ಕಲಬುರಗಿ: ಮಾನವೀಯ ಮೌಲ್ಯಗಳ ಗಣಿಯಂತಿರುವ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ತತ್ವಪದ ರಾಜ್ಯಮಟ್ಟದ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಲಬುರಗಿಯಲ್ಲಿ ಏರ್ಪಡಿಸಲು ಅವಕಾಶ ನೀಡಿ, ಅದಕ್ಕಾಗಿ ವಿಶೇಷ ಅನುದಾನ ನೀಡಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಕೇಂದ್ರ ಸಮಿತಿಯ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಿಗೆ ಈ ಕುರಿತು ಮನವಿ ಪತ್ರವನ್ನು ಸಲ್ಲಿಸಿ ವಿವರಣೆ ನೀಡಿದ ತೇಗಲತಿಪ್ಪಿ ಅವರು, ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ತತ್ವ ಪದ ಇವುಗಳು ಸಮಾಜದ ಕಣ್ಣುಗಳಿದ್ದಂತೆ. ಇವುಗಳ ಕಾಲಘಟ್ಟ ಬೇರೆ ಬೇರೆಯಾಗಿದ್ದರೂ, ಸಮಾಜ ಪರಿವರ್ತನೆಯ ಉದ್ದೇಶ ಒಂದೇ ಆಗಿವೆ.
ವಚನ, ದಾಸ ಸಾಹಿತ್ಯ ಹಾಗೂ ತತ್ವಪದ ಸಾಹಿತ್ಯ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ಸತ್ಸಮಾಜ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿವೆ. ವಚನಕಾರರಾಗಲೀ, ದಾಸರಾಗಲೀ, ತತ್ವಪದಕಾರರಾಗಲೀ ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ಪದವಿ ಪಡೆದವರಲ್ಲ. ಜನರ ಭಾವನೆಗಳನ್ನು, ಅವರು ದಿನನಿತ್ಯ ಅನುಭವಿಸುತ್ತಿದ್ದ ಸಂಕಟಗಳನ್ನು ತಮ್ಮ ವಸ್ತುವಾಗಿ ಇರಿಸಿಕೊಂಡು ವಚನ ಹಾಗೂ ದಾಸ, ತತ್ವಪದಗಳನ್ನು ರಚನೆ ಮಾಡಿದ್ದಾರೆ.
ವಚನ, ದಾಸ ಹಾಗೂ ತತ್ವಪದಗಳಲ್ಲಿರುವ ಸತ್ವ ಹಾಗೂ ಸತ್ಯದಿಂದ ಕೂಡಿರುವ ವಿಚಾರಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ರಾಜ್ಯಮಟ್ಟದ ಸಮ್ಮೇಳನದ ಮೂಲಕ ಇಂದಿನ ಸಮಾಜಕ್ಕೆ ತಿಳಿಸುವ ಪ್ರಮಾಣಿಕ ಪ್ರಯತ್ನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.