ಹಾವೇರಿ: ಹಂದಿಗಳ ವಿಲೇವಾರಿಗೆ ಮೀನಾಮೇಷ

0
18

ಹಾವೇರಿ: ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ನಿವಾಸಿಗಳ ನಿದ್ದೆಗೆಡಿಸುತ್ತಿವೆ. ಆದರೆ, ಹಾವೇರಿ ನಗರಸಭೆ ಅಧಿಕಾರಿಗಳು ಮಾತ್ರ ಹಂದಿಗಳ ವಿಲೇವಾರಿ ಕಾರ್ಯಾಚರಣೆಗೆ ಮೀನ- ಮೇಷ ಎಣಿಸುತ್ತಿದ್ದಾರೆ.

ಹಾವೇರಿ ನಗರ ವ್ಯಾಪ್ತಿಯಲ್ಲಿರುವ ಹಂದಿ ಮತ್ತು ಬಿಡಾಡಿ ದನಕರುಗಳನ್ನು ಮಾಲೀಕರು ತಮ್ಮ ಸುಪರ್ದಿಗೆ ಪಡೆದುಕೊಂಡು ತಮ್ಮದೇ ವ್ಯವಸ್ಥೆಯಲ್ಲಿ ಸಾಕಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷರು 2021ರ ಆ.21ರಂದು ಪ್ರಕಟಣೆ ನೀಡಿದ್ದರು.

Contact Your\'s Advertisement; 9902492681

ಹಂದಿಗಳನ್ನು ವಿಲೇವಾರಿ ಮಾಡಲು 2021ರ ಸೆ.12ರವರೆಗೆ ಕಾಲಾವಕಾಶ ಕೊಡಬೇಕು ಎಂದು ಮಾಲೀಕರು ಮನವಿ ಮಾಡಿದ್ದರು. ಇದಕ್ಕೆ ನಗರಸಭೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು.

ಆದರೆ, ಕೊಟ್ಟ ಗಡುವು ಮುಗಿದರೂ ಹಂದಿ ಮಾಲೀಕರು ವಿಲೇವಾರಿಗೆ ಮುಂದಾಗಲಿಲ್ಲ. ಇತ್ತ ನಗರಸಭೆ ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದರು.

ಇದರ ಪರಿಣಾಮ ಪ್ರತಿ ಓಣಿ-ಗಲ್ಲಿಯಲ್ಲೂ ಹಂದಿಗಳ ಉಪಟಳ ಹೆಚ್ಚಾಗಿ, ನಾಗರಿಕರು ನಗರಸಭೆಗೆ ಹಿಡಿಶಾಪ ಹಾಕುವಂತಾಗಿದೆ.

ಗುರುತಿಗೆ ಕಿವಿ, ಬಾಲಕ್ಕೆ ಕತ್ತರಿ: ನಾಗೇಂದ್ರಮಟ್ಟಿಯಲ್ಲಿ ಸುಮಾರು 25 ಕುಟುಂಬಗಳು ಹಂದಿಗಳನ್ನು ಸಾಕುತ್ತಾರೆ. ಇವರಲ್ಲಿ ಕೆಲವರು ಬಡಾವಣೆಗಳನ್ನು ಹಂಚಿಕೊಂಡು, ಜನವಸತಿ ಪ್ರದೇಶದಲ್ಲಿ ತಮ್ಮ ಹಂದಿ ಮರಿಗಳನ್ನು ಅಕ್ರಮವಾಗಿ ತಂದು ಬಿಡುತ್ತಾರೆ. ಗುರುತಿಗಾಗಿ ಹಂದಿಗಳ ಬಾಲ, ಕಿವಿಗಳನ್ನು ಕತ್ತರಿಸುತ್ತಾರೆ. ನಾಲ್ಕೈದು ತಿಂಗಳ ನಂತರ ದಷ್ಟಪುಷ್ಟಗೊಂಡ ಹಂದಿಗಳನ್ನು ಹಿಡಿದು ಮಾರಾಟ ಮಾಡಿ ಲಾಭ ಗಳಿಸುತ್ತಾರೆ.

ವಾತಾವರಣ ಕಲುಷಿತ: ಚರಂಡಿಗಳ ಕೊಳಚೆಯನ್ನು ರಸ್ತೆಗೆ ಹರಡುವುದು, ಕಸ ಕೆದರುವುದು, ಕಿರುಚುವುದು ಮುಂತಾದ ಹಂದಿಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಹಂದಿಗಳು ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಮಾಡಿ, ಜೀವಹಾನಿಗೂ ಕಾರಣವಾಗಿವೆ. ಹೀಗಾಗಿ ಹಂದಿ ಕಾರ್ಯಾಚರಣೆಯನ್ನು ಶೀಘ್ರ ನಡೆಸಬೇಕು ಎಂಬುದು ಜನರ ಒಕ್ಕೊರಲ ಆಗ್ರಹವಾಗಿದೆ.

