜಯಂತ್ಯುತ್ಸವದಂದು ಪ್ರತಿಮೆಗಳನ್ನು ಸ್ವಚ್ಛಗೊಳಿಸಿ, ಪೂಜೆ ಮಾಡಲಾಗುತ್ತದೆ. ಆದರೆ, ಮಹಾತ್ಮ ಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಒಂದಿಲ್ಲೊಂದು ಪ್ರತಿಭಟನೆ ನಡೆಯುತ್ತಿರುತ್ತದೆ. ಕೆಲವು ಸಂಘಟನೆಗಳ ಸದಸ್ಯರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋಗುತ್ತಾರೆ. ಎರಡು ಮೂರು ದಿನಗಳ ನಂತರ ಕೊರಳಿನಲ್ಲಿರುವ ಹಾರ ಒಣಗಿ ಹೋಗಿರುತ್ತದೆ. ಅದನ್ನು ತೆಗೆಯುವ, ಪ್ರತಿಮೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತಿಲ್ಲ. ನಗರಸಭೆಯವರು ಈ ಕೆಲಸವನ್ನು ಪ್ರತಿಭಟನಕಾರರ ತಲೆಗೆ ಕಟ್ಟಿ ಕೈ ತೊಳೆದುಕೊಂಡಿದ್ದಾರೆ.
‘ಈ ಹಿಂದೆ ಗದಗ ಬೆಟಗೇರಿ ರಸ್ತೆಗಳು ಉತ್ತಮವಾಗಿದ್ದವು. ಆದರೆ, 24X7 ನೀರು ಪೂರೈಕೆ ಹಾಗೂ ಯುಜಿಡಿ ಕಾಮಗಾರಿಗಾಗಿ ಉತ್ತಮವಾಗಿದ್ದ ರಸ್ತೆಗಳೆಲ್ಲವನ್ನೂ ಅಗೆಯಲಾಯಿತು. ನೀರಿನ ಪೈಪ್‌ಲೈನ್, ಯುಜಿಡಿ ಕೆಲಸ ಮುಗಿದ ನಂತರವೂ ರಸ್ತೆ ದುರಸ್ತಿ ಆಗಲಿಲ್ಲ. ಇದರಿಂದಾಗಿ ನಗರದಲ್ಲಿ ದೂಳಿನ ಸಮಸ್ಯೆ ವಿಪರೀತವಾಗಿದ್ದು, ಇಲ್ಲಿರುವ ಪ್ರತಿಮೆಗಳಿಗೆ ನಿತ್ಯವೂ ದೂಳಿನ ಮಜ್ಜನ ಆಗುತ್ತಿದೆ’ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.
‘ನಗರದಲ್ಲಿರುವ ಪ್ರತಿಮೆಗಳ ನಿರ್ವಹಣೆ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಕೊಡಲಾಗಿದೆ. ಪ್ರತಿಮೆಗಳ ಮುಂದೆ ನಡೆಯುವ ಪ್ರತಿಭಟನೆ ಅಥವಾ ಜಯಂತ್ಯುತ್ಸವದ ನಂತರ ಸ್ವಚ್ಛತೆಯ ಜವಾಬ್ದಾರಿಯನ್ನೂ ಸಂಬಂಧಪಟ್ಟವರಿಗೆ ವಹಿಸಲಾಗಿದೆ. ಪ್ರತಿಮೆಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ, ಸಿಬ್ಬಂದಿ ಇಲ್ಲ. ಆದರೆ, ಪ್ರತಿಮೆಗಳಿಗೆ ಧಕ್ಕೆಯಾದರೆ ತಕ್ಷಣವೇ ಹಣ ಬಿಡುಗಡೆ ಮಾಡಿ ದುರಸ್ತಿಗೆ ಕ್ರಮವಹಿಸಲಾಗುವುದು. ಗದಗ ಬೆಟಗೇರಿ ಅವಳಿ ನಗರದಲ್ಲಿ ಎಲ್ಲ ಮೂರ್ತಿಗಳು ಸುಸ್ಥಿತಿಯಲ್ಲಿ ಇವೆ’ ಎನ್ನುತ್ತಾರೆ ಅವರು.
ಜಯಂತಿ, ಜನ್ಮದಿನಗಳಂದು ಫಲಕಗಳಿಗೆ ಪೂಜೆ: ಗಜೇಂದ್ರಗಡ: ಪಟ್ಟಣದಲ್ಲಿ ಹಲವು ಮಹಾತ್ಮರ ವೃತ್ತಗಳಿವೆ. ಮಹಾತ್ಮರ ವೃತ್ತಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಆದರೆ, ಎಲ್ಲಿಯೂ ಪ್ರತಿಮೆಗಳಿಲ್ಲ.
