ಹುಬ್ಬಳ್ಳಿ: ಶಿಕ್ಷಣ ಹಾಗೂ ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಸರ್ವತೋಮುಖ ಪ್ರಗತಿ ಕಾಣಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ 2003ರಲ್ಲಿ ವಿಜಯಪುರದಲ್ಲಿ ಆರಂಭಿಸಿದ ರಾಜ್ಯದ ಏಕೈಕ ಮಹಿಳಾ ವಿದ್ಯಾವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಕ್ರೀಡಾ ಕ್ಷೇತ್ರದಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿವೆ.
ಈ ವಿಶ್ವವಿದ್ಯಾಲಯ ವಿಜಯಪುರದಲ್ಲಿ ದೊಡ್ಡ ಕ್ಯಾಂಪಸ್ ಹೊಂದಿದ್ದು, ಮಂಡ್ಯ ಮತ್ತು ಸಿಂಧನೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಆರಂಭಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ 148 ಕಾಲೇಜುಗಳು ಇದೇ ವಿ.ವಿ. ವ್ಯಾಪ್ತಿಯಲ್ಲಿ ಬರುತ್ತವೆ. ಅಥ್ಲೆಟಿಕ್ ಹೊರತುಪಡಿಸಿ ಉಳಿದ ಯಾವುದೇ ಕ್ರೀಡಾಕೂಟಗಳು ನಡೆದರೂ ಅಲ್ಲಿ ಕಾಲೇಜುಗಳು ಪಾಲ್ಗೊಳ್ಳುವಿಕೆ ಬೆರಳೆಣಿಕೆಯಷ್ಟೇ ಇರುತ್ತದೆ.
ವಿಶ್ವವಿದ್ಯಾಲಯ ತಂಡದ ಆಯ್ಕೆ ಮಾಡಲು ಪ್ರತಿ ವರ್ಷ ಎಲ್ಲಾ ಕ್ರೀಡೆಗಳಿಗೆ ಅಂತರ ಕಾಲೇಜುಗಳ ಟೂರ್ನಿ ಹಾಗೂ ಟ್ರಯಲ್ಸ್ ನಡೆಸಲಾಗುತ್ತದೆ. ಅಲ್ಲಿಯೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಾಲೇಜುಗಳು ಪಾಲ್ಗೊಳ್ಳುತ್ತವೆ. ಹೀಗಾಗಿ ಸ್ಪರ್ಧಿಗಳ ನಡುವೆ ಸ್ಪರ್ಧೆಯೂ ಕಠಿಣವಾಗಿರುವುದಿಲ್ಲ. ಅನಿವಾರ್ಯವಾಗಿ ವಿ.ವಿ. ಇದ್ದ ಆಟಗಾರ್ತಿಯರನ್ನೇ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಟೂರ್ನಿಗೆ ಆಯ್ಕೆ ಮಾಡುತ್ತಿವೆ.
ಹುಬ್ಬಳ್ಳಿಯಲ್ಲಿ ನಡೆದ ವಿ.ವಿ. ವ್ಯಾಪ್ತಿಯ ಮಹಿಳಾ ಕಾಲೇಜುಗಳ ಕಬಡ್ಡಿ ಟೂರ್ನಿ ಹತ್ತು ವರ್ಷಗಳ ಬಳಿಕ ಮೂರುಸಾವಿರ ಮಠದ ಮಹಿಳಾ ಕಾಲೇಜಿನಲ್ಲಿ ಆಯೋಜನೆಯಾಗಿತ್ತು. ಅಲ್ಲಿ 14 ತಂಡಗಳಷ್ಟೇ ಪಾಲ್ಗೊಂಡಿದ್ದವು.
ಅಕ್ಕಮಹಾದೇವಿ ಮಹಿಳಾ ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಹನುಮಂತಪ್ಪ ಪೂಜಾರಿ ಈ ಕುರಿತು ಪ್ರತಿಕ್ರಿಯಿಸಿ ‘ಸೆಮಿಸ್ಟರ್ ಶಿಕ್ಷಣ ಪದ್ಧತಿ ಮಕ್ಕಳಿಗೆ ಹೊರೆಯಾಗುತ್ತಿದ್ದು, ಸಕ್ರಿಯವಾಗಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರೋತ್ಸಾಹ ಹಾಗೂ ಸೌಲಭ್ಯದ ಕೊರತೆ ಕೂಡ ಇದಕ್ಕೆ ಪ್ರಮುಖ ಕಾರಣ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ದೈಹಿಕ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಆಗ ಕ್ರೀಡೆಯನ್ನು ನೋಡುವ ದೃಷ್ಟಿಕೋನ ಬದಲಾಗುವ ಭರವಸೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕ್ರೀಡಾ ಸಂಸ್ಕೃತಿ ಇನ್ನಷ್ಟು ಬೆಳೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಕಾಲೇಜುಗಳು ಯಾವ ಕ್ರೀಡೆಯಲ್ಲಿ ಬಲಿಷ್ಠವಾಗಿರುತ್ತವೆಯೊ ಆ ಕ್ರೀಡೆಗಳಿಗಷ್ಟೇ ಮಹತ್ವ ನೀಡುತ್ತಿವೆ. ಎಲ್ಲಾ ಕ್ರೀಡೆಗಳಲ್ಲಿ ಪಾಲ್ಗೊಂಡರೆ ಆಟಗಾರ್ತಿಯರ ಆಟದ ಗುಣಮಟ್ಟ ಹೆಚ್ಚುತ್ತದೆ. -ಮಹೇಶ್ವರಿ ಉದಗಟ್ಟಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ, ಎಸ್.ಜೆ.ಎಂ.ವಿ. ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು
ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರ ನೌಕರಿ ಕೊಡಬೇಕು. ಸೌಲಭ್ಯಗಳನ್ನು ಕಲ್ಪಿಸಬೇಕು. ಆಗ ಮಾತ್ರ ಶಿಕ್ಷಣದಷ್ಟೇ ಕ್ರೀಡೆಗೂ ಆದ್ಯತೆ ನೀಡಲು ಸಾಧ್ಯವಾಗುತ್ತದೆ. -ಗೀತಾ ಬಿದರಿ, ಕಬಡ್ಡಿ ಆಟಗಾರ್ತಿ, ಹುಬ್ಬಳ್ಳಿ