ಬಿಜೆಪಿ ಸರ್ಕಾರ ರಚನೆ ಹಿನ್ನೆಲೆ: ಯಡಿಯೂರಪ್ಪ ಮನೆ ಮುಂದೆ ಚಿಂಚನಸೂರ್, ಗುತ್ತೇದಾರ್ ಮತ್ತಿತರರ ಸಂಭ್ರಮ

0
91

ಕಲಬುರಗಿ: ಹಂಗಾಮಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವು ವಿಶ್ವಾಸಮತ ಕಳೆದುಕೊಂಡು ಪತನಗೊಂಡಿದ್ದು, ಶೀಘ್ರ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವೇದಿಕೆ ಸಿದ್ಧಗೊಂಡಿದ್ದು, ಬುಧವಾರ ಬೆಳಿಗ್ಗೆ ಬೆಂಗಳೂರಿನ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮುಂದೆ ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಮುಂತಾದವರು ಸಂಭ್ರಮಿಸಿದರು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ತಮ್ಮ ಪತ್ನಿ ಅಮರೇಶ್ವರಿ ಚಿಂಚನಸೂರ್ ಅವರೊಂದಿಗೆ ಯಡಿಯೂರಪ್ಪ ಅವರ ನಿವಾಸದ ಮುಂದೆ ಗೆಲುವಿನ ಸಂಕೇತದೊಂದಿಗೆ ಸಂಭ್ರಮಪಟ್ಟರು. ಇನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರೂ ಸಹ ಯಡಿಯೂರಪ್ಪ ಅವರ ನಿವಾಸದ ಮುಂದೆ ಸಂತೋಷದಿಂದ ಓಡಾಡುತ್ತ ಬಿಜೆಪಿ ಸರ್ಕಾರ ರಚನೆಯ ಕುರಿತು ಸಂತೋಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇನ್ನು ಪೇಜಾವರ ಶ್ರೀ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಮುಂತಾದವರು ಯಡಿಯೂರಪ್ಪ ಅವರ ನಿವಾಸದ ಮುಂದೆ ಸಿಹಿ ವಿನಿಮಯಿಸಿಕೊಂಡು ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕಿ ಶ್ರೀಮತಿ ಮಾಳವಿಕಾ ಅವಿನಾಶ್ ಅವರೂ ಸಹ ಸಿಹಿ ತಿಂದು ಜಿಲ್ಲೆಯ ಕಾರ್ಯಕರ್ತರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಇದ್ದಾಗ ಮಾಲಿಕಯ್ಯ ಗುತ್ತೇದಾರ್ ಹಾಗೂ ಬಾಬುರಾವ್ ಚಿಂಚನಸೂರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವುದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ್ ಖರ್ಗೆಯವರನ್ನು ಸೋಲಿಸುವುದು ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದು ಮುಂತಾದ ಮೂರು ಪ್ರಮುಖ ಗುರಿಗಳನ್ನು ಹೊಂದಿದ್ದರು. ಅದೇ ರೀತಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ಅವರನ್ನು ಸೆಳೆದು ಬಿಜೆಪಿಗೆ ಕರೆತಂದು ಮಲ್ಲಿಕಾರ್ಜುನ್ ಖರ್ಗೆಯವರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಆಪರೇಷನ್ ಕಮಲ್ ಕಾರ್ಯಾಚರಣೆ ಡಾ. ಉಮೇಶ್ ಜಾಧವ್ ಅವರಿಂದಲೇ ಆರಂಭವಾಗಲು ಕಾರಣವಾಯಿತು.

ಮಾಜಿ ಸಚಿವ ಗುತ್ತೇದಾರ್ ಹಾಗೂ ಚಿಂಚನಸೂರ್ ಅವರು ಅಂದುಕೊಂಡಂತೆ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯವರು ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿತು. ಈಗ ಕುಮಾರಸ್ವಾಮಿ ಸರ್ಕಾರ ಪತನಗೊಂಡಿದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಲ್ಲಿ ಅವರ ಮೂರು ಆಶಯಗಳು ಇತ್ಯರ್ಥಗೊಂಡಂತೆ ಆಗುತ್ತದೆ. ಅದಕ್ಕಾಗಿಯೇ ಇಬ್ಬರು ನಾಯಕರು ಯಡಿಯೂರಪ್ಪ ಅವರ ನಿವಾಸದಲ್ಲಿ ಸಂಭ್ರಮದಿಂದ ಓಡಾಡುತ್ತಿರುವುದು ಕಂಡುಬಂತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here