ಪಟ್ಟಣದಲ್ಲಿ ರಾಣಿ ಚೆನ್ನಮ್ಮ, ಕಾಲಕಾಲೇಶ್ವರ, ದುರ್ಗಾದೇವಿ, ಶಿವಾಜಿ, ಅಂಬೇಡ್ಕರ್, ಮಾದರ ಚನ್ನಯ್ಯ, ಭಜರಂಗಿ, ಬಸವೇಶ್ವರ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ವೃತ್ತಗಳಿವೆ. ಮಹಾತ್ಮರ ಜಯಂತಿಗಳು ಬಂದಾಗ ಆಯಾ ವೃತ್ತಗಳಲ್ಲಿರುವ ಫಲಕಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಕಾಲಕಾಲೇಶ್ವರ ವೃತ್ತದಲ್ಲಿ ಕಲ್ಲಿನಿಂದ ಕೋಟೆ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ವೃತ್ತದ ನಡುವೆ ನಾಲ್ಕು ಕಡೆ ಕಲ್ಲಿನಲ್ಲಿ ಕಾಲಕಾಲೇಶ್ವರನ ಸಣ್ಣ ಮೂರ್ತಿಗಳಿವೆ. ಅದರಂತೆ ಜೋಡು ರಸ್ತೆಯಲ್ಲಿರುವ ಶಿವಾಜಿ ವೃತ್ತವನ್ನು ಗ್ರಾನೈಟ್ ಕಲ್ಲಿನಲ್ಲಿ ಕಟ್ಟೆ ನಿರ್ಮಿಸಿ ಅದರ ಸುತ್ತ ಕಬ್ಬಿಣದ ಸರಳಿನ ಕವಚ ನಿರ್ಮಿಸಲಾಗಿದೆ.
ಇತ್ತೀಚೆಗೆ ಎಲ್ಲೆಂದರಲ್ಲಿ ಮಹಾತ್ಮರು, ಚಿತ್ರನಟರು ಸೇರಿದಂತೆ ಹಲವಾರು ಜನರ ಹೆಸರಿನಲ್ಲಿ ವೃತ್ತಗಳು ತಲೆ ಎತ್ತುತ್ತಿವೆ. ಪಟ್ಟಣದ ದುರ್ಗಾ ವೃತ್ತದಿಂದ ಟಿಟಿಡಿ ಕಲ್ಯಾಣ ಮಂಟಪದವರೆಗೆ ಐದಾರು ವೃತ್ತಗಳನ್ನು ನಿರ್ಮಿಸಿ ಅಲ್ಲಿ ಫಲಕಗಳನ್ನು ಹಾಕಲಾಗಿದೆ. ಪಟ್ಟಣದಲ್ಲಿರುವ ಬಹುತೇಕ ವೃತ್ತಗಳು ಅಧಿಕೃತ ಪರವಾನಗಿ ಪಡೆದಿಲ್ಲ. ‘ನನ್ನ ಅವಧಿಯಲ್ಲಿ ಪಟ್ಟಣದಲ್ಲಿ ನಿರ್ಮಿಸಿರುವ ಯಾವ ವೃತ್ತಗಳಿಗೂ ಅಧಿಕೃತ ಪರವಾನಗಿ ಪಡೆಯಲಾಗಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಮಾಹಿತಿ ನೀಡಿದರು.
ಕಾಯಕಲ್ಪಕ್ಕೆ ಕಾಯ್ದಿರುವ ಕಂಬಳಿ ವೃತ್ತ: ಮುಂಡರಗಿ: ಪಟ್ಟಣದ ವಿವಿಧ ಭಾಗಗಳಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವು ಮಹಾತ್ಮರ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.
