ಸ್ಕಾರ್ಫ್, ಕೇಸರಿ ಶಾಲು ವಿವಾದದಿಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಹಿಡನ್ ಅಜೆಂಡಾವಿದೆ: ಎಸ್ಎಫ್ಐ

0
50

ಕಲಬುರಗಿ: ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗಳಲ್ಲಿ ಪಾಠ ಕೇಳುವುದಕ್ಕೆ ಕಾಲೇಜಿನ ಪ್ರಾಂಶುಪಾಲರು ನಿರಾಕರಿಸಿರುವ ಅಸಂವಿಧಾನಿಕವಾದ ನಡೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿ ಅಸಮಧಾನ ವ್ಯಕ್ತಪಡಿಸಿದೆ.

ಈ ಕುರಿತು ಸಮಿತಿ ಪತ್ರಿಕಾ ಪ್ರಕಟಣೆ ನೀಡಿ, ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಸಂವಿಧಾನ ವಿರೋಧಿ ನಡೆಯಾಗಿದೆ.ಆದ್ದರಿಂದ ಈ ಕೂಡಲೇ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಹಾಜರಾಗಲು ಅನುಮತಿಸಬೇಕೆಂದು ಒತ್ತಾಯಿಸಿದೆ.

Contact Your\'s Advertisement; 9902492681

ಶಿಕ್ಷಣದ ಕೇಸರೀಕರಣ, ಕೇಂದ್ರೀಕರಣ, ಕೋಮುವಾದಿಕರಣವನ್ನು ತೀವ್ರಗೊಳಿಸುವ ಜನವಿರೋಧಿಯಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿಯನ್ನು ರಾಜ್ಯ ಬಿಜೆಪಿ ಸರ್ಕಾರ ಅಪ್ರಜಾಸತ್ತಾತ್ಮಕವಾಗಿ ಜಾರಿಗೊಳಿಸುತ್ತಿರುವುದರಿಂದ ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ತಮ್ಮ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿಗಿಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಶಿಕ್ಷಣ ಕ್ಷೇತ್ರದ ನಿಜವಾದ ಸಮಸ್ಯೆಗಳನ್ನು ಮರೆಮಾಚಲು ಕರಾವಳಿಯ ಕೆಲವು ಕಾಲೇಜುಗಳನ್ನು ಶಿಕ್ಷಣದ ಕೋಮುವಾದಿಕರಣದ ಪ್ರಯೋಗ ಶಾಲೆಗಳನ್ನಾಗಿಸಿತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದೆ.

