ಬಸವಕಲ್ಯಾಣ: ಜಗತ್ತಿನ ಹಿಂದೂಗಳಿಗೆ ಕಾಶಿ ಪವಿತ್ರ ಸ್ಥಾನದ ಕೇಂದ್ರವಾಗಿದ್ದಂತೆ ಶರಣರಿಗೆ ಕಾಶಿ ಸ್ಥಾನಕ್ಕೆ ಸಮಾನವಾದ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಬಸವ ಕಲ್ಯಾಣ ನೂತನ ಅನುಭವ ಮಂಟಪದ ಪಕ್ಕದಲ್ಲಿ ಶರಣರ ಸಂಭ್ರಮ ಆಶ್ರಯ ಕೇಂದ್ರ ಸ್ಥಾಪನೆಗೆ ಸುಖ-ಶಾಂತಿ-ಸಾಮರಸ್ಯ-ಸಂಗಮ ಸಮಿತಿಯ ವತಿಯಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ಅವರಿಗೆ ನಿನ್ನೆಯ ದಿನ ಬಸವ ಕಲ್ಯಾಣದಲ್ಲಿ ಬಸವ ಮಹಾಮನೆ ಕೇಂದ್ರದಲ್ಲಿ ಮನವಿ ಪತ್ರ ಸಲ್ಲಿಸಿ ಮನವರಿಕೆ ಮಾಡಲಾಯಿತು.
ಸುಮಾರು ಮೂರು ತಿಂಗಳುಗಳಿಂದ ಅನ್ನ-ಆಹಾರವಿಲ್ಲದೆ ಲೋಕ ಕಲ್ಯಾಣಕ್ಕಾಗಿ ಜಗತ್ತಿನಲ್ಲಿ ಶಾಂತಿ-ನೆಮ್ಮದಿ ಸ್ಥಾಪನೆಗಾಗಿ ಶಿವಯೋಗದಲ್ಲಿ ತಲ್ಲೀನರಾಗಿರುವ ಪರಮ ಪೂಜ್ಯ ಬಸವಶ್ರೀ ಸಿದ್ಧರಾಮ ಬೆಲ್ದಾಳ ಶರಣರ ಶಿವಯೋಗದ ಅಂತಿಮ ಸಪ್ತಾಹ ದಿನಾಂಕ : ೨೧.೦೧.೨೦೨೨ ಶುಕ್ರವಾರ ದಿವಸ ಬೆಳಿಗ್ಗೆ ೧೧.೩೦ ಗಂಟೆಗೆ ನಡೆಯಲಿರುವ ಸುಖ-ಶಾಂತಿ-ಸಾಮರಸ್ಯ-ಸಂಗಮ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಅಂಗವಾಗಿ ನಿನ್ನೆ ದಿವಸ ಬಸವ ಕಲ್ಯಾಣದ ಬಸವ ಮಹಾಮನೆಗೆ ಭೇಟಿ ನೀಡಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂಜೀ ಅವರು ಬಸವ ಶ್ರೀ ಸಿದ್ಧರಾಮ ಬೆಲ್ದಾಳ ಶರಣರನ್ನು ಭೇಟಿ ಮಾಡಿ ಅವರ ಮೂರು ತಿಂಗಳ ಶಿವಯೋಗದ ಬಗ್ಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸೇಡಂಜೀರವರು ಬಸವ ಕಲ್ಯಾಣದಲ್ಲಿ ಆರಂಭವಾಗುತ್ತಿರುವ ನೂತನ ಅನುಭವ ಮಂಟಪ ಆದಷ್ಟು ಶೀಘ್ರ ಕಾಲಮಿತಿಯಲ್ಲಿ ಕಾಮಗಾರಿ ನಡೆಯುವವು, ಅಷ್ಟೆ ಅಲ್ಲದೇ ಬಸವಕಲ್ಯಾಣದಲ್ಲಿ ಪ್ರತಿ ವರ್ಷ ಆಯಾ ಶರಣರ ಹೆಸರಿನಲ್ಲಿ ವಿಜೃಂಭಣೆಯ ಕಾರ್ಯಕ್ರಮಗಳು ಅನುಭವ, ಚಿಂತನಗಳು ಚರ್ಚಾಕೂಟಗಳು, ವಿಚಾರಗೋಷ್ಠಿಗಳು, ಕಮ್ಮಟಗಳು ನಡೆಯಲಿವೆ ಎಂದರು. ಸರಕಾರದಿಂದ ಜರುಗುವ ಈ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಕಾರ್ಯಕ್ರಮ ಸಮಿತಿಗೆ ಸಲಹೆ ಸೂಚನೆಗೆ ಬಸವ ಮಹಾಮನೆಯ ಪೂಜ್ಯರಾದ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಇವರಿಗೆ ಶಾಶ್ವತ ಸದಸ್ಯತ್ವ ಸ್ಥಾನ ಸ್ವೀಕರಿಸಬೇಕೆಂದು ಮನವರಿಕೆ ಮಾಡಿದರು.
