ಬೀದರ್: ಮಹಾರಾಷ್ಟ್ರ ಗಡಿಬಾಗ ಬಿಗಿ, ತೆಲಂಗಾಣ ಸಡಿಲ

0
22

ಬೀದರ್: ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಮತ್ತೆ ಏರತೊಡಗಿದೆ. ಸೋಂಕಿನ ಸರಪಳಿ ತುಂಡರಿಸಲು ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದೆ. ಕೆಲ ಇಲಾಖೆಗೆ ಸ್ಪಷ್ಟ ನಿರ್ದೇಶನ ಕೊಡದ ಕಾರಣ ಅಧಿಕಾರಿಗಳು ಗೊಂದಲದಲ್ಲಿದ್ದರೆ, ವಿದ್ಯಾರ್ಥಿಗಳ ಪಾಲಕರು ಆತಂಕದಲ್ಲಿದ್ದಾರೆ.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಹುಲಸೂರಿನ ಶಹಾಜನಿ ಔರಾದ್ ಔರಾದ್, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ಮಾತ್ರ ಪ್ರಯಾಣಿಕರ ಬಿಗಿ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್‌ ಪ್ರತಿಬಂಧಕ ಲಸಿಕೆ ಪಡೆಯದ ಹಾಗೂ 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ್‌ ವರದಿ ಇಲ್ಲದೆ ಬಂದವರನ್ನು ಮುಲಾಜಿಲ್ಲದೆ ಮರಳಿ ಕಳಿಸಲಾಗುತ್ತಿದೆ.

Contact Your\'s Advertisement; 9902492681

ತೆಲಂಗಾಣಕ್ಕೆ ಹೊಂದಿಕೊಂಡಿರುವ ಬೀದರ್ ತಾಲ್ಲೂಕಿನ ಭಂಗೂರ್, ಶಹಾಪುರ ಗೇಟ್, ಔರಾದ್‌ ತಾಲ್ಲೂಕಿನ ಜಮಗಿ ಬಳಿ ಚೆಕ್‌ಪೋಸ್ಟ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ‍ಪೊಲೀಸರು ಇಲ್ಲ. ಐದು ದಿನಗಳ ಹಿಂದೆಯೇ ಇಲ್ಲಿನ ಸಿಬ್ಬಂದಿ ಜಾಗ ಖಾಲಿ ಮಾಡಿದ್ದಾರೆ.

ಜಿಲ್ಲೆಯ ಅನೇಕರ ಸಂಬಂಧಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ಇದ್ದಾರೆ. ಅವರು ಆಗಾಗ ಬಂದು ಹೋಗುವುದು ಸಾಮಾನ್ಯ. ಹೈದರಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬೀದರ್‌, ಕಲಬುರಗಿ ಜಿಲ್ಲೆಗೆ ಬರುತ್ತಾರೆ. ವಿದೇಶದಿಂದ ಬರುವವರು ಸಲೀಸಾಗಿ ಮನೆ ಸೇರುತ್ತಿದ್ದಾರೆ. ತೆಲಂಗಾಣದಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಇಲ್ಲ. ಹೀಗಾಗಿ ತೆಲಂಗಾಣ ಗಡಿಯಲ್ಲಿ ಸಿಬ್ಬಂದಿ ನಿಯೋಜಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ತಪಾಸಣೆ ಚುರುಕು: ಕೋವಿಡ್ ಸೋಂಕು ಹರಡುವಿಕೆ ತಡೆಯಲು ಗಡಿಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವನಮಾರಪಳ್ಳಿ ಚೆಕ್ ಪೋಸ್ಟ್‌ನಲ್ಲಿ ಪ್ರತಿಯೊಂದು ವಾಹನ ತಪಾಸಣೆ ಮಾಡಲಾಗುತ್ತಿದೆ.

‘ಜಿಲ್ಲೆಯನ್ನು ಪ್ರವೇಶಿಸುವ ಪ್ರತಿ ವ್ಯಕ್ತಿ ಬಳಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಇರುವುದು ಕಡ್ಡಾಯ. ಇಲ್ಲವಾದಲ್ಲಿ ಕೋವಿಡ್ ನೆಗೆಟಿವ್ ವರದಿ ಇರಲೇಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ ಎಂದು ಔರಾದ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ‌.ಗಾಯತ್ರಿ ತಿಳಿಸಿದ್ದಾರೆ.

ಕಮಲನಗರ ಮೂಲಕ ಕಳೆದ ಮೂರು ದಿನಗಳಲ್ಲಿ ಹೊರ ರಾಜ್ಯಗಳಿಂದ ಸುಮಾರು 250ಕ್ಕೂ ಹೆಚ್ಚು ಜನ ಬಂದಿದ್ದಾರೆ. ಈ ಎಲ್ಲ ಜನರ ಸಂಪೂರ್ಣ ಮಾಹಿತಿಯನ್ನು ನೋಂದಣಿ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪಿಎಸ್‌ಐ ನಂದಿನಿ ಎಸ್ ತಿಳಿಸಿದರು.

ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಹಾರಾಷ್ಟ್ರ ಗಡಿಯಲ್ಲಿನ ಚೆಕ್ ಪೋಸ್ಟ್‌ನಲ್ಲಿ ಪ್ರವಾಸಿಗರ ತಪಾಸಣೆ ತೀವ್ರಗೊಳಿಸಲಾಗಿದೆ.

‘ಪ್ರತಿ ಖಾಸಗಿ ವಾಹನದ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದವರು ಈ ಕಡೆ ಬಂದರೆ ಅವರು ಎರಡು ಲಸಿಕೆ ಪಡೆದ ದಾಖಲೆಗಳು ಇಲ್ಲದಿದ್ದರೆ ಪ್ರವೇಶ ನೀಡಲಾಗುತ್ತಿಲ್ಲ. ಅಲ್ಲದೆ ಈ ಕಡೆಯವರು ಆ ಕಡೆ ಹೋಗಿ ಬಂದಾಗ ಸ್ಥಳದಲ್ಲೇ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ಕಂಡು ಬಂದರೆ ಅವರನ್ನು ಆಸ್ಪತ್ರೆಗೆ ಕಳುಹಿಸುವುದಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ’ ಎಂದು ಆರೋಗ್ಯ ನಿರೀಕ್ಷಕ ವೈಜನಾಥ ಚನಶೆಟ್ಟಿ ತಿಳಿಸಿದ್ದಾರೆ.

‘ಕಟ್ಟುನಿಟ್ಟಿನ ತಪಾಸಣೆ ನಡೆಸಿದ ಕಾರಣ ವಾರದಿಂದ ಪ್ರತಿದಿನ 30 ವಾಹನಗಳು ವಾಪಸ್ ಹೋಗುತ್ತಿವೆ. ಎರಡು ವರ್ಷಗಳಿಂದ ಇಲ್ಲಿ ತಪಾಸಣೆ ನಡೆಸುತ್ತಿದ್ದರೂ ಇತ್ತೀಚಿಗೆ ಮತ್ತೆ ತಪಾಸಣೆ ತೀವ್ರಗೊಳಿಸಲಾಗಿದೆ. ಕೆಲ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿ ಮೂರು ಶಿಫ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.

ಹುಲಸೂರು ತಾಲ್ಲೂಕಿನ ಶಹಾಜನಿ ಔರಾದ್‌ ಗಡಿಯಲ್ಲೂ ತಪಾಸಣೆ ಬಿಗಿಗೊಳಿಸಲಾಗಿದೆ. 24 ಗಂಟೆಗಳ ಅವಧಿಯಲ್ಲಿ 300 ಮಂದಿ ಜಿಲ್ಲೆಗೆ ಬಂದಿದ್ದಾರೆ. ದಾಖಲೆ ಇಲ್ಲದೆ ಬಂದ 62 ಪ್ರಯಾಣಿಕರನ್ನು ವಾಪಸ್‌ ಕಳಿಸಲಾಗಿದೆ. ತುರ್ತು ಸಂದರ್ಭದಲ್ಲಿ 50 ಪ್ರಯಾಣಿಕರ ರ್‍ಯಾಟ್ ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಬಂದವರಿಗೆ ಪ್ರವೇಶ ನೀಡಲಾಗಿದೆ’ ಎಂದು ಚೆಕ್‌ಪೋಸ್ಟ್ ನಲ್ಲಿರುವ ವೈದ್ಯಕೀಯ ಸಿಬ್ಬಂದಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here