ಈ ಸ್ಕಾರ್ಫ್, ಕೇಸರಿ ಶಾಲು ವಿವಾದಗಳಿಗೆ ರಾಜ್ಯ ಬಿಜೆಪಿ ಸರಕಾರದ ಕುಮ್ಮಕ್ಕು ಮತ್ತು ಸಮ್ಮತಿ ಒಪ್ಪಿಗೆ ಇರುವ ರೀತಿಯಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರು ಹೇಳಿಕೆಗಳನ್ನು ನೀಡುತ್ತಿರುವುದರಿಂದ ಸ್ಪಷ್ಟವಾಗಿದೆ. “ದೇಶದ ಭವಿಷ್ಯ ತರಗತಿಯ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ”. ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರವರು ಹೇಳಿರುವ ಮಾತನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಕರಾವಳಿಯ ಜಿಲ್ಲೆಗಳಲ್ಲಿ ಹಿಂದುತ್ವದ ರಾಜಕೀಯ ಹಿಡನ್ ಅಜೆಂಡಾ ಜಾರಿಗಾಗಿ ಅದೇ ತರಗತಿಯ ಕೊಠಡಿಗಳ ಒಳಗೆ ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೋಲೀಸ್ ಗಿರಿ, ಅನ್ಯ ಧರ್ಮೀಯ ವಿದ್ಯಾರ್ಥಿಗಳಿಗೆ ತ್ರಿಶೂಲದಿಂದ ತಿವಿದು ಹಲ್ಲೆ, ಲವ್ ಜಿಹಾದ್, ಹೋಮ್ ಸ್ಟೇ ದಾಳಿಗಳಂತಹ ಪ್ರಕರಣಗಳಲ್ಲಿ ದೇಶದ ಭವಿಷ್ಯವಾಗಬೇಕಾದ ವಿದ್ಯಾರ್ಥಿಗಳನ್ನು ಕ್ರಿಮಿನಲ್ ಗಳನ್ನಾಗಿ ಉತ್ಪಾದಿಸಲಾಗುತ್ತಿದೆ. ಈ ಕೋಮುವಾದಿ ಹುನ್ನಾರಗಳಿಗೆ ಎಳೆ ಪ್ರಾಯದ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇದೆಲ್ಲವೂ ದೇಶದ ಭವಿಷ್ಯದ ಕುರಿತು ಆತಂಕಗಳನ್ನು ಸೃಷ್ಟಿಸುತ್ತದೆ.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದರೆ ಹುಡುಗರು ನಾಳೆಯಿಂದ ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ. ಹಾಗಾಗಿ ಸ್ಕಾರ್ಫ್ ಹಾಕುವಂತಿಲ್ಲ” ಎಂದು ಕಾಲೇಜು ಪ್ರಾಂಶುಪಾಲರು ಹೇಳಿರುವುದು ಖಂಡನೀಯ. ಸ್ಕಾರ್ಫ್ ಧರಿಸಿ ಬಂದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುವುದರ ಹಿಂದೆ ಎಬಿವಿಪಿಯಂತಹ ಮತೀಯವಾದಿ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ತುಂಬಿರುವ ಕೋಮು ದ್ವೇಷ ಭಾವನೆಯಿದೆ. ಸ್ಕಾರ್ಫ್ ಹಾಕಿದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸುವುದುರಿಂದ ಆಗುವ ಅಪಾಯವೇನೆಂದರೆ ಮುಸ್ಲಿ ಮತ್ತು ಹಿಂದೂ ಹಾಗೂ ಎಲ್ಲಾ ಕೋಮಿನ ವಿದ್ಯಾರ್ಥಿಗಳ ಸೌಹಾರ್ದತೆಯಿಂದ ಸಹಶಿಕ್ಷಣ (ಕೋ ಎಜುಕೇಷನ್) ಪಡೆಯದಂತೆ ಆಗಬಹುದು ಎಂದು ತಿಳಿಸಿದೆ.

ಇಲ್ಲಿಯವರೆಗೂ ಹಿಂದೂ ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಟ್ಟಾಗಿ ಶಾಲೆ ಕಾಲೇಜು ಕಲಿಯುತ್ತಿದ್ದರು.ಇಂತಹ ಅನಾವಶ್ಯಕ ವಿವಾದಗಳಿಂದ ಧರ್ಮ ಆಧರಿತ ಶಾಲಾ ಕಾಲೇಜುಗಳಾಗಿ ಈಗಾಗಲೇ ಇರುವ ಹಿಂದೂ ಮುಸ್ಲಿಮರ ನಡುವಿನ ಅಪನಂಬಿಕೆಗಳು ಇನ್ನಷ್ಟೂ ಗಟ್ಟಿಯಾಗಿಸುವ ಆತಂಕವಿದೆ. ಹಿಜಾಬ್ ನಿಷೇದ ಮಾಡಿದ್ದು ಕಾಲೇಜು ಆಡಳಿತ ಮಂಡಳಿಯ ಏಕ ರೂಪದ ಸಮವಸ್ತ್ರ ನೀತಿ ಎಂಬ ಮೇಲ್ನೋಟಕ್ಕೆ ಕೆಲವರಿಗೆ ಅನಿಸಬಹುದು ಆದರೆ ಇದಕ್ಕಾಗಿ ಕಾಯುತ್ತಿರುವ ಮುಸ್ಲಿಂ ವಿರೋಧಿ ದ್ವೇಷ ಬಿತ್ತುವ ಶಕ್ತಿಗಳು ಇದನ್ನು ಕೋಮು ಧೃವೀಕರಣ ರಾಜಕಾರಣಕ್ಕೆ ಬಳಸಿಕೊಳ್ಳುವುದು ಸಾಬೀತಾಗಿದೆ ಎಂದು ಆರೋಪಿಸಿದೆ.

