ಸುರಪುರ: ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ ಹಾಗು ಆರೋಗ್ಯ ಇಲಾಖೆಯಿಂದ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರು ಭಾಗವಹಿಸಿ ಮಾತನಾಡಿ,ದೇಶದಲ್ಲಿರುವ ಜನಸಂಖ್ಯೆಯಲ್ಲಿ ಪ್ರತಿಶತ ೧೨ ರಷ್ಟು ಜನರು ವಿವಿಧ ತರಹದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಎಲ್ಲರು ಪ್ರತಿ ಮೂರು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಸಣೆ ಮಾಡಿಸುವುದು ಮುಖ್ಯವಾಗಿದೆ ಎಂದರು.ಆದ್ದರಿಂದ ೪೨ ಜನ ನಮ್ಮ ಸಮುದಾಯ ಆರೋಗ್ಯಾಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೧೭ರಲ್ಲಿ ಎನ್.ಸಿ.ಡಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ,ಜನರನ್ನು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದರು.ಇನ್ನು ತಂಬಾಕು ಸೇವನೆಯಿಂದ ಕ್ಯಾನ್ಸರ್, ವಾಯುಮಾಲಿನ್ಯದಿಂದ ಶ್ವಾಸಕೋಶ ಕ್ಯಾನ್ಸರ್, ಅಲರ್ಜಿ ಕ್ಯಾನ್ಸರ್, ಲಂಗ್ ಕ್ಯಾನ್ಸರ್ ರೋಗಗಳು ಕಾಣಿಸಿಕೊಳ್ಳುತ್ತಿವೆ.ಅಲ್ಲದೆ ಹೆಚ್ಚಿನ ಕ್ಯಾನ್ಸರ್ ರೋಗ ಮಹಿಳೆಯರಲ್ಲಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು ಮಹಿಳೆಯರು ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಅಲ್ಲದೆ ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ಎದೆಹಾಲು ಕುಡಿಸುವುದು ಮುಖ್ಯವಾಗಿದೆ.ಇದರಿಂದ ಸ್ತನ ಕ್ಯಾನ್ಸರ್ ತಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು.ಕ್ಯಾನ್ಸರ್ ರೋಗದಲ್ಲಿ ಭಾರತ ೩ನೇ ಸ್ಥಾನದಲ್ಲಿದೆ ಈವರೆಗೆ ದೇಶದಲ್ಲಿ ೧೩ ಲಕ್ಷ ಜನರಿಗೆ ನೂರು ತರಹದ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ ಎಂದರು.
ನಂತರ ಪ್ರೌಢಶಾಲೆಯ ಉಪಪ್ರಾಚಾರ್ಯ ಯಲ್ಲಪ್ಪ ಕಾಡ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಅಧಿಕಾರಿ ರಾಜಶೇಖರ, ಔಷಧತಜ್ಞ ಶಾಂತಕುಮಾರ, ಬಿಎಚ್‌ಒ ಮಲ್ಲಪ್ಪ ಇದ್ದರು. ದೈಹಿಕ ಶಿಕ್ಷಕ ಲಕ್ಷ್ಮಣ ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.