ಸಂಗೀತ ಅನ್ನೋದೇ ಹಾಗೇ.. ಎಂತಹವರನ್ನು ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಒತ್ತಡಗಳನ್ನು ನಿವಾರಿಸಿ ಮನಕ್ಕೆ ಮುದ ನೀಡುವ ಮದ್ದು ಸಂಗೀತ ಅಂದ್ರು ತಪ್ಪಾಗಲಿಕ್ಕಿಲ್ಲ. ಸಂಗೀತವೆಂಬ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಬೆವರು ಹರಿಸಲೇಬೇಕು ಎಂಬ ಮಾತನ್ನು ನಂಬಿರುವ ಗಾಯಕ ಆದರ್ಶ್ ಅಯ್ಯಂಗಾರ್. ಸಂಗೀತವೇ ತಮ್ಮ ಸಂಗಾತಿ ಅಂತಾ ಆರಾಧಿಸುತ್ತಿರುವ ಆದರ್ಶ್, ಜಯ ಹೇ ಎಂಬ ಗೀತೆ ಮೂಲಕ ಕರುನಾಡಿನ ಮನೆ-ಮನ ತಲುಪಲು ಬರುತ್ತಿದ್ದಾರೆ. ಆದರ್ಶ್ ಪ್ರೀತಿಯಿಂದ ಮಾಡಿರುವ ಜಯ ಹೇ ಹಾಡನ್ನು ವಿಂಗ್ ಕಮಾಂಡರ್ ಸುದರ್ಶನ್, ರಾಮ್ ದಾಸ್ ಜಿ ಎನ್ ( Retired LT Col ), ನಟ ವಿರಾಟ್ ಬಿಡುಗಡೆ ಮಾಡಿ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸದ್ಯ ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ, ಸ್ಟಾರ್ ಸುವರ್ಣ “ಸ್ಟಾರ್ ಸಿಂಗರ್” ಕಾರ್ಯಕ್ರಮದಲ್ಲಿ ಸ್ಪರ್ಧಿ ಭಾಗಿಯಾಗಿ ಅಪಾರ ಜನಪ್ರಿಯತೆ ಪಡೆದುಕೊಂಡರು. ನಂತರ ಉದ್ಯೋಗ ಅರಸಿ ದೂರದ ಅಮೇರಿಕಾಗೆ ಹೋದ್ರೂ ಕೂಡ ಸಂಗೀತದ ಮೇಲಿನ ಅವರ ಆಸಕ್ತಿ ಏನನ್ನಾದರು ಮಾಡುವಂತೆ ಪ್ರೇರೇಪಿಸುತಿತ್ತು. ಅದರಂತೆ ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಾ ಬಂದರು. ನಂತರ “My Friend” ಎಂಬ ವಿಡಿಯೋ ಹಾಡನ್ನು ತಮ್ಮದೆ ಆದ “ಶ್ರೀ ಕೃಷ್ಣ ಪ್ರೊಡಕ್ಷನ್” ಮೂಲಕ ಭಾರತ ಮತ್ತು ಅಮೇರಿಕಾ ಎರಡು ಕಡೆ ಶೂಟ್ ಮಾಡಿ My friend ಹಾಡಿನಿಂದ ಹೊಸ ಹೆಜ್ಜೆ ಇಟ್ಟರು. ಇದೀಗ ಜಯ ಹೇ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಿದ್ದಾರೆ.
ಹಳ್ಳಿಗಾಡಿನಿಂದಲೇ ಸೈನ್ಯಕ್ಕೆ ಸೇರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಮಲೆನಾಡಿನ ಹಳ್ಳಿಯೊಂದರಲ್ಲಿ ಮತ್ತು ಅಲ್ಲಿನ ಕುಟುಂಬವನ್ನು ಆಯ್ಕೆ ಮಾಡಿಕೊಂಡು ತೀರ್ಥಹಳ್ಳಿಯ ಸುತ್ತ ಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ ಆದರ್ಶ್.
ರಾಕ್-ಪಾಪ್ ಜಾನರ್ ನಲ್ಲಿ ಮೂಡಿ ಬಂದಿರುವ ಜಯ ಹೇ ಎಂಬ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್ ಜೋಯೀಸ್ ಸಂಗೀತ ನೀಡಿದ್ದು, ಆದರ್ಶ್ ಅಯ್ಯಂಗಾರ್
ಹಾಡಿಗೆ ಧ್ವನಿಯಾಗುವುದರ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್ ಜೋಯಿಸ್, ಗುರುಪ್ರಸಾದ್ ಬಡಿಗೇರ್, ದರ್ಶನ್ ಕುಮಾರ್, ಶ್ರೀ ಹರ್ಷ ರಾಮ್ ಕುಮಾರ್ ನಟಿಸಿದ್ದು, ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಕ್ಯಾಮೆರಾ,
ಸುಧೀರ್ ಎಸ್ ಜೆ ಸಂಕಲನವಿರುವ ಜಯ ಹೇ ಹಾಡು, ಆದರ್ಶ್ ಅಯ್ಯಂಗಾರ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ..