ಕಲಬುರಗಿ: ಬಂಡವಾಳಶಾಹಿ ಪರವಾಗಿರುವ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ದೇಶದ ರೈತರನ್ನು ಮತ್ತು ಕಾರ್ಮಿಕರ ಹೆಸರಿನ ಮೇಲೆ ರಾಜಕೀಯ ಮಾಡುತ್ತಲೇ ಅವರ ಬೆನ್ನೆಲುಬನ್ನೇ ಮುರಿಯುತ್ತಿವೆ ಎಂದು ಎಸ್.ಯು.ಸಿ.ಐ.(ಸಿ) ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಹೆಚ್.ವ್ಹಿ.ದಿವಾಕರ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಖಣದಾಳ ಗ್ರಾಮದಲ್ಲಿ ಪಕ್ಷದ ಲೋಕಸಭಾ ಅಭ್ಯರ್ಥಿ ಕಾಮ್ರೇಡ್ ಎಸ್. ಎಂ. ಶರ್ಮಾ ಪರ ಪ್ರಚಾರ ಬಳಿಕ ಮಾತನಾಡಿದರು. ಜಾಗತೀಕರಣ ನೀತಿಗಳ ಹಾವಳಿಯಿಂದಲೇ ನಿರುದ್ಯೋಗ ದೈತ್ಯವಾಗಿದೆ. ಕೃಷಿ ಕ್ಷೇತ್ರವೂ ಬಿಕ್ಕಟ್ಟಿನಲ್ಲಿ ಸಿಲುಕಿ ರೈತರ ಜೀವನ ನಿರ್ವಣೆಯೇ ಕಷ್ಟವಾಗಿದೆ. ಒಂದೆಡೆ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಗುತ್ತಿಗೆ ಪದ್ಧತಿ, ದಿನಗೂಲಿಯಂತೆ ಕಾರ್ಮಿಕರನ್ನು ದುಡಿಸಿಕೊಂಡು ಸುಲಿಗೆ ಮಾಡಲಾಗುತ್ತಿದೆ. ಇಂದಿನ ದಿನಗಳಲ್ಲಿ ಮಾಲೀಕರ ಗರಿಷ್ಠ ಲಾಭಕ್ಕಾಗಿ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ನೇಹಾ ಕಟ್ಟಿಮನಿ, ಮಹೇಶ ಎಸ್. ಬಿ., ಸಂತೋಷ ಕುಮಾರ ಹಿರವೆ, ಮಲ್ಲಿನಾಥ ಸಿಂಗೆ, ಈರಣ್ಣ ಇಸಬಾ, ಅಂಬಿಕಾ ಎಸ್.ಜಿ., ಶಿಲ್ಪಾ ಬಿ.ಕೆ, ಮಹೇಶ ನಾಡಗೌಡ ಇದ್ದರು.