ಹಿಜಾಬ್ ,ಬುರ್ಕಾವನ್ನು ಪ್ರಗತಿಪರರು ಸ್ತ್ರಿವಾದದ ನೆಲೆಯಲ್ಲಿ ವಿರೋಧಿಸುತ್ತಾರೆ. ಆದರೆ ಈ ಎಬಿವಿಪಿ/ಹಿಂದೂ ಜಾಗರಣ ವೇದಿಕೆ/ಬಜರಂಗದಳ ಮುಂತಾದ ಬಲಪಂಥೀಯ ಸಂಘಟನೆಗಳು ಯಾಕೆ ವಿರೋಧಿಸುತ್ತಾರೆ ಎಂಬ ಸ್ಪಷ್ಟನೆ ನಮಗಿದೆ.  ಹಿಜಾಬ್  ವಿರೋಧಿಸುವುದು, ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಾರದೆಂದು ತಡೆಯುವುದು, ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಸಂಚಲ್ಲದೆ ಬೇರೇನೂ ಅಲ್ಲ. ಈಗಾಗಲೇ ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು  ಈ ಧಾರ್ಮಿಕ ಮೂಲಭೂತವಾದಿ, ಕೋಮುವಾದಿ ದಾಳಿಗಳಿಂದ ರಕ್ಷಿಸಬೇಕಾದದ್ದು ತುರ್ತು ಅಗತ್ಯವಾಗಿದೆ.

ಕಾಲೇಜುಗಳಲ್ಲಿ ಸ್ಕಾರ್ಫ್ ಏಕಾಏಕಿ ನಿಷೇಧಿಸಿದರೆ ಮುಸ್ಲಿಂ ಧಾರ್ಮಿಕವಾದಿಗಳಿಗೆ ಪೆಟ್ಟು ನೀಡಿದಂತಾಗುತ್ತದೆ ಎನ್ನುವ ವಾದದವರು ಅದರ ಪರಿಣಾಮಗಳನ್ನು ಯೋಚಿಸಬೇಕು. ಸ್ಕಾರ್ಫ್ ಇಲ್ಲದೆ ಹದಿಹರೆಯಕ್ಕೆ ಬಂದ ಮುಸ್ಲಿಂ ಹುಡುಗಿಯರು ಮನೆ ಹೊಸ್ತಿಲು ದಾಟುವುದೇ ಕ್ಲಿಷ್ಟವಾಗಿದೆ, ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಈ ಧಾರ್ಮಿಕವಾದಿ ಮನಸ್ಥಿತಿಗಳು ಒಪ್ಪಲು ಸಾಧ್ಯವೇ ಇಲ್ಲ. ಇದರ ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಮೊಟಕುಗೊಳ್ಳುತ್ತದೆ. ಧಾರ್ಮಿಕವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಒಟ್ಟಾರೆಯಾಗಿ ಹಿಂದುತ್ವದ ಕೋಮುವಾದ ಮತ್ತು ಮುಸ್ಲಿಂ ಧಾರ್ಮಿಕ ಮೂಲಭೂತವಾದದ ಮೊದಲ ಬಲಿಪಶುಗಳು ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರು ಆಗುತ್ತಿದ್ದಾರೆ ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಂಘಟನೆ ಕರೆ ನೀಡಿದೆ.

ಆದ್ದರಿಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುವುದು ಸ್ಕಾರ್ಫ್ ನಿಷೇದಕ್ಕಿಂತ ಸದ್ಯದ ಉತ್ತಮ ಔಷದಿ. ಮೊದಲು ಮುಸ್ಲಿಂ ಹುಡುಗಿಯರು ಶಿಕ್ಷಣ  ಪಡೆಯುವಂತಾಗಬೇಕು.  ಅದರಲ್ಲೂ ಸರ್ವ ಜನಾಂಗದ ಶಾಂತಿಯ ತೋಟವಾದ ಈ ನಾಡಿನ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಬೇಕು. ಹಿಂದೂ ಮುಸ್ಲೀಂ ಹುಡುಗ ಹುಡುಗಿಯರು ಸಹಶಿಕ್ಷಣ (ಕೋಎಜುಕೇಶನ್ ) ಪಡೆಯುವಂತಾಗಬೇಕು.

ಇದಕ್ಕಾಗಿ ಹಿಂದೂ ಮುಸ್ಲೀಮರು ಸಹಶಿಕ್ಷಣ ಪಡೆಯುವ ಕಾಲೇಜುಗಳಲ್ಲಿ ಸ್ಕಾರ್ಫ್  /ಬುರ್ಕಾ ನಿಷೇದ ಮಾಡುವುದು ಬುರ್ಕಾ ಸಂಸ್ಕೃತಿಯನ್ನು ಇನ್ನಷ್ಟೂ ಬಲಗೊಳಿಸುತ್ತದೆ. ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರ್ಯಾಯ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯ ಮನಸ್ಥಿತಿಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಭ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ, ಸೌಹಾರ್ದತೆಯನ್ನು ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ.