‘ಬಯಲು ಶೌಚಕ್ಕೆ ಹೋದ ಮಕ್ಕಳಿಗೆ ಹಂದಿಗಳು ಗುದ್ದಿರುವ ಮತ್ತು ಕಚ್ಚಿರುವ ಪ್ರಕರಣಗಳು ನಡೆದಿವೆ. ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗುವುದರಿಂದ ಬೈಕ್‌ ಸವಾರರು ಬಿದ್ದು, ಸಾವು-ನೋವುಗಳು ಉಂಟಾಗಿವೆ. ಖಾಲಿ ನಿವೇಶನ ಮತ್ತು ಗಿಡದ ಪೊದರೆಗಳಲ್ಲಿ ರಾತ್ರಿ ವಾಸವಿರುವ ಹಂದಿಗಳು, ಬೆಳಿಗ್ಗೆಯಿಂದ ಸಂಜೆಯವರೆಗೆ ಜನವಸತಿ ಪ್ರದೇಶಕ್ಕೆ ದಾಳಿ ಇಡುತ್ತವೆ. ಇವುಗಳ ಕಿರುಚಾಟದಿಂದ ಮಕ್ಕಳು ಬೆಚ್ಚಿಬೀಳುತ್ತಾರೆ’ ಎಂದು ಗೃಹಿಣಿಯರಾದ ಜ್ಯೋತಿ, ವಿಜಯಲಕ್ಷ್ಮಿ ಸಮಸ್ಯೆ ತೋಡಿಕೊಂಡರು.

3 ಸಾವಿರ ಹಂದಿ ಸೆರೆ: 2019ರ ಸೆಪ್ಟೆಂಬರ್‌ನಲ್ಲಿ ಹಾವೇರಿ ನಗರದಲ್ಲಿ ಯಶಸ್ವಿಯಾಗಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆದಿತ್ತು. ಸುಮಾರು 3 ಸಾವಿರ ಹಂದಿಗಳನ್ನು ಹಿಡಿದು ಜಿಲ್ಲೆಯಿಂದ ಹೊರಗಡೆ ಸಾಗಿಸಲಾಗಿತ್ತು. ಇಂತಹ ಖಡಕ್‌ ನಿರ್ಧಾರವನ್ನು ನಗರಸಭೆ ಅಧಿಕಾರಿಗಳು ಮತ್ತೊಮ್ಮೆ ಕೈಗೊಳ್ಳಬೇಕು. ಯಾವುದೇ ಮುಲಾಜಿಗೆ ಒಳಗಾಗದೆ ನಾಗರಿಕರ ಹಿತ ಮತ್ತು ನಗರದ ಸ್ವಚ್ಛತೆ ಕಾಪಾಡಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

ಕೈಕೊಟ್ಟ ನುರಿತ ತಂಡ!:’ 2021ರ ಡಿಸೆಂಬರ್‌ 24ರಂದು ನುರಿತ ತಂಡದವರಿಂದ ಹಂದಿ ಹಿಡಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಚರಣೆ ವೇಳೆ ಸುರಕ್ಷತೆಗಾಗಿ ಪೊಲೀಸ್‌ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ, ಬಂದೋಬಸ್ತ್‌ ಒದಗಿಸಬೇಕು ಹಾಗೂ ಹಂದಿ ಸಾಗಿಸುವ ವಾಹನವನ್ನು ಸುರಕ್ಷಿತವಾಗಿ ದಾವಣಗೆರೆ ದಾಟುವವರೆಗೆ ರಕ್ಷಣೆ ನೀಡಬೇಕು’ ಎಂದು ಹಾವೇರಿ ನಗರಸಭೆ ಪೌರಾಯುಕ್ತರು ಹಾವೇರಿ ಉಪವಿಭಾಗದ ಡಿವೈಎಸ್ಪಿ ಅವರಿಗೆ ಪತ್ರ ಬರೆದಿದ್ದರು.

ಆದರೆ, ನುರಿತ ತಂಡದ ಮೂರ್ನಾಲ್ಕು ಮಂದಿ ಹಂದಿ ಮಾಲೀಕರ ಜೊತೆ ‘ಡೀಲ್‌’ ಮಾಡಿಕೊಂಡು, ಕಾರ್ಯಾಚರಣೆ ನಡೆಸದೆ ಪಲಾಯನ ಮಾಡಿದ್ದಾರೆ ಎಂದು ನಗರಸಭೆ ಅಧಿಕಾರಿಯೊಬ್ಬರು ಸಮಸ್ಯೆ ತೋಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here