ಕೋಟೆ ಹನುಮಂತನ ದೇವಸ್ಥಾನದ ವಿಶಾಲವಾದ ವೃತ್ತದಲ್ಲಿ ಸರ್ ಸಿದ್ಧಪ್ಪ ಕಂಬಳಿ ವೃತ್ತವನ್ನು ನಿರ್ಮಿಸಲಾಗಿದ್ದು, ಮಧ್ಯದಲ್ಲಿ ಅವರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಕೋಟೆ ಭಾಗದ ಅಂದವನ್ನು ಹೆಚ್ಚಿಸಬೇಕಾಗಿದ್ದ ಮೂರ್ತಿ ಹಾಗೂ ವೃತ್ತವು ಅಸ್ತವ್ಯಸ್ತವಾಗಿದ್ದು, ಅಲ್ಲಿಯ ಜನರು ವೃತ್ತಕ್ಕೆ ನಿತ್ಯ ಜಾನುವಾರು ಕಟ್ಟುತ್ತಾರೆ. ಮಹಿಳೆಯರು ವೃತ್ತದ ಸುತ್ತಲೂ ಬಟ್ಟೆ ಒಣಗಿಸುತ್ತಾರೆ. ಇದರಿಂದಾಗಿ ವೃತ್ತದ ಅಂದ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
ಮೂರು ವರ್ಷಗಳ ಹಿಂದೆ ಸಿದ್ಧಪ್ಪ ಕಂಬಳಿ ವೃತ್ತದ ಮಧ್ಯದಲ್ಲಿ ನಿರ್ಮಿಸಿರುವ ಹೈಮಾಸ್ಟ್ ದೀಪಗಳನ್ನು ದುರಸ್ತಿಗೊಳಿಸಲು ಕೆಳಗಿಳಿಸಲಾಗಿದೆ. ಆದರೆ ಈವರೆಗೂ ದುರಸ್ತಿಯಾಗದೇ ಮೂರ್ತಿಯ ಮೇಲೆ ನೇತಾಡುತ್ತಲಿವೆ. ಪಟ್ಟಣದ ಬೃಂದಾವನ ವೃತ್ತದ ಪಕ್ಕದಲ್ಲಿ ಹೇಮರೆಡ್ಡಿ ಮಲ್ಲಮ್ಮನ ಮೂರ್ತಿಯನ್ನು ಇತ್ತೀಚೆಗೆ ಪ್ರತಿಷ್ಠಾಪಿಸಲಾಗಿದೆ. ಅದು ಸುರಕ್ಷಿತವಾಗಿದ್ದು, ನಿತ್ಯ ಮೂರ್ತಿ ಹಾಗೂ ಅದರ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಪುರಸಭೆ ಕಾರ್ಯಾಲಯದ ಮುಂದೆ ಮಹಾತ್ಮಗಾಂಧಿ ಮೂರ್ತಿಯನ್ನು ಸ್ಥಾಪಿಸಲಾಗಿದ್ದು, ಅದನ್ನು ಓರಣವಾಗಿ ಇಟ್ಟುಕೊಳ್ಳಲಾಗಿದೆ. ಗಾಂಧೀಜಿ ಮೂರ್ತಿ ಸುತ್ತಲೂ ಹೂವಿನ ಕುಂಡಗಳನ್ನು ಜೋಡಿಸಲಾಗಿದ್ದು, ನಿತ್ಯ ಸ್ವಚ್ಛತೆಯನ್ನು ಕಾಪಾಡಲಾಗುತ್ತಿದೆ.
ಪಟ್ಟಣದ ವಿ.ಜಿ.ಲಿಂಬಿಕಾಯಿ ಶಾಲೆಯಲ್ಲಿ ವಿ.ಜಿ.ಲಿಂಬಿಕಾಯಿ ಮೂರ್ತಿಯನ್ನು ಹಾಗೂ ಜೆ.ಟಿ.ಕೋಟೆ ಪ್ರೌಢ ಶಾಲೆಯಲ್ಲಿ ಎಸ್.ಎಂ.ಪೂಜಾರ ಗುರುಗಳ ಮೂರ್ತಿಯನ್ನು ಸ್ಥಾಪಿಸಲಾಗಿದ್ದು, ಅವು ಸುಸ್ಥಿತಿಯಲ್ಲಿವೆ.
ಪಟ್ಟಣದ ಹೃದಯ ಭಾಗದಲ್ಲಿ ಕೊಪ್ಪಳ ವೃತ್ತವಿದ್ದು, ಇತ್ತೀಚೆಗೆ ಅದಕ್ಕೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ ಭೀಮರಾವ್ ಅವರ ಹೆಸರನ್ನು ಇಡಲಾಗಿದೆ. ವೃತ್ತದ ಮಧ್ಯದಲ್ಲಿ ಭೀಮರಾವ್ ಮೂರ್ತಿಯನ್ನು ಸ್ಥಾಪಿಸಬೇಕು ಎಂದು ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದ್ದು, ಅದು ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ.