ಸಮಾನತೆ ಎಂದರೆ ಸಮವಸ್ತ್ರ (ಯೂನಿಫಾರಂ) ಹಾಕುವುದಲ್ಲ. ಅದೊಂದು ಮನಃಸ್ಥಿತಿ. ಶಿಕ್ಷಣ ಸಂಸ್ಥೆಗಳಲ್ಲಿ ಬಡವರ ಮಕ್ಕಳಿಗೆ ಉತ್ತಮ ಬಟ್ಟೆ ಧರಿಸಲು ಆಗುವುದಿಲ್ಲ ಎಂಬ ಕೀಳು ಹಿರಿಮೆಗೆ  , ಶ್ರೀಮಂತರ ಮಕ್ಕಳು ತಾವು ಉತ್ತಮ ಬಟ್ಟೆಷಧರಿಸಿದ್ದೇವೆಂಬ ಮೇಲು ಹಿರಿಮೆಯ ಭಾವನೆಗಳನ್ನು ತೊಲಗಿಸಿ ಕಲಿಕೆಯ ವಾತಾವರಣದಲ್ಲಿ ಸಕಾರಾತ್ಮಕ ಮನಸ್ಥಿತಿಗಳನ್ನು ಕಾಪಾಡುವ ದೃಷ್ಟಿಯಿಂದ ಸಮವಸ್ತ್ರ ನಿಯಮ ಜಾರಿಗೊಳಿಸಲಾಗಿದೆ. ಆದರೆ ಇದನ್ನೇ ಕೋಮುವಾದಿ ಶಕ್ತಿಗಳು ಡೋಂಗಿ ಸಮಾನತೆಯ ಪ್ರತಿಪಾದನೆಗೆ ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಎಚ್ಚರವಿರಬೇಕು.

ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ನಿಜವಾಗಿಯೂ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಕಾಲೇಜು ತರಗತಿ ಕೊಠಡಿಗಳಲ್ಲಿ ಶಿಕ್ಷಕರು ವೈಚಾರಿಕವಾದ, ಜ್ಯಾತ್ಯಾತೀತವಾದ ಸಂವಿಧಾನದ ಆಶಯಗಳನ್ನು ಸಾರುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ನಾಜೂಕಾಗಿ ತುಂಬುವಂತಹ ಬೋಧನೆಗಳನ್ನು ಮಾಡಲಿ. ಇಂತಹ ಪ್ರಗತಿಪರ ಮನಸ್ಸುಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ನಂತರ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬೇಡಿ ಎಂದು ಹೇಳುವುದರ ಹಿಂದೆ ಒಂದು ಅರ್ಥ ಇರುತ್ತದೆ.

ಅದುಬಿಟ್ಟು ಏಕಾಏಕಿ ಬುರ್ಕಾ ನಿಷೇದಿಸುವುದರ ಹಿಂದೆ ಮುಸ್ಲಿಂ ಮಹಿಳೆಯರನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬದಿಗೆ ದೂಡುವ ಹುನ್ನಾರ ಇದೆ. ಈ ಹುನ್ನಾರವನ್ನು ಹಿಂದುತ್ವದ ಕೋಮುವಾದಿಗಳು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

ಈ ಎಲ್ಲ ಕೋಮುವಾದಿ ರಾಜಕಾರಣದ ಹುನ್ನಾರಗಳನ್ನು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ನಡುವೆ ಒಡಕು ಉಂಟು ಮಾಡುವ ಮತೀಯವಾದಿ ಶಕ್ತಿಗಳನ್ನು ಶಿಕ್ಷಣ ಸಂಸ್ಥೆಗಳಿಂದ ಹೊರಗಿಟ್ಟು ಸಮಾಜದ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕೆಂದು ರಾಜ್ಯ ಸರ್ಕಾರವನ್ನು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್-ಎಸ್ಎಫ್ಐ ರಾಜ್ಯ ಸಮಿತಿ ಜಿಲ್ಲಾ ಸಂಚಾಲಕ ರವಿ ಸಿರಸಗಿ, ಪ್ರಿಯಾಂಕ ಮಾವಿನಕರ, ಸುಜಾತ.ವೈ, ಮಾಧಿಹಾ ಪಟೇಲ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here