ಜತ್ತ ಕನ್ನಡಿಗರಿಂದ ಚಂಪಾ, ಬಸಲಿಂಗಯ್ಯಾ ಹಿರೇಮಠರಿಗೆ ನುಡಿ ನಮನ

0
43

ಸೊಲ್ಲಾಪುರ :  ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ನಾಟಕಕಾರರಾದ ದಿ. ಚಂದ್ರಕಾಂತ ಪಾಟೀಲ ಮತ್ತು ಜಾನಪದ ಕಲಾವಿದ ಬಸಲಿಂಗಯ್ಯಾ ಹಿರೇಮಠರಿಗೆ ಜತ್ತ ತಾಲ್ಲೂಕಿನ ಕನ್ನಡಿಗರಿಂದ ನುಡಿ ನಮನಗಳನ್ನು ಸಲ್ಲಿಸಲಾಯಿತು.

ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತು ಜತ್ತ ಹಾಗೂ ಕನ್ನಡ ಮಾಧ್ಯಮ ವಿದ್ಯಾಲಯ ಜತ್ತ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮ ಅಧ್ಯಕ್ಷತೆ ಹಿರಿಯ ಸಾಹಿತಿ ಜಿ. ಎಸ್. ಕುಂಬಾರರು ವಹಿಸಿದ್ದರು. ವಿದ್ಯಾಲಯದ ಪ್ರಾಂಶುಪಾಲರಾದ ಎಮ್ ಎಸ್ ಸೋಲಾಪುರೆಯವರು ಚಂಪಾರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

Contact Your\'s Advertisement; 9902492681

ಕನ್ನಡ ಹೋರಾಟಗಾರ ಸುಭಾಷ ಬೆಳ್ಳುಬ್ಬಿ ಮಾತನಾಡಿ, ಗಡಿನಾಡು ಕನ್ನಡಿಗರು ಚಂಪಾರವರ ಋಣ ತೀರಿಸಲು ಸಾಧ್ಯವಿಲ್ಲ. ಚಂಪಾ ಅವರು “ಕನ್ನಡ ಕನ್ನಡ ಬರ‍್ರಿ ನಮ್ಮ ಸಂಗಡ” ಎಂದು ಕನ್ನಡಿಗರಿಗೆ ಕರೆ ಕೊಟ್ಟಿದ್ದರು. ಅದರಂತೆ ನಾವೆಲ್ಲಾ ಒಟ್ಟಾಗಿ ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ ಮಾತನಾಡಿ, ಚಂಪಾರ ನಿಧನ ಕನ್ನಡ ನಾಡಿಗೆ ಬಹುದೊಡ್ಡ ಹಾನಿ ಮಾಡಿದೆ. ಹೋರಾಟದ ಕೊಂಡಿ ಕಳಚಿದಂತಾಗಿದೆ. ಮಹಾಜನ ವರದಿ ಯಥಾವತ್ತಾಗಿ ಜಾರಿ ಆಗಬೇಕೆಂಬುದು ಚಂಪಾರ ಹೋರಾಟವಾಗಿತ್ತು. ಜತ್ತ ಮತ್ತು ಅಕ್ಕಲಕೋಟ ತಾಲ್ಲೂಕಿನ ಕನ್ನಡರಿಗೂ ನಮ್ಮವರು. ನಮಗಾಗಿದ್ದ ಅವರ ಅಪಾರ ಕಾಳಜಿಯು ನಮ್ಮಲ್ಲಿ ಸದಾ ಉತ್ಸಾಹ ತುಂಬುತ್ತಿತ್ತು. ಅವರನ್ನು ಕಳೆದುಕೊಂಡದ್ದು ಇಂದು ನಮಗೆ  ನಮ್ಮ ಮನೆಯವರನ್ನೆ ಕಳೆದುಕೊಂಡಷ್ಟು ದುಃಖವಾಗುತ್ತಿದೆ. ಅವರು ಯಾವಾಗಲು ಗಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ ಎಂದರು.

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಾಹಿತಿ ಜಿ ಎಸ್ ಕುಂಬಾರ, ಚಂಪಾ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೆಯಾದ ಕಾಣಿಕೆ ನೀಡಿದ್ದಾರೆ. ಅವರೊಬ್ಬರು ಬಹುಮುಖ ಪ್ರತಿಭೆ. ನಾಡು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಶಿಕ್ಷಕ ಆರ್ ಬಿ ಯರಗಲ್ಲ ಮತ್ತು ಇನ್ನಿತರ ಸಾಹಿತಿ ಹೋರಾಟಗಾರರು ಚಂಪಾರಿಗೆ ನುಡಿ ನಮನಗಳನ್ನು ಸಲ್ಲಿಸಿದರು. ಈ ನುಡಿನಮನ ಕಾರ್ಯಕ್ರಮಕ್ಕೆ ಜತ್ತ ತಾಲ್ಲೂಕಿನ ಸಾಹಿತ್ಯಾಸಕ್ತರು, ಹೋರಾಟಗಾರರು, ಪ್ರಾಥಮಿಕ ಶಿಕ್ಷಕರು, ವಿದ್ಯಾಲಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಜೋತೆಗೆ ಬಹುಸಂಖ್ಯೆಯಲ್ಲಿ ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು.

ಕನ್ನಡದ ಹಿರಿಯ ಸಾಹಿತಿ ದಿ. ಚಂದ್ರಕಾಂತ ಪಾಟೀಲ ಮತ್ತು ಜಾನಪದ ಕಲಾವಿದ ಬಸಲಿಂಗಯ್ಯಾ ಹಿರೇಮಠರ  ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನ ಆಚರಣೆಯೊಂದಿಗೆ ಶ್ರದ್ಧಾಂಜಲಿ ವಹಿಸಿಲಾಯಿತು. ಬಿ ಜಿ ಕುಂಬಾರ ನಿರೂಪಿಸಿದರು ಮತ್ತು ಆರ್ ಜಿ ವಾಳವೇಕರರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here