ಕಳೆದ ಮೂರು ತಿಂಗಳುಗಳಿಂದ ಶಿವಯೋಗದಲ್ಲಿ ತಲ್ಲೀನರಾಗಿರುವ ಪರಮ ಪೂಜ್ಯ ಬಸವಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಸೇಡಂಜೀರವರನ್ನು ಉದ್ದೇಶಿಸಿ ಮಾತನಾಡಿ ಬಸವಾದಿ ಶರಣರ ವಿಚಾರಧಾರೆಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಸ್ವರೂಪ ನೀಡುವುದು ಅತಿ ಅವಶ್ಯವಾಗಿದೆ, ಈ ನಿಟ್ಟಿನಲ್ಲಿ ಕಲ್ಯಾಣದಲ್ಲಿ ನಡೆಯುತ್ತಿರುವ ಅನುಭವ ಮಂಟಪದಂತಹ ರಚನಾತ್ಮಕ ಕಾರ್ಯಗಳ ಜೊತೆಗೆ ಬಸವ ತತ್ವ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡುವ ನಿಟ್ಟಿನಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಪಾಟೀಲಜೀ ರವರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬಸವ ಮಹಾಮನೆ ಸಂಸ್ಥೆಯ ವತಿಯಿಂದ ಸಂಸ್ಥೆಯಡಿಯಿರುವ ಭೂಮಿಯಲ್ಲಿ ಹಿರಿಯ ನಾಗರಿಕರಿಗೆ ಮತ್ತು ಆಯಾ ಕಡೆಯಿಂದ ಬರುವ ಹಿರಿಯ ಶರಣರಿಗೆ ಸಂಭ್ರಮದಿಂದ ವಾಸಿಸಲು ಎಲ್ಲಾ ರೀತಿಯ ಸುಸಜ್ಜಿತ ಸವಲತ್ತುಗಳನ್ನು ಒಳಗೊಂಡ ಶರಣರ ಸಂಭ್ರಮಾಶ್ರಯ ಕೇಂದ್ರ ಅನುಭವ ಮಂಟಪದ ಪಕ್ಕದಲ್ಲಿ ಆರಂಭಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ಅವಶವಾಗಿದೆ.
ಈ ಬಗ್ಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಗಂಭೀರವಾಗಿ ಪರಿಗಣಿಸಿ ಇದಕ್ಕೆ ಮಂಜೂರಾತಿ ನೀಡಲು ಸುಖ-ಶಾಂತಿ-ಸಾಮರಸ್ಯ-ಸಂಗಮ ಸಮಿತಿಯ ಪದಾಧಿಕಾರಿಗಳಾದ ಪೂಜ್ಯ ಗಂಗಾಧರಯ್ಯನವರು, ಪೂಜ್ಯ ಸತ್ಯಕ್ಕನವರು, ಪೂಜ್ಯ ಗಾಯತ್ರಿ ದೇವಿಯವರು, ಶಾಮರಾವ ಪ್ಯಾಟಿ, ಲಕ್ಷ್ಮಣ ದಸ್ತಿ, ಬಸವರಾಜ ಬುಳ್ಳಾ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಸಂಜೀವ ಗಾಯಕವಾಡ, ಪಿಂಟು ಕಾಂಬಳೆ, ಶ್ರೀಕಾಂತ ಸ್ವಾಮಿ ಮುಂತಾದವರು ಸೇಡಂಜೀರವರಿಗೆ ಮನವರಿಕೆ ಮಾಡಿ ಆಗ್ರಹಿಸಿದರು.
ಸದರಿ ವಿಷಯಕ್ಕೆ ಸಂಘದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಸೇಡಂಜೀ ರವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.