ಶಹಾಬಾದ: ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಪಿಎಸ್‍ಐ ಸುವರ್ಣಾ ಮಲಶೆಟ್ಟಿ ಹೇಳಿದರು.
ಅವರು ಭಂಕೂರ ಗ್ರಾಮದ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬಿಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿ ಶುಭನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಪದವಿ ಕಾಲೇಜಿನ ಪ್ರಾಂಶುಪಾಲ ಪಿ.ಎಸ್.ಕೊಕಟನೂರ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ. ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಕಸಾಪ ಭಂಕೂರ ವಲಯದ ಅಧ್ಯಕ್ಷ ಪ್ರಕಾಶ ಪಾಟೀಲ, ವಿದ್ಯಾರ್ಥಿಗಳಿಗೆ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತಾ, ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಇದರಿಂದ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಶರಣಗೌಡ ದಳಪತಿ, ವೀಣಾ ನಾರಾಯಣ, ಮಹ್ಮದ್ ಜಾಕೀರ ಹುಸೇನ್, ಉಪನ್ಯಾಸಕರಾದ ಬಾಲರಾಜ ಮಾಚನೂರ, ಗಿರಿರಾಜ ಪವಾರ, ಪರಮೇಶ್ವರಿ ಧರಿ, ಶಾರದಾ ಹಣಮಂತ, ಶಶಿಕಾಂತ ಮಡಿವಾಳ, ಡಾ.ವಿಶ್ವನಾಥ ಬೆಲ್ಲದ್, ಮನಿಶಾ ನಾನಾಸಾಹೇಬ,ನಿಂಗಣ್ಣ ಹಣಮಂತರಾಯ ಇತರರು ಇದ್ದರು.