ಆಳಂದ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯು ಅನ್ನದ ಭಾಷೆಯಾಗಿದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ ಪ್ರಾಚಾರ್ಯ ಡಾ. ರಾಜಶೇಖರ ಮಾಂಗ ಅಭಿಪ್ರಾಯಪಟ್ಟರು.
ಪಟ್ಟಣದ ಪೂಜ್ಯ ರಾಜಶೇಖರ ಮಹಾಸ್ವಾಮೀಜಿ ಬಿ ಎಡ್ ಕಾಲೇಜಿನಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಕನ್ನಡದ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಯ ಹಿಂದೆ ದೂರದೃಷ್ಟಿ ಇತ್ತು ಹೀಗಾಗಿಯೇ ಅದು ಇಂದಿಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದೆ ಅಲ್ಲದೇ ಸಾಹಿತ್ಯ, ಸಂಸ್ಕೃತಿಯ ಜೊತೆ ಜೊತೆಗೆ ಬೆಳೆದುಕೊಂಡು ಬಂದಿದೆ ಈ ನಿಟ್ಟಿನಲ್ಲಿ ಪರಿಷತ್ತಿನ ಅಧ್ಯಕ್ಷರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಇದನ್ನೂ ಓದಿ: ಸಂಸದ ಡಾ.ಉಮೇಶ ಜಾಧವ್‌ಗೆ ಗಡುವು
ವಚನ, ದಾಸ, ತತ್ವಪದ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿವೆ ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಜನಮಾನಸಕ್ಕೆ ಮತ್ತು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಅನುಚಾನವಾಗಿ ಶತಮಾನಗಳಿಂದ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿರಂಜನ ಮಹಾಸ್ವಾಮೀಜಿ ಮಾತನಾಡಿ, ಆಡು ಭಾಷೆಯಾಗಿದ್ದ ಕನ್ನಡ ಭಾಷೆಯನ್ನು ದೈವ ಭಾಷೆಯಾಗಿ ಪರಿವರ್ತಿಸಿದ ಕೀರ್ತಿ ವಚನಕಾರರರಿಗೆ ಸಲ್ಲುತ್ತದೆ. ವಚನ ಸಾಹಿತ್ಯ ಕನ್ನಡ ನಾಡಿನಲ್ಲಿ ಜನ್ಮ ತಾಳದಿದ್ದರೇ ಕನ್ನಡ ಭಾಷೆ ಬಹಳ ಹಿಂದುಳಿದಿರುತ್ತಿತ್ತು ಎಂದು ವಿಶ್ಲೇಷಿಸಿದರು.
ವೇದಿಕೆಯ ಮೇಲೆ ಬಿ.ಎಡ್ ಕಾಲೇಜ್ ಪ್ರಾಚಾರ್ಯ ಅಶೋಕರೆಡ್ಡಿ, ವಿಕೆಜಿ ಪದವಿ ಕಾಲೇಜು ಪ್ರಾಚಾರ್ಯ ಕಲ್ಯಾಣಿ ಸಾವಳಗಿ, ಪತ್ರಕರ್ತ ಪ್ರಭಾಕರ ಸಲಗರೆ, ಮಹಾದೇವ ವಡಗಾಂವ ಇದ್ದರು.
ಇದನ್ನೂ ಓದಿ: ಸ್ಲಂ ಜನಾಂದೋಲನದಿಂದ ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ
ಕಾರ್ಯಕ್ರಮದಲ್ಲಿ ಸುಧಾಕರ ಖಾಂಡೇಕರ, ಮಲ್ಲಿಕಾರ್ಜುನ ಬುಕ್ಕೆ, ಗೋವಿಂದ ಹುಸೇನಖಾನ್, ಶರಣಬಸಪ್ಪ ವಡಗಾಂವ, ಶಾಂತೇಶ ಹೂಗಾರ, ಮಲ್ಲಿನಾಥ ತುಕ್ಕಾಣೆ, ಮಹಾಂತಪ್ಪ ನಿಂಗಶೆಟ್ಟಿ, ರಾಜೇಂದ್ರ ಭಾವಿ, ಕಸಾಪ ಪದಾಧಿಕಾರಿಗಳು ಹಾಗೂ ಬಿ. ಎಡ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಸಿದ್ದಪ್ಪ ಜಮಾದಾರ ಸ್ವಾಗತಿಸಿದರೆ, ಶ್ರೀದೇವಿ ವಂದಿಸಿದರು. ಮೇಘಾ ನಿರೂಪಿಸಿದರೆ, ಆಳಂದ ಕಸಾಪ ಅಧ್ಯಕ್ಷ ಹಣಮಂತ ಶೇರಿ ಖಜೂರಿ ಅಧ್ಯಕ್ಷತೆ ವಹಿಸಿದ್ದರು.