ವಾಡಿ: ಪಟ್ಟಣದಲ್ಲಿ ಪಿಡಬ್ಲುಡಿ ಇಲಾಖೆ ವತಿಯಿಂದ ದ್ವೀಪಥ ರಸ್ತೆ ಹಾಗೂ ಪುಟ್‌ಪಾತ್ ಅಭಿವೃದ್ಧಿ ಕಾಮಗಾರಿ ಜಾರಿಯಲ್ಲಿರುವ ಪರಿಣಾಮ ವಿಪರೀತ ಧೂಳು ಹರಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಸ್ತೆಯ ಧೂಳು ನಿಯಂತ್ರಿಸಬೇಕಾದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಉಪಾಧ್ಯಕ್ಷ ರಾಜು ಒಡೆಯರಾಜ ದೂರಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಕಾಳಜಿಯುಳ್ಳ ಜನನಾಯಕರು ಅವಶ್ಯಕ : ಡಾ.ಸಾರಂಗಧರ ಶ್ರೀಗಳು
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪಿಡಬ್ಲುಡಿ ಅಭಿಯಂತರರು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಬೇಜವಾಬ್ದಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಶ್ರೀನಿವಾಸ ಗುಡಿ ವೃತ್ತದಿಂದ ರೆಸ್ಟ್‌ಕ್ಯಾಂಪ್ ತಾಂಡಾದ ವರೆಗಿನ ಮುಖ್ಯ ರಸ್ತೆಯನ್ನು ದ್ವೀಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುತ್ತಿರುವ ಅಧಿಕಾರಿಗಳು, ಬಳಸಿದ ಮರಳು, ಜಲ್ಲಿಕಲ್ಲು, ಸಿಮೆಂಟ್ ತ್ಯಾಜ್ಯ ರಸ್ತೆಗೆ ಬಿದ್ದು ವಾಹನಗಳ ಸಂಚಾರದಿಂದ ಧೂಳು ಏಳುತ್ತಿದೆ.
ಇದರಿಂದ ರಸ್ತೆ ಬದಿಯ ನಿವಾಸಿಗಳು ಪ್ರತಿದಿನ ಬೆಳಗ್ಗೆಯಿಂದ ಸಂಜೆ ವರೆಗೆ ಧೂಳನ್ನೇ ಉಸಿರಾಡುವಂತಾಗಿದೆ. ಇದು ಜನರ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಸಂಬಂದಿಸಿದ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕೂಡಲೆ ದಿನಕ್ಕೆ ನಾಲ್ಕು ಸಮಯ ರಸ್ತೆಗೆ ನೀರು ಸಿಂಪರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