ಪ್ರತಿಮೆ ಸ್ವಚ್ಛವಾಗಿಡಲು ಒತ್ತಾಯ: ರೋಣ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಇದ್ದು, ಗಾಂಧಿ ಜಯಂತಿ ಹಾಗೂ ಪುಣ್ಯಸ್ಮರಣೆ, ಪ್ರತಿಭಟನೆಗಳು ಇದ್ದಾಗ ಮಾತ್ರ ಹೂ ಮಾಲೆ ಹಾಕುವುದನ್ನು ಬಿಟ್ಟರೆ ಮತ್ತೇ ಯಾವುದೇ ಸಂದರ್ಭದಲ್ಲಿ ಪ್ರತಿಮೆ ಅಲಂಕಾರಗೊಳ್ಳುವುದಿಲ್ಲ.
ಇದನ್ನು ಪ್ರತಿ ತಿಂಗಳಗಳಿಗೊಮ್ಮೆ ಸ್ವಚ್ಛಗೊಳಿಸಬೇಕು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಡಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳು ಇಲ್ಲ: ನರೇಗಲ್: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಮೂರ್ತಿ, ಪ್ರತಿಮೆಗಳನ್ನು ಈವರೆಗೆ ಪ್ರತಿಷ್ಠಾಪನೆ ಮಾಡಿಲ್ಲ. ಗಾಂಧೀಜಿಯವರು ಭೇಟಿ ನೀಡಿದ ಸವಿ ನೆನೆಪಿಗಾಗಿ ಗಾಂಧಿ ಭವನವನ್ನು ನಿರ್ಮಿಸಲಾಗಿತ್ತು. ಆದರೆ, ಸದ್ಯ ಅದು ಈಗ ಪಾಳುಬಿದ್ದಿದ್ದು ಕುಡುಕರು, ಪುಂಡರು ಹಾಗೂ ಹಂದಿಗಳ ವಾಸಸ್ಥಳವಾಗಿದೆ.
ರಕ್ಷಣೆ ಇಲ್ಲದ ಪ್ರತಿಮೆಗಳು —
ಲಕ್ಷ್ಮೇಶ್ವರ: ಪಟ್ಟಣದಲ್ಲಿ ವಿದ್ಯಾರಣ್ಯ, ಮಹಾಕವಿ ಪಂಪ, ಕಿತ್ತೂರು ಚನ್ನಮ್ಮ, ಶಿವಶರಣ ಆದಯ್ಯ, ಮಹಾತ್ಮ ಗಾಂಧೀಜಿ ಹೀಗೆ ಒಟ್ಟು ಐದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಆದರೆ ವಿದ್ಯಾರಣ್ಯ ಪ್ರತಿಮೆ ಒಂದಕ್ಕೆ ಮಾತ್ರ ಚಾವಣಿ ನಿರ್ಮಿಸಲಾಗಿದೆ. ಉಳಿದ ಪ್ರತಿಮೆಗಳಿಗೆ ಈ ವ್ಯವಸ್ಥೆ ಇಲ್ಲವಾಗಿದೆ.
ವಿದ್ಯಾರಣ್ಯ ಮತ್ತು ಮಹಾಕವಿ ಪಂಪನ ಪ್ರತಿಮೆಗಳಿಗೆ ಕನ್ನಡ ರಾಜ್ಯೋತ್ಸವದಂದು ಮಾತ್ರ ಪೂಜೆ ನಡೆಯುತ್ತದೆ. ಇನ್ನು ಚೆನ್ನಮ್ಮನ ಪ್ರತಿಮೆಗೂ ಅಷ್ಟೆ ಚೆನ್ನಮ್ಮನ ಜಯಂತಿ, ಕನ್ನಡ ರಾಜ್ಯೋತ್ಸವ ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ಪೂಜೆ ನಡೆಯುತ್ತಿದೆ. ಇನ್ನು ಶಿವಶರಣ ಆದಯ್ಯನಿಗೆ ಮಾತ್ರ ಆ ಭಾಗ್ಯವೂ ಇಲ್ಲ. ಗಾಂಧಿ ವರ್ತುಲದಲ್ಲಿನ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾತ್ರ ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಅಲ್ಲದೆ ಕಂಪೌಂಡ್ ಕಟ್ಟಿರುವುದರಿಂದ ಪ್ರತಿಮೆಗೂ ಸೂಕ್ತ ರಕ್ಷಣೆ ಸಿಕ್ಕಿದೆ.